ಕನ್ನಡಪ್ರಭ ವಾರ್ತೆ ಮಂಡ್ಯ
ಜಿಲ್ಲೆಯ ಹಲವು ಭಾಗಗಳಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆ, ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗಿರುವ ಬಗ್ಗೆ ವರದಿಯಾಗಿದೆ.ನಾಗಮಂಗಲ ತಾಲೂಕಿನಲ್ಲಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದ್ದರೆ, ಮದ್ದೂರು, ಮಳವಳ್ಳಿ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆ, ಮಂಡ್ಯದಲ್ಲಿ ಉತ್ತಮ ಮಳೆಯಾಗಿದೆ. ಇನ್ನು ಪಾಂಡವಪುರದಲ್ಲಿ ಸಾಧಾರಣ ಮಳೆಯಾಗಿರುವುದಾಗಿ ತಿಳಿದುಬಂದಿದೆ.
ಶನಿವಾರ ಸಂಜೆ 6 ಗಂಟೆಯಿಂದ ಮಂಡ್ಯ ಸೇರಿದಂತೆ ವಿವಿಧ ತಾಲೂಕುಗಳಲ್ಲಿ ಶುರುವಾದ ಮಳೆ ಆರಂಭದಲ್ಲಿ ಬಿರುಸನ್ನು ಪಡೆದುಕೊಂಡಿತ್ತು. ನಂತರದಲ್ಲಿ ದಟ್ಟವಾದ ಮೋಡಗಳು ಮುಂದೆ ಸಾಗಿದ್ದರಿಂದ ಮಳೆಯ ಪ್ರಮಾಣವೂ ಕ್ಷೀಣಿಸಿ ಹದ ಮಳೆಯಾಯಿತು. ಆನಂತರ ರಾತ್ರಿ 9.30ರ ಸಮಯಕ್ಕೆ ಆರಂಭವಾದ ಮಳೆ ಒಂದು ತಾಸಿನವರೆಗೆ ಉತ್ತಮವಾಗಿ ಸುರಿದು ನಿಂತಿತು.ನಾಗಮಂಗಲ ವರದಿ:
ಪಟ್ಟಣ ಸೇರಿದಂತೆ ತಾಲೂಕಿನ ಹಲವೆಡೆ ಶನಿವಾರ ಸಂಜೆ ಗುಡುಗು-ಸಿಡಿಲು ಸಹಿತ ಎರಡು ಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿಯಿತು.ಕಳೆದ ಒಂದು ವಾರದಿಂದ ಮಳೆ ಬಿಡುವು ಕೊಟ್ಟಿದ್ದರಿಂದ ತಾಲೂಕಿನ ರೈತರು ಈ ವರ್ಷದ ಮುಂಗಾರು ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿ, ಜಮೀನು ಉಳುಮೆ ಕಾರ್ಯದ ಜೊತೆಗೆ ಅಲಸಂದೆ ಸೇರಿ ಜಾನುವಾರುಗಳಿಗೆ ಹಸಿ ಮೇವಿನ ಬೀಜ ಬಿತ್ತನೆ ಮಾಡಿದ್ದರು.
ತಾಲೂಕಿನ ಹೊಣಕೆರೆ, ಚಿಣ್ಯ, ಅಲ್ಪಹಳ್ಳಿ, ಜೋಡಿಹೊಸೂರು, ಸೋಮನಹಳ್ಳಿ, ಕಾವಡಿಹಳ್ಳಿ, ಹುರಳಿಗಂಗನಹಳ್ಳಿ, ಸಾಮಕಹಳ್ಳಿ, ಬಚ್ಚಿಕೊಪ್ಪಲು, ಬ್ರಹ್ಮದೇವರಹಳ್ಳಿ, ಬೋಗಾದಿ, ಕರಡಹಳ್ಳಿ, ಹುಳ್ಳೇನಹಳ್ಳಿ, ಬಿಂಡೇನಹಳ್ಳಿ, ದಂಡಿಗನಹಳ್ಳಿ, ತಟ್ಟಹಳ್ಳಿ, ದೇವಲಾಪುರಸೇರಿ ಹಲವು ಭಾಗಗಳಲ್ಲಿ ಶನಿವಾರ ಸಂಜೆ 5ಗಂಟೆಯಿಂದ ಗುಡುಗು, ಸಿಡಿಲು, ಮಿಂಚಿನೊಂದಿಗೆ ಎರಡು ಗಂಟೆಗೂ ಹೆಚ್ಚು ಕಾಲ ಧಾರಾಕಾರ ಮಳೆಯಾಯಿತು.
