ಭಾರಿ ಮಳೆ: ಕುಸಿಯುವ ಭೀತಿಯಲ್ಲಿ ಬೆಳ್ಕಲ್ ಶಾಲಾ ಸಂಪರ್ಕ ಸೇತುವೆ!

KannadaprabhaNewsNetwork | Published : Jul 5, 2024 12:54 AM

ಸಾರಾಂಶ

ಪಶ್ಚಿಮ ಘಟ್ಟ ಪ್ರದೇಶಗಳಿಂದ ಹರಿದು ಬಂದ ನೀರಿನ ರಭಸಕ್ಕೆ, ಸೇತುವೆಯ ಅಡಿಪಾಯ ಕೊಚ್ಚಿ ಹೋಗಿದ್ದು, ಕಂಬಗಳು ವಾಲಿಕೊಂಡಿವೆ. ಸೇತುವೆಯ ಮೇಲ್ಭಾಗದಲ್ಲಿಯೂ ಅನೇಕ ಕಡೆ ಬಿರುಕು ಬಿಟ್ಟಿದೆ.

ಕನ್ನಡಪ್ರಭ ವಾರ್ತೆ ಕುಂದಾಪುರ

ಜಡ್ಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೇಡಿಗುಂಡಿ, ವಾಟೆಗುಂಡಿಯ ಜನತೆಯ ಸಂಪರ್ಕ ಕೊಂಡಿಯಾಗಿರುವ ಬೆಳ್ಕಲ್ ಶಾಲೆಯ ಮುಂಭಾಗದ ಕಿರು ಸೇತುವೆ ನೀರಿನ ರಭಸಕ್ಕೆ ಕುಸಿಯುವ ಭೀತಿ ಉಂಟಾಗಿದೆ.ಕಳೆದ 3-4 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶಗಳಿಂದ ಹರಿದು ಬಂದ ನೀರಿನ ರಭಸಕ್ಕೆ, ಸೇತುವೆಯ ಅಡಿಪಾಯ ಕೊಚ್ಚಿ ಹೋಗಿದ್ದು, ಕಂಬಗಳು ವಾಲಿಕೊಂಡಿವೆ. ಸೇತುವೆಯ ಮೇಲ್ಭಾಗದಲ್ಲಿಯೂ ಅನೇಕ ಕಡೆ ಬಿರುಕು ಬಿಟ್ಟಿದೆ. ದಿನನಿತ್ಯ ಸುತ್ತ-ಮುತ್ತಲಿನ ಪ್ರದೇಶಗಳಿಂದ ಬೆಳ್ಕಲ್ ಶಾಲೆ, ಅಂಗನವಾಡಿಗೆ ಹೋಗುವ ಮಕ್ಕಳಿಗೆ ಹಾಗೂ ದೈನಂದಿನ ಕೆಲಸ ಕಾರ್ಯಗಳಿಗಾಗಿ ತಿರುಗಾಡುವ ಸ್ಥಳೀಯರಿಗೆ ಇದೇ ಪ್ರಮುಖ ಸಂಪರ್ಕ ಸೇತುವೆಯಾಗಿದ್ದು, ಸೇತುವೆ ಮಳೆಯ ರಭಸಕ್ಕೆ ಕುಸಿದುಬಿದ್ದಲ್ಲಿ ಈ ಭಾಗದ ಜನಸಂಪರ್ಕಕ್ಕೆ ತೊಡಕಾಗುವ ಸಾಧ್ಯತೆಗಳಿದೆ.

ಶಾಲೆಯ ಮುಂಭಾಗದಲ್ಲಿಯೇ ಹರಿದು ಹೋಗುವ ನದಿಗೆ ಹೊಂದಿಕೊಂಡಂತೆ ಬಿರುಕುಗಳು ಕಾಣಿಸಿಕೊಂಡಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಶಾಲೆಗೂ ಕೂಡ ಅಪಾಯ ಎದುರಾಗುವ ಸಾಧ್ಯತೆ ಇದೆ ಎನ್ನುವ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಜಡ್ಕಲ್ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸತೀಶ್ ತೋಳಾರ್, ಗ್ರಾಮ ಪಂಚಾಯಿತಿ ಸದಸ್ಯ ಶ್ರೀನಿವಾಸ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಸೇತುವೆ ಕುಸಿಯುವ ಭೀತಿ ಇರುವುದರಿಂದ ಶಾಲಾ ಮಕ್ಕಳ ಪೋಷಕರಲ್ಲಿ ಭಯದ ವಾತಾವರಣ ಉಂಟಾಗಿದ್ದು, ಸೇತುವೆಯ ದುರಸ್ತಿ ಅಥವಾ ಪರ್ಯಾಯ ವ್ಯವಸ್ಥೆಗಾಗಿ ತುರ್ತು ಕ್ರಮ ಕೈಗೊಳ್ಳುವಂತೆ ವಾಸುದೇವ ಮುದೂರು ಅವರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

----ದಶಕಗಳ ಹಿಂದೆ ಶೇಡಿಗುಂಡಿಯ ಭಾಗದ ಜನರಿಗೆ ಸಂಪರ್ಕ ಬೆಸೆಯುವ ಏಕೈಕ ಮಾರ್ಗ ಇದಾಗಿದೆ. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಹೋರಾಟದ ಫಲವಾಗಿ ನಿರ್ಮಾಣಗೊಂಡ ಈ ಸೇತುವೆ ಈ ಭಾಗದ ಜನರ ಪ್ರಮುಖ ಸಂಪರ್ಕ ಕೊಂಡಿಯಾಗಿದೆ. ಇದಕ್ಕೆ ಅಪಾಯ ಉಂಟಾದಲ್ಲಿ ಸ್ಥಳೀಯರಿಗೆ ಭಾರಿ ತೊಂದರೆಯಾಗುತ್ತದೆ.

। ವಾಸುದೇವ ಮುದೂರು, ಜಿಲ್ಲಾ ಸಂಘಟನಾ ಸಂಚಾಲಕ ದಸಂಸ

Share this article