ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಶುಕ್ರವಾರ ರಾತ್ರಿ ಸುರಿದ ಮಳೆಗೆ ಮುಟ್ಟನಹಳ್ಳಿ-ಬೋರಾಪುರ ರಸ್ತೆಯ ಹೆಬ್ಬಾಳ ಸೇತುವೆ ಮುಳುಗಡೆಯಾಗಿದ್ದು ಸ್ಥಳಕ್ಕೆ ಶಾಸಕ ಕೆ.ಎಂ.ಉದಯ್ ಭೇಟಿ ನೀಡಿ ಪರಿಶೀಲಿಸಿದರು.ಬಳಿಕ ಮಾತನಾಡಿದ ಅವರು, ಮುಟ್ಟನಹಳ್ಳಿ-ಬೋರಾಪುರ ರಸ್ತೆಯಲ್ಲಿ ದಿನನಿತ್ಯ ಸ್ಕೂಟರ್, ಕಾರು, ಸೇರಿದಂತೆ ಕಬ್ಬಿನ ಗಾಡಿಗಳು ಮತ್ತು ಟ್ರ್ಯಾಕ್ಟರ್ ಸೇರಿದಂತೆ ಸಾರ್ವಜನಿಕರು ಸಹ ಸಂಚಾರ ಮಾಡುವ ರಸ್ತೆಯಾಗಿದೆ. ಈ ಭಾಗದ ರೈತರಿಗೆ ಸೇತುವೆಯಿಂದ ಅನೂಕುಲವಾಗುತ್ತಿದೆ. ಮಳೆಯಿಂದ ಸೇತುವೆ ಬಿರುಕು ಬಿಟ್ಟು ನೂರಾರು ಎಕರೆ ಜಮೀನಿಗೆ ನೀರು ನುಗ್ಗಿ ಹಾನಿ ಉಂಟಾಗಿದೆ ಎಂದರು.
ಸೂಳೆಕೆರೆ ಹೆಬ್ಬಾಳ ಸೇತುವೆಯಲ್ಲಿ ಹತ್ತಕ್ಕೂ ಹೆಚ್ಚು ತೂಬೂಗಳಿವೆ. ಮಳೆಯಿಂದಾಗಿ ಗಿಡಗಂಟೆಗಳು ತೂಬಿನಲ್ಲಿ ಸಿಲುಕಿ ಸೇತುವೇ ಜಖಂಗೊಂಡಿರುವುದರಿಂದ ನೀರು ತೂಬಿನಲ್ಲಿ ನಿಂತು ಸೇತುವೆ ಮೇಲೆ ಹರಿದು ಅಕ್ಕ-ಪಕ್ಕದ ಜಮೀನು ನೀರಿನಿಂದ ಜಲಾವೃತ್ತಗೊಂಡಿದೆ. ಮಳೆ ಬಂದಾಗಲೆಲ್ಲ ಸೇತುವೆ ಮೇಲೆ ನೀರು ಹರಿಯುವುದು ಸಹಜ. ಆದರೆ, ಈ ಬಾರಿ ನೂರಾರು ಎಕರೆ ಬೆಳೆ ಹಾನಿಯಾಗಿದೆ ಎಂದರು.ಬೆಳೆ ಹಾನಿ ಕುರಿತು ತಹಸೀಲ್ದಾರ್ ಜತೆ ಚರ್ಚಿಸಿದ್ದು, ರೈತರಿಗೆ ಪರಿಹಾರ ನೀಡಲು ಸೂಚಿಸಿದ್ದೇನೆ. ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಜತೆ ಚರ್ಚಿಸಿ ರೈತರಿಗೆ ಹೆಚ್ಚಿನ ಪರಿಹಾರ ನೀಡಲಾಗುವುದು. ಸೇತುವೆ ನಿರ್ಮಾಣ ಸಂಬಂಧ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳಿಗೆ ನೀಲ ನಕ್ಷೆ ತಯಾರಿಸುವಂತೆ ಸೂಚಿಸಿದ್ದೆನೆ ಎಂದು ಭರವಸೆ ನೀಡಿದರು.
ಈ ಭಾಗದ ರೈತರಿಗೆ ಬದಲಿ ರಸ್ತೆಯಲ್ಲಿ ಹೋಗುವ ವ್ಯವಸ್ಥೆ ಇರುವುದರಿಂದ ರೈತರು ತಾಳ್ಮೆಯಿಂದ ಇದ್ದರೆ ಶೀಘ್ರದಲ್ಲೇ ಈ ಸೇತುವೆಗೆ ಶಾಶ್ವತವಾಗಿ ಪರಿಹಾರ ಮಾಡಿ ಯಾವುದೇ ರೈತರಿಗೆ ತೊಂದರೆ ಆಗದಂತೆ ಇನ್ನೇರಡು ಮೂರು ತಿಂಗಳಲ್ಲೇ ಸೇತುವೆ ನಿರ್ಮಾಣ ಮಾಡಲು ಕ್ರಮ ವಹಿಸುವುದಾಗಿ ಭವರಸೆ ನೀಡಿದರು.ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಂದರ್ಶ, ಮುಖಂಡರಾದ ಮುಟ್ಟನಹಳ್ಳಿ ಮಹೇಂದ್ರ, ಗ್ರಾಪಂ ಸದಸ್ಯ ಚಂದ್ರಶೇಖರ್, ವಸ್ತೇಗೌಡ, ಪ್ರಸನ್ನ, ಸುರೇಶ್ , ಪುಟ್ಟರಾಜು ಸೇರಿದಂತೆ ಮತ್ತಿತರಿದ್ದರು.