ಕನ್ನಡಪ್ರಭ ವಾರ್ತೆ ಬೆಳಗಾವಿ
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ ನಡುಗಡ್ಡೆಯಲ್ಲಿ ಸಿಕ್ಕಿಹಾಕಿಕೊಂಡಿದ್ದ 50ಕ್ಕೂ ಅಧಿಕ ಕುಟುಂಬಗಳನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಕೃಷ್ಣಾ, ಘಟಪ್ರಭಾ, ಮಲಪ್ರಭಾ, ದೂಧ್‌ಗಂಗಾ ನದಿಗಳು ಪ್ರವಾಹಮಟ್ಟದಲ್ಲಿ ಹರಿಯುತ್ತಿರುವುದರಿಂದ ಈಗಾಗಲೇ ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ 33ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿದ್ದು, ಸಂಚಾರ ಅಸ್ತವ್ಯಸ್ತಗೊಂಡಿದೆ.
50 ಕುಟುಂಬಗಳ ರಕ್ಷಣೆ:ಕೃಷ್ಣಾ ನದಿಗೆ ಆಲಮಟ್ಟಿ ಡ್ಯಾಂನಿಂದ 2.20 ಲಕ್ಷ ಕ್ಯುಸೆಗೂ ಹೆಚ್ಚು ನೀರು ಬಿಡಲಾಗುತ್ತಿದ್ದು, ಇದರಿಂದ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಹುಲಗಬಾಳಿ ಗ್ರಾಮದ ಮಾಂಗ ಎಂಬಲ್ಲಿ 50ಕ್ಕೂ ಅಧಿಕ ಕುಟುಂಬಗಳು ನಡುಗಡ್ಡೆಯಲ್ಲಿ ಸಿಲುಕಿಕೊಂಡಿವೆ. ಅವರನ್ನು ಸ್ಥಳಾಂತರಿಸುವ ಕಾರ್ಯ ನಡೆಯುತ್ತಿದೆ. ಸದ್ಯ ಹುಲಗಬಾಳಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅವರಿಗೆ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಗಿದೆ.21 ಗ್ರಾಮಗಳಿಗೆ ಪ್ರವಾಹ ಭೀತಿ: ಇನ್ನು ಹಿಡಕಲ್, ಶಿರೂರು ಜಲಾಶಯ ಹಾಗೂ ಬಳ್ಳಾರಿ ನಾಲಾಗಳಿಂದ 40 ಸಾವಿರ ಕ್ಯುಸೆಕ್‌ಗೂ ಅಧಿಕ ನೀರು ಹಿರಿಬಿಟ್ಟ ಪರಿಣಾಮ, ಘಟಪ್ರಭಾ ಹಾಗೂ ಮಾರ್ಕಂಡೇಯ ನದಿಗಳು ತುಂಬಿ ಹರಿಯುತ್ತಿವೆ. ಹೀಗಾಗಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ 21 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ. ನದಿಪಾತ್ರದಿಂದ ದೂರವಿರುವಂತೆ ಈಗಾಗಲೇ ಜಿಲ್ಲಾಡಳಿತ ಜನರಿಗೆ ಸೂಚನೆ ನೀಡಿದೆ.ಇನ್ನು ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ರಾಯಬಾಗ ತಾಲೂಕಿನ ಬಾವನಸೌದತ್ತಿ ಗ್ರಾಮಕ್ಕೆ ಈಗಾಗಲೇ ಕೃಷ್ಣಾ ನದಿ ನೀರು ಪ್ರವೇಶವಾಗಿದೆ. ಗ್ರಾಮದ ಹೊರವಲಯದ ಸುಗಂಧಾದೇವಿ ದೇವಸ್ಥಾನ ಜಲಾವೃತವಾಗಿದೆ. ನಾಲ್ಕಕ್ಕೂ ಅಧಿಕ ಮನೆಗಳಿಗೆ ನದಿ ನೀರು ನುಗ್ಗಿದೆ.
ರಾಜ್ಯದಲ್ಲಿ ಮಳೆಗೆ 2 ಬಲಿ: ಕೆಲವೆಡೆ ಶಾಲೆಗಳಿಗೆ ರಜೆ
ಕನ್ನಡಪ್ರಭ ವಾರ್ತೆ ಬೆಂಗಳೂರುಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಬುಧವಾರ ಭಾರೀ ಗಾಳಿ ಸಹಿತ ಸಾಧಾರಣ ಮಳೆಯಾಗಿದೆ. ಮಳೆ ಸಂಬಂಧಿ ಅನಾಹುತಕ್ಕೆ ರಾಜ್ಯದಲ್ಲಿ ಮತ್ತಿಬ್ಬರು ಬಲಿಯಾಗಿದ್ದಾರೆ. ಅದೇ ರೀತಿ ಮುಂದಿನ ಒಂದೆರಡು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಹಿನ್ನೆಲೆಯಲ್ಲಿ ಉತ್ತರ ಕನ್ನಡದಲ್ಲಿ ಏಳು ತಾಲೂಕುಗಳ ಶಾಲಾ-ಕಾಲೇಜುಗಳಿಗೆ ಹಾಗೂ ಬೆಳಗಾವಿಯಲ್ಲಿ ಐದು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಕಳೆದೊಂದು ವಾರಕ್ಕೆ ಹೋಲಿಸಿದರೆ ಕರಾವಳಿ, ಮಲೆನಾಡಲ್ಲಿ ಮಳೆಯಬ್ಬರ ಕಡಿಮೆಯಾಗಿದ್ದು, ಭಾರೀ ಗಾಳಿಯಿಂದಾಗಿ ಹಲವೆಡೆ ಮರ, ವಿದ್ಯುತ್ ಕಂಬಗಳು ಮುರಿದು ಬಿದ್ದು, ಆಸ್ತಿ-ಪಾಸ್ತಿಗೆ ಹಾನಿಯಾಗಿದೆ. ಉತ್ತರ ಕನ್ನಡದ ಘಟ್ಟ ಭಾಗದಲ್ಲಿ ಉತ್ತಮ ಮಳೆಯಾಗಿದ್ದು, ಮರಬಿದ್ದು ಹಲವು ಮನೆಗಳಿಗೆ ಹಾನಿಯಾಗಿದೆ.ಇಬ್ಬರು ಬಲಿ:ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರ ತಾಲೂಕಿನ ಹಾಸಣಗಿಯಲ್ಲಿ ಬಿರುಗಾಳಿಗೆ ಮರವೊಂದು ಉರುಳಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಪರಿಣಾಮ ಬೈಕ್ ಸವಾರ ಬಾಚನಹಳ್ಳಿಯ ವಿನಯ ಮಂಜುನಾಥ ಗಾಡಿಗ (೨೬) ಎಂಬಾತ ಮೃತಪಟ್ಟಿದ್ದಾನೆ. ಇನ್ನು ಜಿಲ್ಲೆಯ ಮುಂಡುಗೋಡ ತಾಲೂಕಿನ ಮಳಗಿ ಧರ್ಮಾ ಡ್ಯಾಂ ವೀಕ್ಷಿಸಲು ಹೋಗಿದ್ದ ಯುವಕ ಮುಡಸಾಲಿ ಗ್ರಾಮದ ಶ್ರೀನಾಥ ಸೋಮಶೇಖರ ಹರಿಜನ (20) ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಈತನ ಜತೆಗಿದ್ದ ಮತ್ತೊಬ್ಬನನ್ನು ಸ್ಥಳೀಯರು ರಕ್ಷಿಸಿದ್ದಾರೆ.