ಹಳೆಬೀಡಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ; ಹಲವೆಡೆ ಹಾನಿ

KannadaprabhaNewsNetwork |  
Published : May 29, 2024, 12:45 AM IST
28ಎಚ್ಎಸ್ಎನ್11 : ಹಳೇಬೀಡು ಸಮೀಪದ ಸಿದ್ಧಾಪುರದಲ್ಲಿ ಮಳೆಗಾಳಿಯಿಂದಾಗಿ ವಿದ್ಯುತ್‌ ಕಂಬಗಳು ಬಿದ್ದಿರುವುದು. | Kannada Prabha

ಸಾರಾಂಶ

ಹೊಯ್ಸಳೇಶ್ವರ ದೇವಾಲಯದ ಉದ್ಯಾನವನದಲ್ಲಿ ಕಾಡು ಜಾತಿಯ ದೊಡ್ಡ ಮರ ಕಾಂಪೌಂಡ್ ಮೇಲೆ ಬಿದ್ದು ಹಾನಿಯಾಗಿದೆ. ಕಾಂಪೌಂಡ್ ಪಕ್ಕದ ಮೂರು ಗೂಡಂಗಡಿಗಳು ಜಖಂಗೊಂಡಿವೆ.

ಕನ್ನಡಪ್ರಭ ವಾರ್ತೆ ಬೇಲೂರುತಾಲೂಕಿನ ಹಳೆಬೀಡಿನಲ್ಲಿ ಸುರಿದ ಭಾರೀ ಮಳೆಗೆ ಬೆಣ್ಣೆಗುಡ್ಡದಲ್ಲಿರುವ ಆಂಜನೇಯ ಸಮುದಾಯ ಭವನದ ಛಾವಣಿ ಜಖಂಗೊಂಡಿದೆ.

ಬೇಲೂರು ತಾಲೂಕಿನ ಹಳೆಬೀಡು ಗ್ರಾಮದ ವ್ಯಾಪ್ತಿಯಲ್ಲಿ ಬಿರುಗಾಳಿಯೊಂದಿಗೆ ಸುರಿದ ಭಾರೀ ಮಳೆಗೆ ಸಮೀಪದ ಸಿದ್ದಾಪುರ ಗ್ರಾಮದಲ್ಲಿ ಮರಗಳು ಬಿದ್ದ ಪರಿಣಾಮ 2 ಮನೆಗಳು ಸಂಪೂರ್ಣ ಜಖಂಗೊಂಡಿವೆ. ತಾಲೂಕಿನ ಹಳೆಬೀಡು ಸಮೀಪದ ಸಿದ್ದಾಪುರ ಗ್ರಾಮದ ಸೋಮಶೇಖರ ಎಂಬುವವರ ಮನೆ ಮೇಲೆ ತೇಗದ ಮರ ಬುಡ ಸಮೇತ ಬಿದ್ದಿದ್ದರಿಂದ ಮನೆಯ ಛಾವಣಿ ಹಾಗೂ ಗೋಡೆಗಳಿಗೆ ಹಾನಿಯಾಗಿದೆ. ಜಾನುವಾರು ಕೊಟ್ಟಿಗೆ, ಬಚ್ಚಲು ಮನೆ, ಅಡುಗೆ ಮನೆಗೆ ಹಾನಿಯಾಗಿದೆ. ಮರವು ದನದ ಕೊಟ್ಟಿಗೆ ಮೇಲೆ ಬಿದ್ದರೂ ಅದೃಷ್ಟವಶಾತ್ ಜಾನುವಾರುಗಳಿಗೇನು ತೊಂದರೆಯಾಗಿಲ್ಲ.

ಈ ಬಗ್ಗೆ ಮಾತನಾಡಿದ ಸೋಮಶೇಖರ್ ದಂಪತಿ, ಮರ ಬಿದ್ದಾಗ ಮನೆ ನಡುಗಿತು. ಭೂಕಂಪದ ಅನುಭವವಾಯಿತು. ಕೈ-ಕಾಲಿನಲ್ಲಿ ಶಕ್ತಿ ಇಲ್ಲದಂತಾಯಿತು. ರಾತ್ರಿಯಿಡೀ ನಿದ್ದೆ ಮಾಡದೆ ಕಳೆದೆವು ಎಂದು ಆತಂಕದಿಂದ ನುಡಿದರು.

