ಭಟ್ಕಳ: ತಾಲೂಕಿನಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರ ಸಂಜೆಯವರೆಗೂ ಭಾರೀ ಮಳೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತ ಒಂದು ಕಡೆಯಾದರೆ, ಪಟ್ಟಣದ ರಂಗಿನಕಟ್ಟೆ, ಸಂಶುದ್ದೀನ ವೃತ್ತದ ರಾಷ್ಟ್ರೀಯ ಹೆದ್ದಾರಿ ಹೊಳೆಯಾಗಿದ್ದಲ್ಲದೇ ತಗ್ಗು ಪ್ರದೇಶಗಳು ಜಲಾವೃತಗೊಂಡು ಜನರು ತೊಂದರೆ ಅನುಭವಿಸಿದರು.
ಭಾರೀ ಮಳೆ ಸುರಿದಿದ್ದರಿಂದ ಹೊಳೆ, ಹಳ್ಳಗಳು ತುಂಬಿ ಹರಿದವು. ಹಲವು ಮನೆಗಳಿಗೆ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಯಿತು. ತಾಲೂಕಿನ ಮಾರುಕೇರಿಯ ಹೂತ್ಕಳ ಮಠದ ವಿಘ್ನೇಶ್ವರ ಭಟ್ಟ ಅವರ ಮನೆಯ ಕಾಂಪೌಂಡ್ ಮಳೆ ನೀರು ನುಗ್ಗಿ ಕುಸಿದು ಬಿದ್ದಿದ್ದರಿಂದ ಮನೆಗೆ ನೀರು ನುಗ್ಗಿ ತೊಂದರೆ ಉಂಟಾಯಿತು.ಕಾಂಪೌಂಡ್ ಕುಸಿದಿದ್ದರಿಂದ ಭಾರೀ ಹಾನಿ ಉಂಟಾಗಿದೆ. ಭಾರೀ ಮಳೆಗೆ ಕಾಯ್ಕಿಣಿ ಜನತಾ ಕಾಲನಿ ನಿವಾಸಿ ಕುಪ್ಪಯ್ಯ ದೇವಾಡಿಗ ಮನೆ ಕುಸಿದು ಹಾನಿಯಾಗಿದೆ. ಕಿತ್ರೆಯ ನಿವಾಸಿ ಮಾಸ್ತಿ ಗೊಂಡ ಮನೆಯ ಚಾವಣಿ ಕುಸಿದಿದೆ. ಪಟ್ಟಣದ ಆಸರಕೇರಿ ನಿವಾಸಿ ಶಾರದಾ ಹೊನ್ನಪ್ಪ ನಾಯ್ಕ ಮನೆಯ ಚಾವಣಿ ಕುಸಿದು ಅಂದಾಜು ₹2 ಲಕ್ಷ ನಷ್ಟವಾಗಿದೆ. ಮುಲ್ಲಿಗದ್ದೆ ಹಡೀನ ನಿವಾಸಿ ಮಾದಿ ದುರ್ಗಪ್ಪ ನಾಯ್ಕ ಮನೆಯೂ ಭಾಗಶಃ ಬಿದ್ದಿದೆ. ಹೊಳೆ, ಹಳ್ಳಗಳು ಉಕ್ಕಿದ್ದರಿಂದ ಪುರವರ್ಗ, ಮೂಡಭಟ್ಕಳ ತಲಾಂದ ಹಾಗೂ ಬೆಳಲಖಂಡ ಪ್ರದೇಶಗಳಲ್ಲಿ ಅಲ್ಲಲ್ಲಿ ಮನೆಯೊಳಗೆ ನೀರು ನುಗ್ಗಿದೆ.
