ಉತ್ತರ ಕನ್ನಡದಲ್ಲಿ ಮಳೆಯ ಅಬ್ಬರ

KannadaprabhaNewsNetwork |  
Published : Sep 24, 2026, 02:30 AM IST
ಗೋಕರ್ಣದಲ್ಲಿ ಛತ್ರಿ ಹಿಡಿದು ಸಾಗುತ್ತಿರುವ ಜನ. | Kannada Prabha

ಸಾರಾಂಶ

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಸೇರಿದಂತೆ ಕರಾವಳಿ ತಾಲೂಕುಗಳ ಹಲವೆಡೆ ಮಳೆ ಬಿರುಸುಗೊಂಡಿತ್ತು. ಕೆಲವೆಡೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆಯ ಮೇಲೂ ನೀರು ನಿಂತು ವಾಹನಗಳು ಎಚ್ಚರಿಕೆಯಿಂದ ಸಾಗುವಂತಾಯಿತು.

ಕಾರವಾರ: ಜಿಲ್ಲೆಯ ವಿವಿಧೆಡೆ ಬುಧವಾರ ಉತ್ತಮ ಮಳೆಯಾಗಿದ್ದು, ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಹೆಚ್ಚಾಗಿತ್ತು. ಬೆಳಗ್ಗೆಯಿಂದಲೇ ಗುಡುಗು- ಮಿಂಚಿನೊಂದಿಗೆ ಆರಂಭವಾದ ಮಳೆ ಸಂಜೆವರೆಗೂ ಮುಂದುವರಿಯಿತು.

ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಸೇರಿದಂತೆ ಕರಾವಳಿ ತಾಲೂಕುಗಳ ಹಲವೆಡೆ ಮಳೆ ಬಿರುಸುಗೊಂಡಿತ್ತು. ಕೆಲವೆಡೆ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅಲ್ಲಲ್ಲಿ ರಸ್ತೆಯ ಮೇಲೂ ನೀರು ನಿಂತು ವಾಹನಗಳು ಎಚ್ಚರಿಕೆಯಿಂದ ಸಾಗುವಂತಾಯಿತು. ಬಿಸಿಲ ಬೇಗೆಯಿಂದ ಹೈರಾಣಾಗಿದ್ದ ಕರಾವಳಿ ಜನತೆ ಈ ಮಳೆಯಿಂದಾಗಿ ನಿಟ್ಟುಸಿರು ಬಿಡುವಂತಾಯಿತು.ಘಟ್ಟದ ಮೇಲಿನ ತಾಲೂಕುಗಳಲ್ಲಿ ಜಿಟಿಜಿಟಿ ಮಳೆ ಇಡೀ ದಿನ ಮುಂದುವರಿಯಿತು.

ಬೆಳಗಿನ ಸಮಯದಲ್ಲಿ ಗುಡುಗು- ಮಿಂಚಿನೊಂದಿಗೆ ಮಳೆ ಆರಂಭವಾಗಿದ್ದರಿಂದ ಜನರು ಹೊರಗೆ ತೆರಳಲು ಹಿಂದೇಟು ಹಾಕಿದರು. ಮಧ್ಯಾಹ್ನದ ಬಳಿಕವೂ ಮಳೆ ಮುಂದುವರಿದ ಪರಿಣಾಮ ಮಾರುಕಟ್ಟೆ ಪ್ರದೇಶಗಳಲ್ಲಿ ಸಾಮಾನ್ಯವಾಗಿರುವ ಜನಸಂದಣಿ ಕಂಡುಬರಲಿಲ್ಲ. ವ್ಯಾಪಾರ- ವಹಿವಾಟಿನ ಮೇಲೂ ಮಳೆಯ ಪರಿಣಾಮ ಬೀರಿತು.ಕರಾವಳಿಯ ಗ್ರಾಮೀಣ ಪ್ರದೇಶಗಳಲ್ಲಿಯೂ ಮಳೆ ಉತ್ತಮವಾಗಿ ಸುರಿದಿದ್ದು, ಕೃಷಿ ಚಟುವಟಿಕೆಗಳಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದೆ. ನಿರಂತರ ಮಳೆಯಿಂದಾಗಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಸಾಧ್ಯತೆ ಉಂಟಾಗಿದೆ. ಇನ್ನು ವ್ಯಾಪಕ ಮಳೆಯಿಂದ ಗಣೇಶಮೂರ್ತಿಗಳ ವೀಕ್ಷಣೆಗೂ ಜನತೆ ಕಿರಿಕಿರಿ ಅನುಭವಿಸುವಂತಾಗಿದೆ. ತಿಂಗಳ ಬಳಿಕ ಗೋಕರ್ಣದಲ್ಲಿ ಮತ್ತೆ ಮಳೆ

ಗೋಕರ್ಣ: ಒಂದು ತಿಂಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಮಂಗಳವಾರ ರಾತ್ರಿಯಿಂದ ಅಬ್ಬರಿಸುತ್ತಿದ್ದು, ಬುಧವಾರ ನಿರಂತರವಾಗಿ ಸುರಿದಿದೆ.

ಮಳೆಗಾಲ ಮುಗಿದು ಹೋದಂತೆ ತೋರುತ್ತಿದ್ದ ಬಿರುಬಿಸಿಲಿನ ವಾತಾವರಣದಿಂದ ಹೈರಾಣಾಗಿದ್ದ ಜನರಿಗೆ ತಂಪೆರೆದಿದೆ. ಈ ಭಾಗದಲ್ಲಿ ರೈತರು ಬೆಳೆದ ಭತ್ತದ ಬೆಳೆ ತೆನೆ ಒಡೆಯುವ ಸಮಯದಲ್ಲೇ ಭತ್ತದ ಗದ್ದೆಯಲ್ಲಿ ನೀರಿಲ್ಲದೆ ಸಸಿ ಕೆಂಪಾಗಿ ಹಾನಿಯಾಗುವ ಆತಂಕ ಸೃಷ್ಟಿಯಾಗಿತ್ತು. ಆದರೆ ಪುನಃ ಮಳೆ ಬಂದಿದ್ದರಿಂದ ತುಸು ಆಶಾದಾಯಕವಾಗಿದೆ.

ಬಿಂದಾಸ್ ಆಗಿ ಓಡಾಡುತ್ತಿದ್ದ ಪ್ರವಾಸಿಗರಿಗೆ ಏಕಾಏಕಿ ಬಂದ ಮಳೆಯಿಂದ ಕಂಗಾಲಾಗಿದ್ದು, ಛತ್ರಿ, ರೇನ್‌ಕೋಟ್ ಹುಡುಕುತ್ತ ಸಾಗಿದ್ದು, ಛತ್ರಿ, ಪ್ಲಾಸ್ಟಿಕ್ ನಿಲುವಂಗಿಗಳ ಖರೀದಿಸುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಳೆ-ಬೆಳೆ ಸಮೃದ್ಧಿಗೆ ಜೋಕುಮಾರನ ಆರಾಧನೆ
ಹೊಸ ಯೋಚನೆಗಳ ಹರಿಕಾರ ಚಿದಂಬರರಾವ್‌ ಜಂಬೆ