ಗ್ರಾಮದ ಪರಿಶಿಷ್ಟ ಜನಾಂಗದ ಕಾಲೋನಿಯಲ್ಲಿ ಲೀಲಾವತಿ ಶಿವಕುಮಾರ್ ಅವರ ಮನೆಯ ಮೇಲೆ ಸಿಲ್ವರ್ ಮರ ಬುಡ ಸಮೇತ ಬಿದ್ದಿದೆ. ಹಂಚಿನ ಮನೆ ಸಂಪೂರ್ಣ ಜಖಂಗೊಂಡಿದೆ. ಗ್ರಾಮದಲ್ಲಿ ಹತ್ತಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ.

ಸಾಹುಕಾರ್ ರಾಜಣ್ಣ ಅವರ ತೋಟದಲ್ಲಿನ 15 ಅಡಿಕೆ ಮರಗಳು ಧರೆಗುರುಳಿದರೆ, ಪಟೇಲ್ ಸಿದ್ದಬಸವೇಗೌಡರ ತೋಟದಲ್ಲಿನ 11 ಮರಗಳು ನೆಲಕಚ್ಚಿವೆ. ಕಟ್ಟೆಸೋಮನಹಳ್ಳಿ ರಸ್ತೆಯ ಸುರೇಶ್ ಜಮೀನಿನಲ್ಲಿ ತೇಗದ ಮರ ಬುಡ ಸಮೇತ ಬಿದ್ದಿದೆ. ಜಮೀನಿನಲ್ಲಿ ಬೆಳೆಯುತ್ತಿದ್ದ 12 ಗುಂಟೆ ಶುಂಠಿ ಬೆಳೆಗೆ ಹಾನಿಯಾಗಿದೆ.

ಹಳೇಬೀಡಿನಿಂದ ಹಾಸನಕ್ಕೆ ಸಂಪರ್ಕ ಕಲ್ಪಿಸುವ ಹಗರೆ ರಸ್ತೆಯಲ್ಲಿ ವಿದ್ಯುತ್ ತಂತಿಯ ಮೇಲೆ ಮರಗಳು ಬಿದ್ದು, ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ, ಹೀಗಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸೆಸ್ಕ್ ಸಿಬ್ಬಂದಿ ತಕ್ಷಣ ವಿದ್ಯುತ್ ಸ್ಥಗಿತಗೊಳಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ. ಕಂಬ ಉರುಳಿಬಿದ್ದಿದ್ದು, ಸಂಪರ್ಕ ಸ್ಥಗಿತವಾಗಿದೆ ಎಂದು ಸಿದ್ದಾಪುರ ಗ್ರಾಮಸ್ಥರು ತಿಳಿಸಿದರು.

ಹೊಯ್ಸಳೇಶ್ವರ ದೇವಾಲಯದ ಉದ್ಯಾನವನದಲ್ಲಿ ಕಾಡು ಜಾತಿಯ ದೊಡ್ಡ ಮರ ಕಾಂಪೌಂಡ್ ಮೇಲೆ ಬಿದ್ದು ಹಾನಿಯಾಗಿದೆ. ಕಾಂಪೌಂಡ್ ಪಕ್ಕದ ಮೂರು ಗೂಡಂಗಡಿಗಳು ಜಖಂಗೊಂಡಿವೆ. ಗೂಡಂಗಡಿಯಲ್ಲಿ ಚಹಾ ಮಾಡುತ್ತಿದ್ದ ಇಂದ್ರಮ್ಮ ಮರ ಬೀಳುವ ಶಬ್ಧ ಕೇಳಿ ಹೊರ ಬಂದಿದ್ದಾರೆ. ತಲೆಗೆ ಸಣ್ಣ ಪೆಟ್ಟು ಬಿದ್ದಿದೆ. ಗ್ರಾಹಕರು ದೂರ ಸರಿದಿದ್ದಾರೆ. ಕೂದಲೆಳೆಯ ಅಂತರದಲ್ಲಿ ಅಪಾಯ ತಪ್ಪಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