ಧಾರಾಕಾರ ಮಳೆಗೆ ರಾಣಿಬೆನ್ನೂರು ಪೊಲೀಸ್‌ ಠಾಣೆಗೆ ನುಗ್ಗಿದ ನೀರು

KannadaprabhaNewsNetwork |  
Published : Jun 07, 2026, 02:15 AM IST
ಎಚ್‌06-ಆರ್‌ಎನ್‌ಆರ್1ಎ: | Kannada Prabha

ಸಾರಾಂಶ

ರಾಣಿಬೆನ್ನೂರು ನಗರದಲ್ಲಿ ಶನಿವಾರ ಸಂಜೆ ಸುರಿದ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಚರಂಡಿ ನೀರು ರಸ್ತೆ ಮೇಲೆಯೇ ಹರಿದಿದೆ. ಹಲವು ಮನೆ, ಅಂಗಡಿ ಮುಂಗಟ್ಟುಗಳು, ಗ್ರಾಮೀಣ ಪೊಲೀಸ್‌ ಠಾಣೆಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ. ಇದರಿಂದ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.

ರಾಣಿಬೆನ್ನೂರು: ನಗರದಲ್ಲಿ ಶನಿವಾರ ಸಂಜೆ ಸುರಿದ ಭಾರೀ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ಚರಂಡಿ ನೀರು ರಸ್ತೆ ಮೇಲೆಯೇ ಹರಿದಿದೆ. ಹಲವು ಮನೆ, ಅಂಗಡಿ ಮುಂಗಟ್ಟುಗಳು, ಗ್ರಾಮೀಣ ಪೊಲೀಸ್‌ ಠಾಣೆಗೆ ನೀರು ನುಗ್ಗಿದ್ದು ಅವಾಂತರ ಸೃಷ್ಟಿಯಾಗಿದೆ. ಇದರಿಂದ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ ಭುಗಿಲೆದ್ದಿದೆ.ಸಂಜೆ 5 ಗಂಟೆ ಸುಮಾರಿಗೆ ಗುಡುಗು ಸಹಿತವಾಗಿ ಸುರಿದ ಮಳೆಯಿಂದ ನಗರದ ಪ್ರಮುಖ ಪ್ರದೇಶಗಳಾದ ಎಮ್.ಜಿ. ರಸ್ತೆ, ದರ್ಗಾ ಸರ್ಕಲ್, ಮೇಡ್ಲೇರಿ ರಸ್ತೆ, ಹಲಗೇರಿ ರಸ್ತೆ ಹಾಗೂ ಹಳೇ ಪಿ.ಬಿ.ರಸ್ತೆಯಲ್ಲಿ ಕಾಲುವೆಗಳು ತುಂಬಿ ಹರಿದ ಪರಿಣಾಮ ಮಳೆನೀರು ರಸ್ತೆಗಳಲ್ಲಿ ಸಾಗರದಂತೆ ಹರಿಯಿತು. ವಾಹನ ಸಂಚಾರಕ್ಕೂ ತೀವ್ರ ಅಡಚಣೆ ಉಂಟಾಗಿ ಜನರು ಸಂಕಷ್ಟ ಅನುಭವಿಸಿದರು.ನಗರದ ರಾಷ್ಟ್ರೀಯ ಹೆದ್ದಾರಿ ಹಲಗೇರಿ ರಸ್ತೆಯ ಅಂಡರ್ ಬ್ರಿಡ್ಜನಲ್ಲಿ ನೀರು ತುಂಬಿಕೊಂಡ ಪರಿಣಾಮ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ವಿದ್ಯಾನಗರ, ಚನ್ನೇಶ ನಗರ, ಗೌರಿಶಂಕರ, ಉಮಾಶಂಕರ, ಮೃತ್ಯುಂಜಯ ನಗರ, ಕುರುಬಗೇರಿ ಕ್ರಾಸ್, ಜಕತಿಕಟ್ಟಿ, ಹಳೆ ಅಂತರವಳ್ಳಿ ರಸ್ತೆ, ಈರುಳ್ಳಿ ಮಾರುಕಟ್ಟೆ, ನೆಹರು ಮಾರುಕಟ್ಟೆ ಹಾಗೂ ಬೆಣ್ಣೆ ಮಾರುಕಟ್ಟೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಕಾಲುವೆಗಳು ಉಕ್ಕಿ ಹರಿದು ಮಳೆನೀರು ರಸ್ತೆಗಳ ಮೇಲೆ ಆವರಿಸಿತು.ನೆಹರು ಮಾರುಕಟ್ಟೆಯ ದುರ್ಗಾ ಸರ್ಕಲ್ ವ್ಯಾಪ್ತಿಯ ಫುಟ್‌ಪಾತ್ ಅಂಗಡಿಗಳಿಗೆ ನೀರು ನುಗ್ಗಿ, ವ್ಯಾಪಾರಸ್ಥರ ಸಾಮಾನುಗಳು ನೀರಿನಲ್ಲಿ ತೇಲಿ ಹೋಗಿದ್ದು, ವ್ಯಾಪಾರಿಗಳು ತಮ್ಮ ವಸ್ತುಗಳನ್ನು ರಕ್ಷಿಸಲು ಹರಸಾಹಸ ಪಡಬೇಕಾಯಿತು. ಇನ್ನೂ ರಾಜಾಕಾಲುವೆ ತುಂಬಿ ಹರಿದ ಪರಿಣಾಮ ಮೇಡ್ಲೇರಿ ರಸ್ತೆಯ ಮೇಲೂ ನೀರು ನಿಂತು ಸಂಚಾರಕ್ಕೆ ಅಡಚಣೆ ಉಂಟಾಯಿತು. ನಗರದ ಹಲಗೇರಿ ಕ್ರಾಸ್ ಬಳಿಯ ನಗರಸಭೆ ಮಳಿಗೆಗಳಿಗೆ ರಾಜಾಕಾಲುವೆ ನೀರು ತುಂಬಿಕೊಂಡ ಪರಿಣಾಮ ಅಂಗಡಿಕಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು.ನಗರಸಭೆ ವಿರುದ್ಧ ಜನರ ಆಕ್ರೋಶ: ಮಳೆಯ ಮುನ್ನವೇ ಕಾಲುವೆಗಳ ಸ್ವಚ್ಛತೆ ಮತ್ತು ನಿರ್ವಹಣೆ ಕೈಗೊಳ್ಳಬೇಕಾಗಿದ್ದ ನಗರಸಭೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಈ ಪರಿಸ್ಥಿತಿ ಉಂಟಾಗಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿ ವರ್ಷ ಮಳೆಯಾದಾಗ ಇದೇ ಸಮಸ್ಯೆ ಮರುಕಳಿಸುತ್ತಿದ್ದರೂ ಶಾಶ್ವತ ಪರಿಹಾರ ಕಂಡುಕೊಳ್ಳದಿರುವುದು ಅಧಿಕಾರಿಗಳ ವೈಫಲ್ಯವನ್ನು ತೋರಿಸುತ್ತದೆ ಎಂದು ನಾಗರಿಕರು ಕಿಡಿಕಾರಿದ್ದಾರೆ. ತಕ್ಷಣವೇ ಕಾಲುವೆಗಳ ದುರಸ್ತಿ, ನೀರು ಹರಿವ ವ್ಯವಸ್ಥೆ ಸುಧಾರಣೆ ಹಾಗೂ ನಗರದಲ್ಲಿ ಸಮರ್ಪಕ ಮಳೆನೀರು ನಿರ್ವಹಣೆ ಕೈಗೊಳ್ಳುವಂತೆ ಸಾರ್ವಜನಿಕರು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಟ್ಕಳದಲ್ಲಿ ಅರ್ಧ ತಾಸು ಸತತ ಮಳೆ: ಹೊಳೆಯಾದ ಮುಖ್ಯರಸ್ತೆ
ಯಡ್ತಾರೆ-ಕಬ್ಬರ್ಗಿಗೆ ರಸ್ತೆ, ಬಸ್ ಸೌಕರ್ಯ ಕಲ್ಪಿಸಲು ಒತ್ತಾಯ