ಮಲ್ಲೇಶ್ ನಾಯಕನಹಟ್ಟಿ
ಕನ್ನಡಪ್ರಭ ವಾರ್ತೆ ನಾಯಕನಹಟ್ಟಿನಾಯಕಹನಟ್ಟಿ ಹೋಬಳಿಯಲ್ಲಿ ಹಿಂಗಾರು ಮಳೆ ಆರ್ಭಟಿಸಿದ್ದು, ಶುಕ್ರವಾರ ರಾತ್ರಿ ಒಟ್ಟು 6 ಮನೆಗಳು ಕುಸಿತ, ಅಪಾರ ಬೆಳೆಹಾನಿ ಸಂಭವಿಸಿದೆ. ಗುಂತಕೋಲಮ್ಮನಹಳ್ಳಿ, ರೇಖಲಗೆರೆ ಗ್ರಾಮಗಳ ಎರಡು ಕೆರೆಗಳು ಕೋಡಿ ಬಿದ್ದಿವೆ. ಹಳ್ಳಕೊಳ್ಳಗಳು ತುಂಬಿ ಹರಿದು ಶೇಂಗಾ ಹೊಲಗಳು ನೀರಿನ ಮಡುಗಳಾಗಿ ಮಾರ್ಪಟ್ಟಿವೆ.ಮಂಗಳವಾರದಿಂದ ಶುಕ್ರವಾರದವರೆಗೆ ಎರಡು ದಿನ ಹೋಬಳಿ ವ್ಯಾಪ್ತಿಯಲ್ಲಿ ಗುಡುಗು ಸಹಿತ ಭಾರೀ ಮಳೆ ನಿರಂತರ ಸುರಿದಿದೆ. ಒಟ್ಟು 188 ಮಿಮೀ. ಮಳೆ ಬಿದ್ದಿದೆ. ಮಂಗಳವಾರ 38 ಮಿಮೀ., ಬುಧವಾರ 12 ಮಿಮೀ,. ಗುರುವಾರ 90 ಮಿಮೀ., ಶುಕ್ರವಾರ ರಾತ್ರಿ 48 ಮಿಮೀ., ಮಳೆ ಧಾರಾಕಾರವಾಗಿ ಸುರಿದಿದೆ.ಶನಿವಾರ ಬೆಳಿಗ್ಗೆ ಕೋಡಿ ಬಿದ್ದಿರುವ ರೇಖಲಗೆರೆ ಕೆರೆ ನೀರು ದಾದಾಪೀರ್ ಎಂಬ ಸಣ್ಣ ರೈತರೊಬ್ಬರ 1.23 ಎಕರೆಯಲ್ಲಿ ಕೊಯ್ಲಿಗೆ ಬಂದಿದ್ದ ಮೆಕ್ಕೆಜೋಳದ ಬೆಳೆಯನ್ನು ಆಪೋಶನ ತೆಗೆದುಕೊಂಡಿದೆ. ಬೆಳೆ ಕೈ ಸೇರುವ ಸಂಭ್ರಮದಲ್ಲಿದ್ದ ರೈತ ದಾದಾಪೀರ್ ದಿಢೀರ್ ಬೆಳೆಹಾನಿಯಿಂದಾಗಿ ದಿಕ್ಕುತೋಚದಂತಾಗಿದ್ದಾರೆ.
