ಬೆಂಗಳೂರು : ರಾಜಧಾನಿ ಬೆಂಗಳೂರು ಶುಕ್ರವಾರ ಅಕ್ಷರಶಃ ಮಲೆನಾಡಿನಂತಾಗಿತ್ತು. ಇಡೀ ದಿನ ನಗರದಾದ್ಯಂತ ಜಿಟಿ-ಜಿಟಿ ಮಳೆ ಸುರಿದಿದೆ.
ಕಳೆದ ಮೂರ್ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಶುಕ್ರವಾರವೂ ನಗರದಲ್ಲಿ ಮಳೆ ಮುಂದುವರೆದಿದೆ. ನಗರದಾದ್ಯಂತ ಶುಕ್ರವಾರ ಸಾಧಾರಣ ಮಳೆಯಾಗಿದೆ. ಆದರೆ, ಬೆಳಗ್ಗೆಯಿಂದ ರಾತ್ರಿಯ ವರೆಗೂ ಮೋಡ ಕವಿದ ವಾತಾವರಣವಿತ್ತು. ಆಗಾಗ ನಗರದಲ್ಲಿ ಜಿಟಿ-ಜಿಟಿ ಮಳೆ ಸುರಿಯಿತು. ಜನರು ಮನೆಯಿಂದ ಹೊರಗೆ ಹೋಗದ ಪರಿಸ್ಥಿತಿ ನಿರ್ಮಾಣಗೊಂಡಿತ್ತು.
ಚಳಿ ವಾತಾವರಣ
ಸಣ್ಣ ಪ್ರಮಾಣದ ಮಳೆ ಆಗುತ್ತಿರುವುದು ಮತ್ತು ಮೋಡ ಕವಿದ ವಾತಾವರಣ ಇರುವುದರಿಂದ ನಗರದಲ್ಲಿ ಚಳಿ ವಾತಾವರಣ ಕಂಡು ಬಂದಿದೆ. ನಗರದಲ್ಲಿ ಶುಕ್ರವಾರ 20.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಜುಲೈನಲ್ಲಿ 19.9 ವಾಡಿಕೆ ಕನಿಷ್ಠ ಉಷ್ಣಾಂಶವಾಗಿದ್ದು, ಅದಕ್ಕಿಂತ 1.3 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ಉಷ್ಣಾಂಶವೇ ಇದೆ. ಆದರೆ, ಗರಿಷ್ಠ ಉಷ್ಣಾಂಶದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಶುಕ್ರವಾರ 23.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. 28.3 ವಾಡಿಕೆಯಾಗಿದ್ದು, ಅದಕ್ಕಿಂತ ಕಡಿಮೆ ಗರಿಷ್ಠ ಉಷ್ಣಾಂಶ ನಗರದಲ್ಲಿ ದಾಖಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮರ ಧರೆಗೆ
ಮಳೆಯಿಂದ ನಗರದಲ್ಲಿ ಅಲ್ಲಲ್ಲಿ ಮರಗಳು ಧರೆಗೆ ಉರುಳುವ ಪ್ರಕರಣ ನಿರಂತವಾಗಿವೆ. ಶುಕ್ರವಾರ ಬೆಳಗಿನ ಜಾವ ಶೇಷಾದ್ರಿಪುರದ 1ನೇ ಮುಖ್ಯ ರಸ್ತೆಯಲ್ಲಿ ಭಾರೀ ಗಾತ್ರದ ಮಳೆ ಬಿದ್ದ ಪರಿಣಾಮ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ಬಿಬಿಎಂಪಿ ಅರಣ್ಯ ವಿಭಾಗ ಹಾಗೂ ಸಂಚಾರಿ ಪೊಲೀಸರು ಮರ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಮರ ಬಿದ್ದ ಪರಿಣಾಮ ವಿದ್ಯುತ್ ತಂತಿ ಹರಿದು ಅಲ್ಲಿನ ನಿವಾಸಿಗಳು ಸಮಸ್ಯೆ ಎದುರಿಸಿದರು.
ಶುಕ್ರವಾರ ನಗರದಲ್ಲಿ ಸರಾಸರಿ 1.8 ಮಿ.ಮೀ ಮಳೆಯಾಗಿದೆ. ನಗರದ ಯಾವುದೇ ಭಾಗದಲ್ಲಿ ಒಂದು ಸೆಂ.ಮೀ.ಗಿಂತ ಹೆಚ್ಚಾಗಿಲ್ಲ. ಶನಿವಾರವೂ ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ,