ದ.ಕ. ಜಿಲ್ಲೆಯಲ್ಲಿ ದಿನಪೂರ್ತಿ ಮಳೆ, ಗುಡ್ಡಕುಸಿತ ಭೀತಿ

KannadaprabhaNewsNetwork | Published : Jul 5, 2024 12:49 AM

ಸಾರಾಂಶ

ಮಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಅವಿರತ ಮಳೆಯಾಗಿದೆ. ದಿನಪೂರ್ತಿ ಮಳೆ, ಮೋಡ ವಾತಾವರಣ ಕಂಡುಬಂದಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಕರಾವಳಿಯಲ್ಲಿ ಮುಂಗಾರು ಮಳೆ ವೇಗ ಪಡೆದುಕೊಂಡಿದ್ದು, ಗುರುವಾರ ಇಡೀ ದಿನ ಮಳೆ ಸುರಿದಿದೆ. ಭಾರತೀಯ ಹವಾಮಾನ ಇಲಾಖೆ ಜು.5ರಿಂದ 8ರ ವರೆಗೆ ಮೂರು ದಿನಗಳ ಕಾಲ ಭಾರಿ ಮಳೆಯಾಗುವ ಆರೆಂಜ್‌ ಅಲರ್ಟ್ ಘೋಷಿಸಿದೆ. ಭಾರಿ ಮಳೆ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಬೆಳ್ತಂಗಡಿ ಮತ್ತು ಬಂಟ್ವಾಳ ತಾಲೂಕುಗಳಲ್ಲಿ ಶಾಲೆಗಳಿಗೆ ಗುರುವಾರ ರಜೆ ನೀಡಲಾಗಿತ್ತು.

ಕಳೆದ ಎರಡು ದಿನಗಳಿಂದ ದ.ಕ.ಜಿಲ್ಲೆಯಲ್ಲಿ ಮಳೆ ಬಿರುಸುಗೊಂಡಿದೆ. ಗುರುವಾರವೂ ಬೆಳಗ್ಗಿನಿಂದಲೇ ನಿರಂತರ ಮಳೆ ಕಾಣಿಸಿದೆ. ಮಂಗಳೂರು ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಅವಿರತ ಮಳೆಯಾಗಿದೆ. ದಿನಪೂರ್ತಿ ಮಳೆ, ಮೋಡ ವಾತಾವರಣ ಕಂಡುಬಂದಿದೆ. ಗುಡ್ಡ ಕುಸಿತ ಭೀತಿ:

ಕರಾವಳಿಯಲ್ಲಿ ಗುಡ್ಡಕುಸಿತ, ಸಾವಿನ ಸರಣಿ ಭೀತಿಯ ನಡುವೆಯೇ ಮಂಗಳೂರಿನ ದೇರೇಬೈಲಿನಲ್ಲಿ ಗುಡ್ಡಕುಸಿತ ಉಂಟಾಗಿದೆ.

ಗುರುವಾರ ಸುರಿದ ಭಾರಿ ಮಳೆಗೆ ದೇರೇಬೈಲು ಬಳಿ ಹೊಸ ಪೆಟ್ರೋಲ್ ಪಂಪ್ ಕಾಮಗಾರಿ ಬಳಿ ಗುಡ್ಡ ಕುಸಿತ ಉಂಟಾಗಿದೆ. ಪೆಟ್ರೋಲ್ ಪಂಪ್ ನಿರ್ಮಾಣಕ್ಕಾಗಿ ಗುಡ್ಡ ಅಗೆದು ಸಮತಟ್ಟು ಮಾಡಲಾಗಿತ್ತು. ಇದೀಗ ಗುಡ್ಡ ಕುಸಿದು ಅಪಾಯದ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಮರಳಿನ ಚೀಲಗಳನ್ನು ಜೋಡಿಸಿ ಗುಡ್ಡ ಮತ್ತಷ್ಟು ಕುಸಿಯದಂತೆ ಕ್ರಮ ಕೈಗೊಳ್ಳಲಾಗಿದ್ದು, ಮಹಾನಗರ ಪಾಲಿಕೆ ಸೂಚನೆ ಮೇರೆಗೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ.

ಅಡ್ಯಾರಲ್ಲಿ ನೆರೆ ನೀರು:

ಅಡ್ಯಾರಿನಲ್ಲಿ ನೇತ್ರಾವತಿ ನದಿ ಹರಿವಿನ ಸಮೀಪವೇ ದೋಟದಲ್ಲಿ ಮನೆಗಳಿಗೆ ಕೃತಕ ನೆರೆ ಆವರಿಸಿದೆ. ಇಲ್ಲಿನ ಬೊಂಡ ಫ್ಯಾಕ್ಟರಿ ಬಳಿ ಒಳಚರಂಡಿ ಅಸಮರ್ಪಕ ವ್ಯವಸ್ಥೆಯಿಂದ ನೀರು ಹರಿಯಲು ಸಾಧ್ಯವಾಗದೆ ದೋಟದ ಮನೆಗಳಿಗೆ ನುಗ್ಗಿದೆ. ಸ್ಥಳೀಯ ವಿಕ್ರಮ್‌, ವಿಜಯ್ ಡಿಸೋಜಾ, ಮತ್ತಿತರರ ಮನೆಗಳಿಗೆ ನೆರೆ ನೀರು ಪ್ರವೇಶಿಸಿ ಆತಂಕದ ಪರಿಸ್ಥಿತಿ ತಲೆದೋರಿದೆ. 2021ರಲ್ಲಿ ಒಳಚರಂಡಿಗೆ ಶಂಕುಸ್ಥಾಪನೆ ನೆರವೇರಿಸಿದ್ದರೂ ಇದುವರೆಗೆ ಕಾಮಗಾರಿ ನಡೆದಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಬೆಳ್ತಂಗಡಿ ಗರಿಷ್ಠ ಮಳೆ: ದ.ಕ.ಜಿಲ್ಲೆಯಲ್ಲಿ ಗುರುವಾರ ಬೆಳಗ್ಗಿನ ವರೆಗೆ ಗರಿಷ್ಠ 101.8 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಜಿಲ್ಲೆಯ ದಿನದ ಸರಾಸರಿ ಮಳೆ 71 ಮಿ.ಮೀ. ಆಗಿದೆ.

ಬಂಟ್ವಾಳ 54 ಮಿ.ಮೀ, ಮಂಗಳೂರು 34.2 ಮಿ.ಮೀ, ಮಂಗಳೂರು 34.2 ಮಿ.ಮೀ, ಪುತ್ತೂರು 60.4 ಮಿ.ಮೀ, ಸುಳ್ಯ 72.2 ಮಿ.ಮೀ, ಮೂಡುಬಿದಿರೆ 57.8 ಮಿ.ಮೀ, ಕಡಬ 70.5 ಮಿ.ಮೀ, ಮೂಲ್ಕಿ 21.8 ಮಿ.ಮೀ, ಉಳ್ಳಾಲ 39.8 ಮಿ.ಮೀ. ಮಳೆ ವರದಿಯಾಗಿದೆ.

ತುಂಬೆಯಲ್ಲಿ ಎಎಂಆರ್‌ ಡ್ಯಾಂ 18.90 ಮೀಟರ್‌ ಭರ್ತಿಯಾಗಿ ಹರಿಯುತ್ತಿದೆ. ನೇತ್ರಾವತಿ ನದಿ 4.50 ಮೀಟರ್‌ನಲ್ಲಿ ಹರಿಯುತ್ತಿದೆ.

Share this article