ಕಸಬಾ ಹೋಬಳಿಯ ತ್ಯಾಪೇನಹಳ್ಳಿ, ಮುಳಕಟ್ಟೆ, ಅಂಕುಶಾಪುರ ಸೇರಿ ಹಲವು ಭಾಗಗಳಲ್ಲಿ ಸಿಡಿಲು, ಗುಡುಗು, ಮಿಂಚು, ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾದರೆ, ಬಿಂಡಿಗನವಿಲೆ ಹಾಗೂ ಬೆಳ್ಳೂರು ಹೋಬಳಿಯ ಹಲವೆಡೆ ಬಿರುಗಾಳಿ ಸಹಿತ ಉತ್ತಮ ಮಳೆ ಸುರಿದಿದೆ. ಸಿಡಿಲು, ಗುಡುಗು, ಮಿಂಚು, ಬಿರುಗಾಳಿ ಮಳೆಯಿಂದಾಗಿ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಸ್ಥಗಿತಗೊಂಡಿತ್ತು.ಶ್ರೀರಂಗಪಟ್ಟಣ ವರದಿ:
ಶನಿವಾರ ಸಂಜೆ ಸುರಿದ ಗುಡುಗು ಸಹಿತ ಮಳೆಗೆ ಹೋಟೆಲ್ ನ ಮೇಲ್ಛಾವಣಿ ಕುಸಿದಿದ್ದು, ಅದೃಷ್ಟವಶಾತ್ ಯಾವುದೇ ಅವಘಡ ಸಂಭವಿಸಿಲ್ಲ.ಪಟ್ಟಣದ ಮುಖ್ಯ ರಸ್ತೆಯ ಶ್ರೀರಂಗ ಹೋಟೆಲ್‌ನ ಮೇಲ್ಛಾವಣಿ ಮಳೆಯಿಂದ ಕುಸಿದು ಬಿದ್ದಿದೆ. ಕಟ್ಟಡ ಹಳೆಯದಾಗಿದ್ದು, ಮೇಲ್ಭಾಗದ ಆರ್‌ಸಿಸಿಯಲ್ಲಿ ನೀರು ತುಂಬಿದ್ದರಿಂದ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಅದೃಷ್ಟವಶಾತ್ ಈ ವೇಳೆ ಯಾವುದೇ ಗ್ರಾಹಕರು ಇಲ್ಲದ ಕಾರಣ, ಜೊತೆಗೆ ಹೋಟೆಲ್ ಮಾಲೀಕ ಹಾಗೂ ಸಿಬ್ಬಂದಿ ಘಟನಾ ಸ್ಥಳದಿಂದ ದೂರ ಇದ್ದುದ್ದರಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಮೇಲ್ಛಾವಣಿ ಕುಸಿತದಿಂದ ಕೆಳಗಿದ್ದ ಟೇಬಲ್, ಚೇರ್ ಸೇರಿ ಇತರೆ ವಸ್ತುಗಳು ಹಾನಿಯಾಗಿವೆ.ರಮೇಶ್ ಅವರು ಪುರುಷೋತ್ತಮ್ ಅವರಿಂದ ಕಟ್ಟಡ ಬಾಡಿಗೆಗೆ ಪಡೆದು ಈ ಹೋಟೆಲ್ ನಡೆಸುತ್ತಿದ್ದರು. ಕಟ್ಟಡ ಹಳೆಯದ್ದಾಗಿದ್ದು ದುರಸ್ತಿ ಮಾಡಿಸಿಕೊಡುವಂತೆ ಮನವಿ ಮಾಡಿದ್ದಾರೆ. ಶೀಘ್ರ ದುರಸ್ತಿ ಮಾಡಿಸಿಕೊಡಲಾಗುವುದಾಗಿ ಭರವಸೆ ನೀಡದ ಮಾಲೀಕ ಪುರುಷೋತ್ತಮ್ ಅಲ್ಲಿಯವರೆಗೂ ಹೋಟೆಲ್ ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ.