- 4 ತಾಲೂಕುಗಳಲ್ಲಿ ಮುಂದುವರಿದ ಮಳೆ । ಇನ್ನುಳಿದ ತಾಲೂಕುಗಳಲ್ಲಿ ತಗ್ಗಿದ ಆರ್ಭಟ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜಿಲ್ಲೆಯ ಮಲೆನಾಡಿನ ನಾಲ್ಕು ತಾಲೂಕುಗಳು ಹೊರತುಪಡಿಸಿ ಇನ್ನುಳಿದ ಐದು ತಾಲೂಕುಗಳಲ್ಲಿ ಭಾನುವಾರ ಮಳೆಯ ಪ್ರಮಾಣ ಇಳಿಮುಖವಾಗಿತ್ತು. ಆದರೆ, ಗಾಳಿ ಅಬ್ಬರ ಜೋರಾಗಿದೆ. ಹಲವೆಡೆ ಮರಗಳು, ವಿದ್ಯುತ್ ಕಂಬಗಳು ಧರೆಗುರುಳುತ್ತಿರು ವುದರಿಂದ ಮನೆಯಿಂದ ಹೊರ ಹೋಗಲು ಜನರು ಆತಂಕಪಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಶನಿವಾರ ಇಡೀ ರಾತ್ರಿಯಿಂದ ಭಾನುವಾರ ಮುಂಜಾನೆವರೆಗೆ ಮಲೆನಾಡಿನಲ್ಲಿ ಧಾರಾಕಾರ ಮಳೆ ಸುರಿದ ಪರಿಣಾಮ ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯುತ್ತಿವೆ. ನದಿ ಪಾತ್ರಗಳಲ್ಲಿರುವ ತಗ್ಗಿನ ಪ್ರದೇಶಗಳಲ್ಲಿ ನೀರು ಆವರಿಸಿಕೊಂಡಿದೆ. ಶೃಂಗೇರಿ ಪಟ್ಟಣಕ್ಕೆ ಜಲ ದಿಗ್ಭಂಧನವಾಗುವ ಆತಂಕ ಎದುರಾಗಿದೆ. ಇಲ್ಲಿನ ಕುರುಬಗೇರಿ, ವಿದ್ಯಾರಣ್ಯ ಪುರ ರಸ್ತೆಗಳು ಜಲಾವೃತವಾಗಿವೆ. ಶೃಂಗೇರಿ ದೇಗುಲಕ್ಕೆ ಬರುವ ಭಕ್ತರು ವಾಹನಗಳು ಪಾರ್ಕಿಂಗ್ ಮಾಡುವ ಗಾಂಧಿ ಮೈದಾನದಲ್ಲೂ ನೀರು ತುಂಬಿಹೋಗಿದ್ದು, ರಾತ್ರಿ ಹೊತ್ತಿನಲ್ಲಿ ಕೆಲವು ಕಾರ್‌ಗಳು ನದಿ ನೀರಿನಲ್ಲಿದ್ದವು.ಶೃಂಗೇರಿ ತಾಲೂಕಿನ ನೆಮ್ಮಾರ್ ಬಳಿ ಭೂ ಕುಸಿತ, ಕೊಪ್ಪ ತಾಲೂಕಿನಲ್ಲೂ ಮಳೆ ಮುಂದುವರಿದಿದ್ದು, ನಾಗಲಾಪುರ ಗ್ರಾಮದಲ್ಲಿ ತುಂಗಾ ನದಿ ತುಂಬಿ ಹರಿದು ಸಮೀಪದ ಭತ್ತದ ಗದ್ದೆಗಳು ಜಲಾವ್ರತವಾಗಿದ್ದವು. ಹರಿಹರಪುರದ ಮಠದ ಮೆಟ್ಟಿಲು ಸಮೀಪಕ್ಕೆ ನೀರು ಬಂದಿತ್ತು. ಕಳಸ ತಾಲೂಕಿನಲ್ಲಿ ಬಿಡುವಿಲ್ಲದೆ ಮಳೆ ಸುರಿಯುತ್ತಿದೆ. ಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ ಮಳೆ ಮುಂದುವರಿದಿದೆ. ಆದರೆ, ಚಿಕ್ಕಮಗಳೂರು ತಾಲೂಕಿನಲ್ಲಿ ಬೆಳಿಗ್ಗೆಯಿಂದಲೇ ಬಿಸಿಲು ಮೂಡಿದ್ದು, ಮಳೆ ಬಿಡುವು ನೀಡಿತ್ತು. ಎನ್.