ಶಿವಮೊಗ್ಗದಲ್ಲಿ ಕಳೆದ ನಾಲ್ಕು ದಿನಗಳಿಂದ ತಗ್ಗಿದ ಮಳೆ ಮತ್ತೆ ಚುರುಕು : ಅಲ್ಲಲ್ಲಿ ಹಾನಿ

KannadaprabhaNewsNetwork | Updated : Jul 26 2024, 11:34 AM IST
Follow Us

ಸಾರಾಂಶ

ಶಿವಮೊಗ್ಗದಲ್ಲಿ ಕಳೆದ ನಾಲ್ಕು ದಿನಗಳಿಂದ ತಗ್ಗಿದ ಮಳೆ ಗುರುವಾರ ಮತ್ತೆ ಚುರುಕುಕೊಂಡಿದೆ. ಗಾಳಿ-ಮಳೆಗೆ ಅಲ್ಲಲ್ಲಿ ಹಾನಿ ಸಂಭವಿಸಿದೆ.

 ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ತಗ್ಗಿದ ಮಳೆ ಗುರುವಾರ ಮತ್ತೆ ಚುರುಕುಕೊಂಡಿತ್ತು. ಮಳೆ ಚುರುಕುಗೊಳ್ಳುತ್ತಿದ್ದಂತೆ ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿದ್ದು, ಗುರುವಾರ ಭದ್ರಾ ಜಲಾಶಯಕ್ಕೆ 26044 ಕ್ಯುಸೆಕ್ ನೀರು ಹರಿದು ಬಂದಿದೆ.

ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 42 ಮಿ.ಮೀ. ಮಳೆ ಸುರಿದಿದ್ದು, ಶಿವಮೊಗ್ಗದಲ್ಲಿ 19.90 ಮಿ.ಮೀ, ಭದ್ರಾವತಿ 20.50 ಮಿ.ಮೀ, ತೀರ್ಥಹಳ್ಳಿ 86.60 ಮಿ.ಮೀ, ಸಾಗರದಲ್ಲಿ 55.50 ಮಿ.ಮೀ, ಶಿಕಾರಿಪುರ 18.30 ಮಿ.ಮೀ, ಸೊರಬದಲ್ಲಿ 21.60 ಮಿ.ಮೀ, ಹೊಸನಗರದಲ್ಲಿ 77.10 ಮಿ.ಮೀ ಮಳೆಯಾಗಿದೆ.

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ದಿನದಿಂದ ಏರಿಕೆಯಾಗುತ್ತಿದ್ದು, ಈಗಾಲೇ 1802 ಅಡಿಗೆ ಏರಿಕೆಯಾಗಿದೆ. ಗುರುವಾರ 53371 ಕ್ಯುಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದೆ. ತುಂಗಾ ಜಲಾಶಯಕ್ಕೆ ಗುರುವಾರ 37236 ಕ್ಯುಸೆಕ್‌ ನೀರು ಹರಿದು ಬಂದಿದ್ದು, ಈಗಾಗಲೇ ಜಲಾಶಯ ಭರ್ತಿಯಾಗಿರು ವುದರಿಂದ ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಇನ್ನು ಭದ್ರಾ ಜಲಾಶಯಕ್ಕೆ ಬುಧವಾರ 15383 ಕ್ಯುಸೆಕ್‌ ನೀರು ಹರಿದು ಬಂದಿದ್ದರೆ ಗುರುವಾರ ಒಳ ಹರಿವಿನ ಪ್ರಮಾಣ 26044ಕ್ಕೆ ಏರಿಕೆಯಾಗಿತ್ತು. 186 ಗರಿಷ್ಠ ಮಟ್ಟ ಹೊಂದಿರುವ ಜಲಾಶಯದ ಮಟ್ಟ ಸದ್ಯ 171.6 ಕ್ಕೆ ಏರಿಕೆಯಾಗಿದ್ದು, ಭರ್ತಿಗೆ ಇನ್ನೂ 14 ಅಡಿಯಷ್ಟು ಮಾತ್ರ ಬಾಕಿ ಉಳಿದಿದೆ. ಒಟ್ಟು 71.5 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಈಗ 54.50 ಟಿಎಂಸಿ ನೀರು ಸಂಗ್ರಹವಾಗಿದೆ.