ಚೌಥನಿಯ ಶರಾಬಿ ಹೊಳೆ ಅಪಾಯ ಮಟ್ಟ ಮೀರಿ ಏರುವ ಸಮಯದಲ್ಲಿ ಮಳೆ ಕಡಿಮೆಯಾದ ಕಾರಣ ಸಂಭವಿಸಬಹುದಾದ ಹಾನಿ ತಪ್ಪಿದೆ. ರಂಗಿನಕಟ್ಟೆ ಮತ್ತು ಸಂಶುದ್ದೀನ ವೃತ್ತದ ಹೆದ್ದಾರಿಯಲ್ಲಿ ನೀರು ನಿಂತು ಹೊಳೆ ಉಂಟಾಗಿತ್ತು. ಹೆದ್ದಾರಿಯಲ್ಲಿ ನೀರು ನಿಂತು ಹೊಳೆಯಾಗಿದ್ದರಿಂದ ವಾಹನಿಗರು ಸಂಚಾರಕ್ಕೆ ಪರದಾಡುವಂತಾಯಿತು. ರಂಗಿನಕಟ್ಟೆ, ವೃತ್ತದ ಹೆದ್ದಾರಿ ಅವ್ಯವಸ್ಥೆ ಬಗ್ಗೆ ಜನರು ಮತ್ತೆ ಹಿಡಿಶಾಪ ಹಾಕಿದರು.ಪಾದಚಾರಿಗಳು ರಸ್ತೆಯಲ್ಲಿ ನಡೆದಾಡಲು ಪರದಾಡುವಂತಾಯಿತು. ಗ್ರಾಮೀಣ ಭಾಗದಲ್ಲಿ ಹೊಳೆಯ ನೀರು ಅಡಕೆ ತೋಟಕ್ಕೆ ನುಗ್ಗಿದ್ದು, ತೋಟದ ಗೊಬ್ಬರ, ಬಿದ್ದ ಅಡಕೆ ಕೊಚ್ಚಿ ಹೋಗಿದ್ದು, ರೈತರು ಚಿಂತಾಕ್ರಾಂತರಾಗಿದ್ದಾರೆ. ಮಂಗಳವಾರ 128.8 ಮಿಮೀ ಮಳೆ ಸುರಿದಿದೆ. ಮಂಗಳವಾರ ಸಂಜೆಯವರೆಗೂ ಮಳೆ ಮುಂದುವರಿದಿತ್ತು. ಗ್ರಾಮೀಣ ಭಾಗದ ರಸ್ತೆಗಳಲ್ಲಿ ಹೊಂಡ ಬಿದ್ದಿದ್ದು, ಸಂಚರಿಸಲು ತೊಂದರೆಯಾಗಿದೆ. ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದ್ದು, ಮಳೆಯಿಂದ ಸಮಸ್ಯೆ ಉಂಟಾದಲ್ಲಿ ತಕ್ಷಣ ಸ್ಪಂದಿಸುವಂತೆ ನೋಡಲ್ ಅಧಿಕಾರಿಗಳು, ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದೆ. ಜಿಲ್ಲೆಯ ವಿವಿಧೆಡೆ ವರುಣನ ಅಬ್ಬರ
ಕಾರವಾರ: ಕೆಲವು ದಿನಗಳಿಂದ ಇಳಿಮುಖಗೊಂಡಿದ ಮಳೆ ಮಂಗಳವಾರ ಮತ್ತೆ ಅಬ್ಬರಿಸಿದೆ.ಜಿಲ್ಲೆಯ ಭಟ್ಕಳ, ಕಾರವಾರ, ಕುಮಟಾ, ಹೊನ್ನಾವರ ತಾಲೂಕಿನಲ್ಲಿ ಉತ್ತಮ ಮಳೆಯಾಗಿದೆ.ಭಟ್ಕಳದಲ್ಲಿ ಭಾರಿ ಮಳೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನುಗ್ಗಿ ಸಂಚಾರಕ್ಕೆ ಅಡ್ಡಿಯುಂಟು ಮಾಡಿತು. ಅಲ್ಲದೇ ಕೆಲವು ಅಡಕೆ ತೋಟಗಳಿಗೂ ನೀರು ನುಗ್ಗಿತ್ತು.ಹೊನ್ನಾವರ ತಾಲೂಕಿನ ಖರ್ವಾ ಗ್ರಾಮದ ನಾಥಗೇರಿಯಲ್ಲಿ ಸುಬ್ರಹ್ಮಣ್ಯ ಗೋವಿಂದ ನಾಯ್ಕ ಎಂಬವರ ಮನೆಯ ಮೇಲೆ ತೆಂಗಿನಮರ ಬಿದ್ದಿದೆ. ಮನೆಯಲ್ಲಿ ಕುಟುಂಬಸ್ಥರು ಇದ್ದರೂ ಅದೃಷ್ಟವಶಾವತ್ ಪಾರಾಗಿದ್ದಾರೆ.ಕಾರವಾರದಲ್ಲಿ ಮಂಗಳವಾರ ಸಂಜೆ 1 ಗಂಟೆಗೂ ಅಧಿಕ ಸಮಯ ಮಳೆ ಸುರಿದಿದೆ.