ಕನ್ನಡಪ್ರಭ ವಾರ್ತೆ ತಿಪಟೂರು
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪೂಜ್ಯ ವೀರೇಂದ್ರ ಹೆಗ್ಗಡೆಯವರು ಬಡತನ ನಿರ್ಮೂಲನೆಗೆ ಹಾಗೂ ಶ್ರೀಸಾಮಾನ್ಯರ ಬದುಕನ್ನು ಹಸನಗೊಳಿಸುವಂತಹ ಸಾಮಾಜಿಕ ಕಳಕಳಿಯುಳ್ಳ ದೂರದೃಷ್ಟಿ ಯೋಜನೆಗಳನ್ನು ರಾಜ್ಯದಲ್ಲಿ ರೂಪಿಸುವ ಮೂಲಕ ಸಮಾಜದ ಆಸ್ತಿಯಾಗಿದ್ದಾರೆಂದು ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದರು.ತಾಲೂಕಿನ ಮತ್ತಿಹಳ್ಳಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸಾಮೂಹಿಕ ಶ್ರೀ ಶಿವ ಪಂಚಾಕ್ಷರಿ ಪಠಣ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಂಬಿಕೆಗಿಂತ ಬೇರ‍್ಯಾವುದು ಯಾವುದು ಇಲ್ಲ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ರೈತಪರ, ಜನಪರ, ಮಹಿಳೆಯರ ಪ್ರಗತಿಗಾಗಿ ಹತ್ತಾರು ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿ ಸಮಾಜದ ಒಟ್ಟಾರೆಯಾಗಿ ಅಭ್ಯೂದಯಕ್ಕಾಗಿ ಶ್ರಮಿಸುತ್ತಿದೆ. ಪೂಜ್ಯ ವೀರೇಂದ್ರ ಹೆಗ್ಗಡೆಯವರು ಒಂದು ತಾಲೂಕಿಗೆ ಸೀಮಿತವಾಗದೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿಯೂ ಯೋಜನೆ ಮೂಲಕ ಬಡವರು, ನಿರ್ಗತಿಕರು, ನಿರಾಶ್ರಿತರ ಏಳಿಗೆಗಾಗಿ ಅವಿರತ ಶ್ರಮಿಸುತ್ತಿದ್ದಾರೆ. ಈ ನಿಸ್ವಾರ್ಥ ಸೇವೆಯನ್ನು ನಾನು ಹಲವಾರು ವರ್ಷಗಳಿಂದಲೂ ಕಣ್ಣಾರೆ ಕಂಡಿದ್ದೇನೆ. ಕ್ಷೇತ್ರದ ಒಬ್ಬ ಧರ್ಮಧಿಕಾರಿಯಾಗಿ ಯಾರ ಹಿತವನ್ನೂ ಕಸಿಯದೆ ಎಲ್ಲರ ಒಳಿತಾಗಿ ತಮ್ಮ ಸಂಸ್ಥೆಯನ್ನೇ ಮೂಡುಪಾಗಿಟ್ಟಿದ್ದಾರೆ. ಕೆರೆ ಹೂಳೆತ್ತುವ ಕಾರ್ಯ, ಕೃಷಿ ಚಟುವಟಿಕೆ, ವೃತ್ತಿಪರ ಶಿಕ್ಷಣ, ಹೈನುಗಾರಿಕೆ, ಸ್ವಯಂ ಉದ್ಯೋಗ ಸೇರಿದಂತೆ ಡಾ. ವೀರೆಂದ್ರಹೆಗ್ಡೆಯವರು ಹತ್ತು ಹಲವು ಯೋಜನೆಗಳನ್ನು ತಂದು ದೇಶದ ಏಳಿಗೆಯನ್ನು ಬಯಸುತ್ತಿದ್ದಾರೆ. ಪೂಜ್ಯರು ಜನರಲ್ಲಿ ಧಾರ್ಮಿಕ ಮನೋಭಾವವನ್ನು ಬೆಳೆಸುವುದಕ್ಕಾಗಿ ಶಿವ ಪಂಚಾಕ್ಷರಿ ಪಠಣ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಿದ್ದು ಇದು ಮಾನಸಿಕ ಹಾಗೂ ಬೌದ್ಧಿಕ ನೆಮ್ಮದಿಯನ್ನು ಕಂಡುಕೊಳ್ಳಲು ಸಹಕಾರಿಯಾಗಿದೆ ಎಂದರು. ಸಮಾರಂಭದಲ್ಲಿ ಹಿರಿಯ ಆಯುಷ್ ವೈದ್ಯಾಧಿಕಾರಿ ಡಾ. ಸುಮನಾ ಧಾರ್ಮಿಕ ಉಪನ್ಯಾಸ ನೀಡಿದರು. ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್, ತಹಸೀಲ್ದಾರ್ ಪವನ್‌ಕುಮಾರ್, ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ, ತಾ. ಯೋಜನಾಧಿಕಾರಿ ಕೆ. ಉದಯ್, ಗ್ರಾ.ಪಂ ಅಧ್ಯಕ್ಷೆ ಜ್ಯೋತಿ, ಪಿಡಿಓ ಈಜಿ ಶಿವರಾಜು, ಅರ್ಚಕ ಷಡಕ್ಷರಿ, ಜಿಲ್ಲಾ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಎಂ.ಡಿ. ಪದ್ಮಾವತಿ, ಮೇಲ್ವಿಚಾರಕಿ ಅನಿತಾ ಸೇರಿದಂತೆ ಸೇವಾಪ್ರತಿನಿಧಿಗಳು, ಸೇವಾದಾರರು, ಸ್ವ ಸಹಾಯ ಪ್ರಗತಿಬಂದು ಸಂಘದ ಸದಸ್ಯರು, ಗ್ರಾಮಸ್ಥರು ಭಾಗವಹಿಸಿದ್ದರು.