224 ಮಿ.ಮೀ ಮಳೆ ಹೆಚ್ಚಳ:

ಜಿಲ್ಲೆಯಲ್ಲಿ ಜುಲೈ ತಿಂಗಳಲ್ಲಿ 603.54 ಮಿ.ಮೀ ವಾಡಿಕೆಯ ಮಳೆಯ ಪೈಕಿ ಏ.25ರವರೆಗೆ 827.33 ಮಿ.ಮೀ ಮಳೆ ಸುರಿದಿದೆ. ಶಿವಮೊಗ್ಗದಲ್ಲಿ 204.70 ಮಿ.ಮೀ ಪೈಕಿ 378, ಭದ್ರಾವತಿಯಲ್ಲಿ 198.90 ಪೈಕಿ 248.60, ತೀರ್ಥಹಳ್ಳಿಯಲ್ಲಿ 1017.90ರ ಪೈಕಿ 1250.50, ಸಾಗರದಲ್ಲಿ 847.70 ಪೈಕಿ 1440.10, ಶಿಕಾರಿಪುರದಲ್ಲಿ 257.70 ಪೈಕಿ 432.60 ಮಿ.ಮೀ, ಸೊರಬದಲ್ಲಿ 535.20 ಪೈಕಿ 654.40, ಹೊಸನಗರದಲ್ಲಿ 1662.70 ಪೈಕಿ 1387.10 ಮಿ.ಮೀ ಮಳೆಯಾಗಿದೆ.

ದೇವರ ಮರ ಕುಸಿದುಬಿದ್ದು ಕಾರು ಜಖಂ

ತೀರ್ಥಹಳ್ಳಿ: ತಾಲೂಕಿನಾದ್ಯಂತ ಗುರುವಾರ ಸಂಜೆಯಿಂದ ಗುಡುಗು ಸೇರಿದಂತೆ ಭಾರಿ ಗಾಳಿ ಮಳೆಯಾಗುತ್ತಿದ್ದು, ರಾತ್ರಿ ಬೀಸಿದ ಬಿರುಗಾಳಿಗೆ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಬಳಿ ಜನವಸತಿ ಪ್ರದೇಶದಲ್ಲಿ ಭಾರಿ ಗಾತ್ರದ ಮರವೊಂದು ಬಿದ್ದ ಪರಿಣಾಮ ಮಾರುತಿ ಶ್ವಿಫ್ಟ್ ಕಾರೊಂದು ಸಂಪೂರ್ಣ ಜಖಂಗೊಂಡಿ

ಮರ ಬಿದ್ದ ಸ್ಥಳದಲ್ಲಿ ಸುತ್ತಲೂ ವಾಸದ ಮನೆಗಳಿದ್ದು ಅದೃಷ್ಟವಶಾತ್ ಖಾಲಿ ನಿವೇಶನದ ಮೇಲೆ ಬಿದ್ದ ಪರಿಣಾಮ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ಸ್ವಲ್ಪದರಲ್ಲಿ ತಪ್ಪಿದೆ. ಅತ್ಯಂತ ಅಪಾಯಕಾರಿಯಾಗಿದ್ದರೂ ಮರದಲ್ಲಿ ದೇವರು ಇದ್ದಾರೆಂಬ ನಂಬಿಕೆಯಿಂದ ನಿವೇಶನದ ಮಾಲೀಕರು ಮರವನ್ನು ತೆರವುಗೊಳಿಸಿರಲಿಲ್ಲಾ ಎಂದೂ ಹೇಳಲಾಗಿದೆ. ತಾಲೂಕು ಮಹಿಳಾ ಸಹಕಾರ ಸಂಘದ ಕಟ್ಟಡಕ್ಕೆ ತಾಗಿಕೊಂಡಿದ್ದ ಈ ಮರ ಬುಡ ಸಹಿತ ಕಿತ್ತು ಬಿದ್ದಿದೆ. ಕಾರಿನ ಮುಂಭಾಗ ಜಜ್ಜಿ ಹೋಗಿದೆ. ಪಪಂ ಮುಖ್ಯಾಧಿಕಾರಿ ನಾಗರಾಜ್ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

ಹೊನ್ನೇತಾಳು ಗ್ರಾಮದ ವಾಸಿ ಪಾಂಡುರಂಗನವರ ಮನೆಯ ಗೋಡೆ ಕುಸಿದಿದ್ದು ಮನೆ ಬೀಳುವ ಸ್ಥಿತಿಯಲ್ಲಿದೆ. ಇದೇ ಗ್ರಾಪಂ ವ್ಯಾಪ್ತಿಯ ಕುಂದಾ ಗ್ರಾಮದ ವೆಂಕಟೇಶ, ನೆರಟೂರು ಗ್ರಾಪಂಯ ಮಹಿಳೆಯೊಬ್ಬರ ವಾಸದಮನೆ, ಹಾದಿಗಲ್ಲು ಗ್ರಾಪಂ ಕರಡಿಗ ಗ್ರಾಮದ ಮಂಡಲಮನೆ ಬಂಗಾರಮ್ಮನವರ ಮನೆಗೂ ಹಾನಿಯಾಗಿದೆ. ಅರೇಹಳ್ಳಿ ಗ್ರಾಪಂ ವ್ಯಾಪ್ತಿಯ ಸುಜಯಾ ಕೃಷ್ಣಪ್ಪನವರ ಕೊಟ್ಟಿಗೆ ಮತ್ತು ಹಾದಿಗಲ್ಲು ಗ್ರಾಪಂ ಕರಡಿಗ ಗ್ರಾಮದಲ್ಲಿ ಸುಬ್ರಮಣ್ಯರಿಗೆ ಸೇರಿದ ಕೊಟ್ಟಿಗೆ ಮೇಲೆ ಮರ ಬಿದ್ದು ಹಾನಿಯಾಗಿದೆ. ಈ ಎಲ್ಲಾ ಮನೆಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ವಿದ್ಯುತ್ ಸೇವೆ ಸ್ಥಗಿತ; ನೆಟ್‌ವರ್ಕ್‌ ನಿಷ್ಕ್ರಿಯ

ಬ್ಯಾಕೋಡು: ಈ ಭಾಗದಲ್ಲಿ ಕಳೆದ ಹದಿನೈದು ದಿನಗಳಿಂದ ವಿಪರೀತ ಗಾಳಿ ಮಳೆಯಿಂದ ಹಲವು ಅಗತ್ಯ ಸೇವೆಗಳು ಸಮರ್ಪಕವಾಗಿ ದೊರಕದಂತಾಗಿದೆ.

ದಿನಂಪ್ರತಿ ಒಂದಲ್ಲ ಒಂದು ಕಡೆ ವಿದ್ಯುತ್ ಕಂಬಗಳ ಮೇಲೆ ಬಹುಗಾತ್ರದ ಮರಗಳು ಉರುಳಿ ಬೀಳುತ್ತಿದ್ದು, ಕಂಬಗಳನ್ನು ಮರುಸ್ಥಾಪಿಸುವಲ್ಲಿ ಮೆಸ್ಕಾಂ ಇಲಾಖೆ ಹಗಲಿರುಳೆನ್ನದೆ ಶ್ರಮಿಸುತ್ತಿದ್ದರೂ ಕೂಡ ಕರೂರು ಹೋಬಳಿಯ ಕೆಲವು ಕಡೆಗಳಲ್ಲಿ ವಿದ್ಯುತ್ ಸೇವೆ ಸಮರ್ಪಕವಾಗಿ ಸಿಗುತ್ತಿಲ್ಲ .

ವಿದ್ದುತ್ತನ್ನೇ ಅವಲಂಬಿತವಾಗಿರುವ ನೆಟ್ವರ್ಕ್ ಗಳು ಇಲ್ಲಿವೆ ಸಂಪೂರ್ಣ ನಿಷ್ಕ್ರಿಯೆಗೊಂಡಿವೆ.

ಬುಧವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 369 ರ ವಕ್ಕೋಡಿ ಬಳಿ ಬೃಹತ್ ಮರವೂಂದು ರಸ್ತೆಗೆ ಉರುಳಿ ಸಂಚಾರ ಬೆಳಗ್ಗೆ 9 ಗಂಟೆ ತನಕವೂ ಸಂಪೂರ್ಣ ಸ್ಥಗಿತ ವಾಗಿತ್ತು. ಇದರಿಂದ ಬೆಳಗಿನ ಸಿಗಂದೂರು - ಶಿವಮೊಗ್ಗ, ಕಟ್ಟಿನಕಾರು - ಸಾಗರ, ಮಾರ್ಗದ ಬಸ್ಸುಗಳು ತಲಾ ಒಂದೊಂದು ಗಂಟೆ ತಡವಾಗಿದೆ.

ಸದ್ಯ ಗುರುವಾರ ಬೆಳಿಗ್ಗೆ 9ಗಂಟೆಗೆ ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಜಂಟಿಯಾಗಿ ಮರವನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.