ಜಾಗನೂರಹಟ್ಟಿಯಲ್ಲಿ 12 ಎಕರೆಯಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಕೆ.ಪಿ. ತಿಪ್ಪೇಸ್ವಾಮಿ ಅವರು ಬೆಳೆದಿದ್ದ ಈರುಳ್ಳಿ ಬೆಳೆ ಹಾನಿಯಾಗಿದ್ದು, ₹20 ಲಕ್ಷ ಅಂದಾಜು ನಷ್ಟ ಸಂಭವಿಸಿದೆ. ಇದೇ ಗ್ರಾಮದ ರೈತ ಚಂದ್ರಶೇಖರ್ ಅವರು ಒಂದು ಎಕರೆಯಲ್ಲಿ ಬೆಳೆದಿದ್ದ ಸೇಂಟ್ ಎಲ್ಲೋ ತಳಿ ಸೇವಂತಿಗೆ ಹೂ ಕೃಷಿ ನೆಲಕಚ್ಚಿದೆ. ಗಜ್ಜುಗಾನಹಳ್ಳಿಯ ಕೆಳಕಪಿಲೆಯಲ್ಲಿನ ರೈತರಾದ ಲಕ್ಷ್ಮಕ್ಕ ಅವರ 5 ಎಕರೆ ಶೇಂಗಾ ಬೆಳೆ ಅತಿವೃಷ್ಟಿಯಿಂದ ಹಾಳಾಗಿದೆ.ಕುಸಿದ ಮನೆಗಳು
ತೊರೆಕೋನಳ್ಳಿ ಗ್ರಾಮದಲ್ಲಿ ಒಟ್ಟು ನಾಲ್ಕು ಮನೆಗಳು ಕುಸಿದಿವೆ. ನಿವಾಸಿಗಳಾದ ಏಗಪ್ಪ ತಿಪ್ಪೇರುದ್ರಪ್ಪ, ಶಾಂತವೀರಪ್ಪ ಅವರ ಮನೆಗಳು ಭಾಗಶಃ ಕುಸಿದಿವೆ. ತಿಪ್ಪೇರುದ್ರಪ್ಪ, ಉಳ್ಳಾರ್ತಿ ಕರಿಯಪ್ಪ ಎಂಬುವರ ಮನೆಗಳು ಸಂಪೂರ್ಣ ಕುಸಿದಿವೆ. ರೇಖಲಗೆರೆ ಗ್ರಾಮದಲ್ಲಿ ಜೋಗಿ ಬೋರಯ್ಯ, ಸಮೀಪದ ಹಾಯ್ಕಲ್ ಗ್ರಾಮದ ಸಣ್ಣ ಪಾಪಯ್ಯ ಎಂಬುವರ ಮನೆಗಳು ಕುಸಿದಿದ್ದು, ಒಂದೇ ರಾತ್ರಿ ಹೋಬಳಿಯ ವಿವಿಧ ಗ್ರಾಮದಲ್ಲಿ ಒಟ್ಟು 6 ಮನೆಗಳು ಹಾನಿಗೊಳಗಾಗಿವೆ.ಕೊಳೆರೋಗ ಉಲ್ಬಣ
ಹೋಬಳಿ ವ್ಯಾಪ್ತಿಯಲ್ಲಿ 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆಯಾಗಿದೆ. ಸ್ವಲ್ಪ ವಿಳಂಬ ಮಾಡಿ ಬಿತ್ತನೆ ನಡೆಸಿರುವ ಸುಮಾರು 9 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಶೇಂಗಾ ಬೆಳೆಯಲ್ಲಿ ಕೊಳೆರೋಗ ಉಲ್ಬಣಿಸಿದೆ. ಹೆಚ್ಚುತ್ತಿರುವ ತೇವಾಂಶದಿಂದಾಗಿ ಕೊಳೆ ರೋಗ ಶೇಂಗಾ ಇಳವರಿಯ ಮೇಲೆ ವ್ಯತಿರಿಕ್ತ ಪರುಣಾಮಕ್ಕೆ ಕಾರಣವಾಗುತ್ತಿದೆ.ಕೋಡಿ ಬೀಳುವ ನಿರೀಕ್ಷೆಯಲ್ಲಿ ಐತಿಹಾಸಿಕ ಕೆರೆಗಳು
