ನರಗುಂದ ತಾಲೂಕಿನಲ್ಲಿ ರಭಸದ ಮಳೆ

KannadaprabhaNewsNetwork | Published : Apr 4, 2025 12:46 AM

ಸಾರಾಂಶ

ನರಗುಂದ ತಾಲೂಕಿನಲ್ಲಿ ಗುರುವಾರ ಬೆಳಗ್ಗೆ ಪಟ್ಟಣ ಹಾಗೂ ತಾಲೂಕಿನ ಚಿಕ್ಕನರಗುಂದ, ಹಿರೇಕೊಪ್ಪ, ಕೊಣ್ಣೂರ, ಭೈರನಹಟ್ಟಿ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ 1 ಗಂಟೆಗೂ ಹೆಚ್ಚಿನ ಸಮಯ ರಭಸದ ಮಳೆ ಸುರಿದಿದೆ.

ನರಗುಂದ: ತಾಲೂಕಿನಲ್ಲಿ ಗುರುವಾರ ಬೆಳಗ್ಗೆ ಪಟ್ಟಣ ಹಾಗೂ ತಾಲೂಕಿನ ಚಿಕ್ಕನರಗುಂದ, ಹಿರೇಕೊಪ್ಪ, ಕೊಣ್ಣೂರ, ಭೈರನಹಟ್ಟಿ ಸೇರಿದಂತೆ ಮುಂತಾದ ಗ್ರಾಮಗಳಲ್ಲಿ 1 ಗಂಟೆಗೂ ಹೆಚ್ಚಿನ ಸಮಯ ರಭಸದ ಮಳೆ ಸುರಿದಿದೆ.

ಸದ್ಯ ತಾಲೂಕಿನಲ್ಲಿ ರೈತ ಸಮುದಾಯ ಹಿಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಸೂರ್ಯಕಾಂತಿ, ಜೋಳ, ಗೋದಿ, ಕಡಲೆ, ಹತ್ತಿ ಸೇರಿದಂತೆ ಮುಂತಾದ ಬೆಳೆಗಳನ್ನು ರೈತರು ಕಟಾವು ಮಾಡುತ್ತಿದ್ದಾರೆ. ಇನ್ನು ಕೆಲವು ರೈತರು ಬೆಳೆ ಕಟಾವು ಮುಗಿಸಿ ಜಾನುವಾರುಗಳ ಮೇವು, ಹೊಟ್ಟು ಸಂಗ್ರಹ ಮಾಡಿಕೊಳ್ಳುತ್ತಿರುವ ಈ ಸಮಯದಲ್ಲಿ ಕಳೆದೊಂದು ವಾರದಿಂದ ತಾಲೂಕಿನ ಕೆಲವು ಗ್ರಾಮಗಳಲ್ಲಿ ಆಗಾಗ ಮಳೆ ಬರುತ್ತಿದೆ.

ಬೆಳೆಗಳನ್ನು ಕಟಾವು ಮಾಡಬೇಕೆಂದರೆ ಮಳೆರಾಯ ಬಿಡವು ನೀಡದ್ದರಿಂದ ಬೆಳೆ ಕಟಾವಿಗೆ ತೊಂದರೆಯಾಗಿದೆ ಎಂದು ಚಿಕ್ಕನರಗುಂದ ಗ್ರಾಮದ ರೈತ ಶಿವರಡ್ಡಿ ರಾಯರಡ್ಡಿ ಹೇಳಿದರು.

ಮಳೆಯಿಂದ ಮೇವು ರಕ್ಷಣೆ ಕಷ್ಟವಾಗಿದೆ. ಕೆಲವು ದಿನಗಳಿಂದ ಮಳೆಯಾಗುತ್ತಿರುವುದರಿಂದ ಕೆಲವು ರೈತರು ಬೆಳೆ ಕಟಾವು ಮಾಡಿ ಜಾನುವಾರುಗಳಿಗೆ ಬೇಕಾದ ಮೇವು, ಹೊಟ್ಟು ಸಂಗ್ರಹ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ಲಾಸ್ಟಿಕ್ ಹಾಳೆಯನ್ನು ಹೊಚ್ಚಿ ರಕ್ಷಣೆ ಮಾಡುವುದು ಕಂಡು ಬರುತ್ತಿದೆ.

ಗಜೇಂದ್ರಗಡದಲ್ಲಿ ಮಳೆ

ಕಳೆದ ಬಾರಿ ಅಸಮರ್ಪಕ ಮಳೆಯಿಂದ ನಿರೀಕ್ಷಿತ ಪ್ರಮಾಣದಲ್ಲಿ ಫಸಲು ಬಂದಿರಲಿಲ್ಲ. ಯುಗಾದಿ ಹಬ್ಬ ಮುಗಿದ ಹೊಸ ಸಂವತ್ಸರದಲ್ಲಿ ಗಜೇಂದ್ರಗಡ ಪಟ್ಟಣ ಸೇರಿ ತಾಲೂಕಿನ ಕೆಲ ಗ್ರಾಮಗಳಲ್ಲಿ ಅಕಾಲಿಕ ಮಳೆಯಾಗಿದೆ.

ಮುಂಗಾರು ಆರಂಭಕ್ಕೆ ಎರಡ್ಮೂರು ತಿಂಗಳಿದೆ. ಆದರೆ ತಾಲೂಕಿನ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ರೈತರು ಹಾಗೂ ಜನಸಮೂಹವು ಹವಾಮಾನ ವೈಪರೀತ್ಯದ ಪರಿಣಾಮ ಎದುರಿಸುವಂತಾಗಿದೆ. ಬುಧವಾರ ತಡರಾತ್ರಿ ಸುರಿದ ಮಳೆಗೆ ಪಟ್ಟಣದ ಕೆಲ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರಿನಿಂದಾಗಿ ಬಡಾವಣೆಯ ಬಯಲು ಜಾಗೆಯಲ್ಲಿ ಊರಿನ ಅರ್ಧದಷ್ಟು ಕಸ, ಗಲೀಜು ಬಂದಿದ್ದು ಕಂಡ ನಿವಾಸಿಗಳು ಪುರಸಭೆ ವಿರುದ್ಧ ಹಿಡಿಶಾಪ ಹಾಕಿದರು.

Share this article