ನಾಗವಳ್ಳಿ ಬಳಿ ಮನೆ ಕುಸಿತ:

ಶರಾವತಿ ಕಣಿವೆಯಲ್ಲಿ ನಿರಂತರ ಮಳೆಯಿಂದಾಗಿ ಇಲ್ಲಿನ ಭಾರಂಗಿ ಹೋಬಳಿಯ ಭಾನುಕುಳಿ ಗ್ರಾಮದ ನಾಗವಳ್ಳಿ ಬಳಿ ಮನೆಯೊಂದು ಕುಸಿದು ಸಂಪೂರ್ಣ ಹಾನಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಾಗವಳ್ಳಿಯ ಆನಂತ ಅವರ ಮನೆ ಜು.21ರಂದು ಸುರಿದ ಬೀಕರ ಮಳೆಗೆ ಮನೆಗಳ ಚಾವಣಿ ಸಂಪೂರ್ಣ ಕುಸಿದಿದೆ. ಮನೆಗೆ ಹಾಕಲಾಗಿದ್ದ ಮರದ ನಾಟವೂ ಮುರಿದಿದ್ದರಿಂದ ದುರಸ್ತಿಯೂ ಸಾಧ್ಯವಾಗಿಲ್ಲ. ಮನೆಯಲ್ಲಿದ್ದ ಅಗತ್ಯ ವಸ್ತುಗಳು ಸಹ ನೀರಿನಲ್ಲಿ ತೋಯ್ದು ಹೋಗಿರುದರಿಂದ ದಂಪತಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಸದ್ಯ ಘಟನೆ ನಡೆದು ಮೂರು ದಿನಗಳು ಕಳೆದರೂ ಕಂದಾಯ ಇಲಾಖೆ ಹಾಗೂ ಸ್ಥಳೀಯ ಗ್ರಾಮ ಪಂಚಾಯ್ತಿಯ ಯಾವುದೇ ಅಧಿಕಾರಿಗಳು ಬಂದು ಸ್ಥಳ ಪರಿಶೀಲನೆ ನೆಡೆಸಿ ಇತ್ತ ಗಮನ ಹರಿಸಿಲ್ಲ ಎಂದು ರೈತ ಆನಂತ ನೋವು ತೋಡಿಕೊಂಡಿದ್ದಾರೆ. ಮಳೆ ಗಾಳಿಗೆ ಮರ ಉರುಳಿ ಮನೆಗೆ ಹಾನಿ

ಸೊರಬ: ಬಿರುಸಿನ ಗಾಳಿ ಮಳೆಗೆ ಬೃಹತ್ ಗಾತ್ರದ ಮರವೊಂದು ಉರುಳಿ ಬಿದ್ದ ಪರಿಮಾಣ ಮನೆಯೊಂದು ಸಂಪೂರ್ಣ ಜಖಂ ಆಗಿರುವ ಘಟನೆ ತಾಲೂಕಿನ ಗುಡವಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ.

ಗ್ರಾಮದ ವಿರೂಪಾಕ್ಷಪ್ಪ ಈರಪ್ಪ ಎಂಬುವವರ ಮನೆಯ ಪಕ್ಕದ ಬೃಹತ್ ಗಾತ್ರದ ಹುಣಸೇ ಮರ ಉರುಳಿದೆ. ಮನೆಯ ಮೇಲೆ ಮರ ಬಿದ್ದಿದ್ದರಿಂದ ವಿರೂಪಾಕ್ಷಪ್ಪ ಹಾಗೂ ಅವರ ಪತ್ನಿ ಮತ್ತು ಪುತ್ರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮನೆಯಲ್ಲಿ ವಾಸವಿದ್ದ ಆರು ಜನರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಮರ ಮನೆಯ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿನ ಪೀಠೋಪಕರಣಗಳು, ಗೃಹ ಉಪಯೋಗಿ ಸಾಮಗ್ರಿಗಳು, ಮನೆಯ ಮೇಲ್ಚಾವಣಿ, ಪಿಕಾಸಿ ಹಂಚುಗಳಿಗೆ ಸಾಕಷ್ಟು ಹಾನಿಯಾಗಿದೆ.

ಸ್ಥಳಕ್ಕೆ ಗ್ರಾಪಂ ಸದಸ್ಯ ಸಿ.ಎಚ್.ಮಂಜುನಾಥ್ ಹಾಗೂ ಮಾಜಿ ಸದಸ್ಯ ಗಂಗಾಧರಗೌಡ ಭೇಟಿ ನೀಡಿ, ಸರ್ಕಾರದಿಂದ ದೊರೆಯಬಹುದಾದ ಸೌಲಭ್ಯ ಮತ್ತು ಪರಿಹಾರವನ್ನು ದೊರಕಿಸಿಕೊಡಲು ಪ್ರಾಮಾಣಿಕವಾಗಿ ಯತ್ನಿಸುವುದಾಗಿ ತಿಳಿಸಿದರು.ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಗ್ರಾಪಂ ಆಡಳಿತಾಧಿಕಾರಿ, ಗ್ರಾಮ ಲೆಕ್ಕಿಗರು ಸೇರಿದಂತೆ ಕಂದಾಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದರು.