ಕನ್ನಡಪ್ರಭ ವಾರ್ತೆ ಮೂಲ್ಕಿ
ಸೇವಾ ಸಂಸ್ಥೆಗಳು ಸರ್ಕಾರದ ಜನಪರ ಯೋಜನೆಗಳನ್ನು ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ದೊರಕಿಸಲು ಪ್ರಯತ್ನಿಸಬೇಕು. ಶಿಕ್ಷಣ, ಸಮಾಜ ಸೇವೆ ಮೂಲಕ ಸಮಾಜದಲ್ಲಿ ಗುರುತಿಸುವಂತಹ ಕಾರ್ಯ ಮಾಡಬೇಕೆಂದು ಪಾರ್ತಿಸುಬ್ಬ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕವಿ, ಸಾಹಿತಿ, ರಂಗ ಚಿಂತಕ ಶ್ರೀಧರ ಡಿ.ಎಸ್. ಹೇಳಿದರು.ಪುನರೂರು ಪ್ರತಿಷ್ಠಾನ ವತಿಯಿಂದ ಜನ ವಿಕಾಸ ಸಮಿತಿ ಮೂಲ್ಕಿ ಸಹಯೋಗದಲ್ಲಿ ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ವಠಾರದಲ್ಲಿ ಜರುಗಿದ ‘ಪುನರೂರು ಸಂಭ್ರಮ-2024’ ಹಾಗೂ ಸಾಧಕ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷ ಧರ್ಮದರ್ಶಿ ಡಾ.ಹರಿಕೃಷ್ಣ ಪುನರೂರು ವಹಿಸಿದ್ದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆನುವಂಶಿಕ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣರು ಶುಭಾಸಂಶನೆಗೈದರು. ಕಿನ್ನಿಗೋಳಿ ಯುಗಪುರುಷದ ಪ್ರಧಾನ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ, ಕಿನ್ನಿಗೋಳಿಯ ಶಿವಪ್ರಣಂ ಸ್ಕೂಲ್ ಆಫ್ ಡಾನ್ಸ್‌ನ ವ್ಯವಸ್ಥಾಪಕ ರಿತೇಶ್, ಪುನರೂರು ಶ್ರೀ ವಿಶ್ವನಾಥ ದೇವಸ್ಥಾನದ ಮೊಕ್ತೇಸರ ಪಟೇಲ್ ವಾಸುದೇವ ರಾವ್, ಪುನರೂರು ಪ್ರತಿಷ್ಠಾನದ ಗೌರವಾಧ್ಯಕ್ಷೆ ಎಚ್.ಕೆ. ಉಷಾರಾಣಿ, ಅಧ್ಯಕ್ಷ ದೇವ ಪ್ರಸಾದ್ ಪುನರೂರು, ಪ್ರಧಾನ ಕಾರ್ಯದರ್ಶಿ ಶ್ರೇಯಾ ಪುನರೂರು, ಜನ ವಿಕಾಸ ಸಮಿತಿಯ ಅಧ್ಯಕ್ಷೆ ಶೋಭಾ ರಾವ್ ಮತ್ತಿತರರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಂಸ್ಥೆ ವತಿಯಿಂದ ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ಪ್ರತಿಭಾ ಸೌರಭ-2023ರ ಸ್ಪರ್ಧೆಯಲ್ಲಿ ಭಾಗವಹಿಸಿದ 405 ವಿದ್ಯಾರ್ಥಿಗಳಿಗೆ ಧನ್ಯತಾ ಪತ್ರ ಹಾಗೂ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅನ್ನಪೂರ್ಣ ರಿತೇಶ್ ನಿರ್ದೇಶನದಲ್ಲಿ ಶಿವಪ್ರಣಾಮ್ ಸ್ಕೂಲ್ ಆಫ್ ಡ್ಯಾನ್ಸ್ ಕಿನ್ನಿಗೋಳಿ ಇವರಿಂದ ನಾಟ್ಯ ಯಕ್ಷ ವೈಭವ ನಡೆಯಿತು. ದೇವಪ್ರಸಾದ್ ಪುನರೂರು ಸ್ವಾಗತಿಸಿದರು. ಜಿತೇಂದ್ರ ವಿ. ರಾವ್ ಹೆಜಮಾಡಿ ನಿರೂಪಿಸಿದರು.