ಹೆಣ್ಣಿನ ಹುಡುಕಾಟಕ್ಕಾಗಿ ಎಲ್ಲೆಡೆ ಸಂಚಾರ : ಹೆಬ್ರಿಯಲ್ಲೊಂದು 15 ಅಡಿ ಉದ್ದದ ಕಾಳಿಂಗ ಪತ್ತೆ

KannadaprabhaNewsNetwork | Updated : Apr 04 2024, 09:01 AM IST

ಸಾರಾಂಶ

ಕಾಳಿಂಗ ಸರ್ಪ ವಿಶ್ವದ ಅತಿ ಉದ್ದದ ವಿಷಪೂರಿತ ಹಾವುಗಳಾಗಿದ್ದು, 15 ಅಡಿ ಉದ್ದದ ಕಾಳಿಂಗ ಹಾವು ಕಾಣಿಸಿದ್ದು ಭಾರತದಲ್ಲಿ ಇದೇ ಮೊದಲು ಎಂದು ಡಾ.ಪಿ. ಗೌರಿಶಂಕರ್ ತಿಳಿಸಿದ್ದಾರೆ.

 ಕಾರ್ಕಳ :  ಹೆಬ್ರಿ ತಾಲೂಕಿನ ನಾಡಪಾಲ್ ಗ್ರಾಮದ ಭಾಸ್ಕರ್ ಶೆಟ್ಟಿ ಎಂಬವರ ಮನೆ ಬಳಿ ಬರೋಬ್ಬರಿ 15 ಅಡಿ ಉದ್ದದ 12.5 ಕೆ.ಜಿ. ತೂಕದ ಕಾಳಿಂಗ ಸರ್ಪವೊಂದನ್ನು ರಕ್ಷಣೆ ಮಾಡಲಾಗಿದೆ. ಉರಗ ತಜ್ಞ ಡಾ.ಪಿ.ಗೌರಿ ಶಂಕರ್ ರಕ್ಷಣೆ ಮಾಡಿದ್ದಾರೆ.

15 ಅಡಿ ಉದ್ದದ ಕಾಳಿಂಗ ಹಾವು ಕಾಣಿಸಿದ್ದು ಭಾರತದಲ್ಲಿ ಇದೇ ಮೊದಲು ಎಂದು ಡಾ.ಪಿ. ಗೌರಿಶಂಕರ್ ತಿಳಿಸಿದ್ದಾರೆ.ಕಾಳಿಂಗ ಸರ್ಪ ವಿಶ್ವದ ಅತಿ ಉದ್ದದ ವಿಷಪೂರಿತ ಹಾವುಗಳಾಗಿದ್ದು, ದಕ್ಷಿಣ ಮತ್ತು ಆಗ್ನೇಯ ಏಷ್ಯಾದಲ್ಲಿ ಈ ಹಾವುಗಳು ಹೆಚ್ಚಾಗಿ ಕಂಡು ಬರುತ್ತವೆ. ಥಾಯ್ಲೆಂಡ್‌ನಲ್ಲಿ 18 ಅಡಿಗಳಷ್ಟು ಉದ್ದವನ್ನು ಹಾವುಗಳಿವೆ. ಆದರೆ ಪ್ರಸ್ತುತ ಆಗುಂಬೆ ಬಳಿ ಪತ್ತೆಯಾಗಿರುವುದು ಭಾರತದಲ್ಲಿ ಅಪರೂಪದ ಹಾವುಗಳಾಗಿವೆ.ಫೆಬ್ರುವರಿಯಿಂದ ಮೇ ತಿಂಗಳು ಸಂತಾನೋತ್ಪತ್ತಿ ಅವಧಿಯಾಗಿದ್ದು, ಈ ಹಾವುಗಳು ತನ್ನ ಸಂಗಾತಿಯನ್ನು ಅರಸಿ ಹೊರಬರುತ್ತವೆ. ಇದರಿಂದಾಗಿ ಈ ಸಂದರ್ಭದಲ್ಲಿ ಮಾನವ-ಹಾವುಗಳ ಸಂಘರ್ಷ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಕಾಳಿಂಗ ಫೌಂಡೇಶನ್‌ಗೆ ಹೆಚ್ಚಿನ ಕರೆಗಳು ಬರುತ್ತವೆ ಎಂದು ಡಾ. ಶಂಕರ್ ಹೇಳಿದ್ದಾರೆ.

* ಸರಾಸರಿ ತೂಕ:

ಈ ಹಾವುಗಳ ಸರಾಸರಿ ತೂಕವು ಸಾಮಾನ್ಯವಾಗಿ 3.5 ಕಿ.ಗ್ರಾಂ. ನಿಂದ 7 ಕಿಲೋ ಗ್ರಾಂಗಳ ವರೆಗೆ ಇರುತ್ತದೆ. ಹೆಣ್ಣು 2 ರಿಂದ 3.5 ಕಿಲೋ ಗ್ರಾಂಗಳಷ್ಟು ಮತ್ತು ಗಂಡು 3.5 ರಿಂದ 6 ಕಿಲೋಗ್ರಾಂಗಳಷ್ಟು ತೂಕವಿರುತ್ತದೆ. ಆದರೆ, ಪ್ರಸ್ತುತ ರಕ್ಷಣೆ ಮಾಡಿದ ಹಾವು 12.5 ಕಿಲೋಗ್ರಾಂಗಳಷ್ಟು ತೂಕವನ್ನು ಹೊಂದಿದ್ದು, ಸುಮಾರು 15 ಅಡಿ ಉದ್ದವಿದೆ. ಇಷ್ಟು ದೊಡ್ಡ ಗಾತ್ರದ ಕಾಳಿಂಗ ಸರ್ಪ ಇಡೀ ಭಾರತದಲ್ಲೇ ಸಿಗುವುದು ಅಪರೂಪ. ಈ ಹಾವುಗಳ ಪತ್ತೆ, ಮಲೆನಾಡು ಪ್ರದೇಶದಲ್ಲಿ ಬೆಳೆಯುತ್ತಿರುವ ಆರೋಗ್ಯಕರ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಶಂಕರ್ ತಿಳಿಸಿದ್ದಾರೆ.* ಸಂಚಾರ ಸಾಮಾನ್ಯ: ಸಾಮಾನ್ಯವಾಗಿ ಮಾರ್ಚ್ ಮೊದಲ ವಾರದಿಂದ ಜೂನ್ ಮೊದಲ ವಾರದ ವರೆಗೂ ಕಾಳಿಂಗಗಳು ಮಿಲನ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಸಮಯವಾಗಿದ್ದು, ಇದಕ್ಕೂ ಮುಂಚೆ ತನ್ನ ಆಹಾರವನ್ನು ಹುಡುಕಿ ದೇಹವನ್ನು ಮಿಲನಕ್ಕೆ ಅಣಿಗೊಳಿಸುವ ಪ್ರಕ್ರಿಯೆ ಮುಗಿಸಿರುತ್ತವೆ. ವಯಸ್ಸಿಗೆ ಬಂದ ಹೆಣ್ಣು ಹಾವು ತಾನು ಸಂತಾನೋತ್ಪತ್ತಿಗೆ ಸಿದ್ಧ ಎಂದು ತನ್ನ ಜನನಾಂಗದಿಂದ ಲೈಂಗಿಕ ಸಂಕೇತ ವನ್ನು ಹೊರಸೂಸುವ ರಾಸಾಯನಿಕ (ಸೆಕ್ಸ್‌ ಫೆರಮೋನ್) ಅಂಶವನ್ನು ಹೊರಹಾಕುವುದರ ಮೂಲಕ ವ್ಯಕ್ತ ಪಡಿಸುತ್ತದೆ. ಈ ರಾಸಾಯನಿಕಕ್ಕೆ ಆಕರ್ಷಿತವಾದ ಗಂಡುಗಳು ಮಿಲನಕ್ಕಾಗಿ ಹೆಣ್ಣಿನ ಹುಡುಕಾಟದಲ್ಲಿ ತೊಡಗುತ್ತವೆ. ಅದ್ದರಿಂದ ಎಲ್ಲ ಕಡೆಗಳಲ್ಲಿ ಕಾಳಿಂಗ ಸರ್ಪಗಳ ಸಂಚಾರ ಸಾಮಾನ್ಯ.

Share this article