ಆರ್.ಪುರ ತಾಲೂಕಿನಲ್ಲಿ ಮಳೆ, ಬಿಸಿಲು, ಮೋಡ ಕವಿದ ವಾತಾವರಣ ಇತ್ತು. ಇನ್ನೂ ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿತ್ತು. ಭಾರೀ ಗಾಳಿ: ಜಿಲ್ಲೆಯಲ್ಲಿ ಮಳೆ ಇಳಿಮುಖವಾಗುತ್ತಿದ್ದಂತೆ ಗಾಳಿ ಆರ್ಭಟ ಜೋರಾಗಿದೆ. ಬಲವಾಗಿ ಗಾಳಿ ಬೀಸುತ್ತಿರು ವುದರಿಂದ ವಿದ್ಯುತ್ ಕಂಬಗಳು, ಮರಗಳು ಬೀಳುತ್ತಾ ಹಲವೆಡೆ ವಿದ್ಯುತ್ ಸಂಪರ್ಕ ಕಡಿದು ಹೋಗಿದೆ. ಶೃಂಗೇರಿ, ಕೊಪ್ಪ, ಕಳಸ ಹಾಗೂ ಮೂಡಿಗೆರೆ ತಾಲೂಕಿನ ಹಲವೆಡೆ ಕಳೆದ 3-4 ದಿನಗಳಿಂದ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ. ಚಾರ್ಜ್ ಮಾಡಿಕೊಳ್ಳಲು ವಿದ್ಯುತ್ ಇಲ್ಲದೆ ಮೊಬೈಲ್‌ಗಳು ಸಹ ಸ್ವಿಚ್ ಆಫ್ ಆಗಿವೆ.ಕೊಪ್ಪ ತಾಲಕಿನ ಲೋಕನಾಥಪುರ ಬಳಿ ಮರವೊಂದು ಬಿದ್ದ ಪರಿಣಾಮ, ಸಮೀಪದಲ್ಲೇ ಹಾದು ಹೋಗಿರುವ ವಿದ್ಯುತ್ ಕಂಬ ಬಿದ್ದ ಪರಿಣಾಮ ಈ ಮಾರ್ಗದಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಚಿಕ್ಕಮಗಳೂರು ನಗರದಿಂದ ಗಿರಿ ಪ್ರದೇಶಕ್ಕೆ ತೆರಳುವ ಮಾರ್ಗದ ಕೈಮರ ಚೆಕ್ ಪೋಸ್ಟ್ ಬಳಿ ಮರ ಹಾಗೂ ವಿದ್ಯುತ್ ಕಂಬ ಬಿದ್ದಿದ್ದರಿಂದ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಚಿಕ್ಕಮಗಳೂರಿನ ಬನ್ನೂರು ಗ್ರಾಮದ ಕಡ್ಡಿಪುಡಿ ಎಸ್ಟೇಟ್ ಬಳಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದು ವಾಹನಗಳ ಸಂಚಾರಕ್ಕೆ ಕೆಲ ಸಮಯ ಅಡಚಣೆಯಾಗಿತ್ತು. ಒಟ್ಟಾರೆ ಮುಂಗಾರು ಮಳೆ ಮತ್ತು ಗಾಳಿಯಿಂದ ಅನಾ ಹುತಗಳು ಹೆಚ್ಚಾಗುತ್ತಿವೆ. ಹಲವೆಡೆ ಮನೆಗಳು ಸಹ ಬೀಳುತ್ತಿವೆ.