ನಿರಂತರ ಮಳೆಯಿಂದಾಗಿ ಇಲ್ಲಿನ ಐತಿಹಾಸಿಕ ಚಿಕ್ಕಕೆರೆ, ಹಿರೇಕೆರೆಗಳು ಕೋಡಿ ಬೀಳುವ ನಿರೀಕ್ಷೆ ಇದೆ. ಒಟ್ಟು 808 ಎಕರೆ ವಿಸ್ತೀರ್ಣ ಹೊಂದಿರುವ ಹಿರೇಕೆರೆ 18 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಶನಿವಾರ ಹಿರೇಕರೆಯಲ್ಲಿ ಒಟ್ಟು 13 ಅಡಿಯಷ್ಟು ನೀರಿನ ಸಂಗ್ರಹ ಆಗಿದ್ದು, ಒಳ ಹರಿವು ಹೆಚ್ಚಿತ್ತು. ಪಟ್ಟಣಕ್ಕೆ ಹೊಂದಿಕೊಂಡಿರುವ ಚಿಕ್ಕಕೆರೆ 387 ಎಕರೆಯಷ್ಟು ವಿಸ್ತೀರ್ಣ ಹೊಂದಿದ್ದು, 16 ಅಡಿಯಷ್ಟು ನೀರಿನ ಸಂಗ್ರಹ ಸಾಮರ್ಥ್ಯ ಹೊಂದಿದೆ. ಹತ್ತು ವರ್ಷಗಳ ನಂತರ ಚಿಕ್ಕಕೆರೆಯಲ್ಲಿ 12 ಅಡಿಯಷ್ಟು ನೀರು ಸಂಗ್ರಹಗೊಂಡಿದ್ದು, ಮಳೆ ಮುಂದುವರಿದರೆ ಕೋಡಿ ಬೀಳುವ ನಿರೀಕ್ಷೆ ಇದೆ. ಬಹು ವರ್ಷಗಳ ನಂತರ ಚಿಕ್ಕಕೆರೆಯಲ್ಲಿ ಸಂಗ್ರಹಗೊಂಡಿರುವ ಜಲರಾಶಿ ಜನಾಕರ್ಷಣೆಗಳಿಸಿಕೊಂಡಿದೆ.ಈ ಸಲ ಮುಂಗಾರು, ಹಿಂಗಾರು ಮಳೆ, ಅತಿವೃಷ್ಟಿ ಸೃಷ್ಟಿಸಿವೆ. ಇದರಿಂದ ಹೋಬಳಿಯಲ್ಲಿ ಬೆಳೆ-ಮನೆ ಹಾನಿ ಹೆಚ್ಚಿದೆ. ಆದರೆ, ಇಲ್ಲಿನ ಕಂದಾಯ ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಬೆಳೆ, ಮನೆ ಹಾನಿ ಕುರಿತು ಸಮೀಕ್ಷೆ ನಡೆಸದೇ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಅಧಿಕಾರಿಗಳ ಅಸಡ್ಡೆಯಿಂದಾಗಿ ಬಡ ಜನರು ನೆರೆ ಪರಿಹಾರದಿಂದ ವಂಚಿತರಾಗುವಂತಾಗಿದೆ. ತಹಸೀಲ್ದಾರ್ ಕೂಡಲೇ ಹೋಬಳಿಯಲ್ಲಿ ಮಳೆ-ಬೆಳೆ ಹಾನಿ ಕುರಿತು ವಿಶೇಷ ಸಭೆ ನಡೆಸಿ ಜನರಿಗೆ ನ್ಯಾಯ ಒದಗಿಸಬೇಕು.
ಬಿ.ಟಿ.ಪ್ರಕಾಶ ಅಧ್ಯಕ್ಷ ರಾಷ್ಟೀಯ ಕಿಸಾನ್ ಸಂಘ ಹೋಬಳಿ ಘಟಕಚಿಕ್ಕಕೆರೆ ಕೋಡಿ ಬಿದ್ದರೆ ನೀರು ಪಟ್ಟಣದತ್ತ ನೆರೆ ಸೃಷ್ಟಿಸಲಿದೆ. ಕೆರೆ ಕೋಡಿಕಾಲುವೆ ಪಕ್ಕದಲ್ಲಿ ಜನರು ಮನೆಗಳನ್ನು ನಿರ್ಮಿಸಿಕೊಂಡಿರುವದರಿಂದ ನೀರು ಹರಿಯಲು ಸರಾಗವಾಗಿ ಕಾಲುವೆ ಇಲ್ಲದಂತಾಗಿದೆ. ಎನ್. ಮಹದೇವಪುರ ಬಳಿಯ ಚೆಕ್‌ಡ್ಯಾಂ ಬಳಿ ಮಣ್ಣು ಕೊಚ್ಚಿಹೋಗಿದೆ. ಅಲ್ಲೂ ದುರಸ್ತಿ ಮಾಡಬೇಕಿದೆ. ಆದರೆ, ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ, ಪ್ರಯೋಜನವಾಗಿಲ್ಲ.
ಎನ್. ಮಹಾಂತಣ್ಣ ಸದಸ್ಯ ಪ.ಪಂ. ನಾಯಕನಹಟ್ಟಿ