ಶನಿವಾರಸಂತೆ ಹೋಬಳಿಯ ನಿಡ್ತ ಗ್ರಾಮ ಪಂಚಾಯಿತಿ ಗ್ರಾಮಸಭೆ

KannadaprabhaNewsNetwork | Published : Dec 28, 2023 1:45 AM

ಸಾರಾಂಶ

ಶನಿವಾರಸಂತೆ ಹೋಬಳಿಯ ನಿಡ್ತ ಗ್ರಾಮ ಪಂಚಾಯಿತಿ ಗ್ರಾಮಸಭೆ ಗ್ರಾಪಂ ಅಧ್ಯಕ್ಷ ಎಚ್‌.ಡಿ. ಮನು ಅಧ್ಯಕ್ಷತೆಯಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಸಮೀಪದ ನಿಡ್ತ ಗ್ರಾ.ಪಂ.ಯ 2023-24ನೇ ಸಾಲಿನ ಗ್ರಾಮಸಭೆ ಬುಧವಾರ ನಿಡ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಗ್ರಾ.ಪಂ.ಅಧ್ಯಕ್ಷ ಎಚ್.ಡಿ.ಮನು ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮಸಭೆ ಪ್ರಾರಂಭದಲ್ಲಿ ಇಲಾಖೆ ಅಧಿಕಾರಿಗಳಿಂದ ಮಾಹಿತಿ ನೀಡಲು ಅನುಮತಿ ನೀಡಿದ ಹಿನ್ನೆಲೆ ಆಕ್ಷೇಪ ಎತ್ತಿದ ಮಾಜಿ ಗ್ರಾ.ಪಂ.ಸದಸ್ಯ ವಿಜಯ್ ಗ್ರಾಮಸಭೆ ಅಜಂಡದಂತೆ ಸಭೆ ನಡೆಸಿ ಗ್ರಾ.ಪಂ.ನಿಂದ ಹಿಂದೆ ಆಗಿರುವ ಕಾಮಗಾರಿಗಳ ವರದಿ ಸೇರಿದಂತೆ ಹಿಂದಿನ ಗ್ರಾಮಸಭೆಯಲ್ಲಿ ಆಗಿರುವ ಪ್ರಸ್ತಾವನೆ ವರದಿಯನ್ನು ಸಭೆಯಲ್ಲಿ ಮಂಡಿಸಬೇಕು. ಸಭೆ ಪ್ರಾರಂಭದಲ್ಲೇ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲು ಅವಕಾಶ ಕೊಡಬೇಡಿ ವರದಿ ನೀಡಿ ಇದಕ್ಕೆ ಸಂಬಂಧಿಸಿದಂತೆ ಚರ್ಚೆಯಾದ ನಂತರ ಅವಕಾಶ ಕೊಡಿ ಎಂದರು. ಅದರಂತೆ ಗ್ರಾ.ಪಂ.ಯಿಂದ ಆಗಿರುವ ಕಾಮಗಾರಿ ಅಭಿವೃದ್ಧಿ ಪ್ರಸ್ತಾವನೆ ವರದಿಯನ್ನು ಸಭೆಯಲ್ಲಿ ಮಂಡಿಸಲಾಯಿತು. ವರದಿ ಪಟ್ಟಿಯಲ್ಲಿರುವಂತೆ ಗ್ರಾ.ಪಂ.ವ್ಯಾಪ್ತಿಯಲ್ಲಿ ಆಗುವ ವಿವಿಧ ಅಭಿವೃದ್ಧಿ ಕಾಮಗಾರಿ ಯಾವುದು ಆಗುವುದಿಲ್ಲ. ಕಾಮಗಾರಿ ಪಟ್ಟಿಯಲ್ಲಿ ಮಾತ್ರ ಹೆಸರಿರುತ್ತದೆ. ಆದರೆ ಕಾಮಗಾರಿಗಳು ಅನುಷ್ಠಾನಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥ ಜಾಗೇನಹಳ್ಳಿ ಸುರೇಶ್ ಆಕ್ಷೇಪ ವ್ಯಕ್ತ ಪಡಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ಹರೀಶ್ ಗ್ರಾ.ಪಂ.ವ್ಯಾಪ್ತಿಯ ಅಭಿವೃದ್ಧಿ ದೃಷ್ಟಿಯಿಂದ ಕಾಮಗಾರಿಗಳ ಪ್ರಸ್ತಾವನೆ ಮಾಡಲಾಗುತ್ತದೆ. ಆದರೆ ಸರ್ಕಾರದ ವಿವಿಧ ಅನುದಾನ ಬಂದಂತೆ ಕಾಮಗಾರಿಗಳಿಗೆ ತಕ್ಕಂತೆ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತದೆ. ಅದರಂತೆಯೇ ಆದ್ಯತೆ ಪ್ರಕಾರವಾಗಿ ಕಾಮಗಾರಿಗಳನ್ನು ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.ಅಧಿಕಾರಿಗಳ ಮಾಹಿತಿ ನೀಡುವ ಸಂದರ್ಭ ನಡೆದ ಚರ್ಚೆ ಸಂದರ್ಭ ಗ್ರಾಮಸ್ಥ ಪುಟ್ಟಣ್ಣ ವಿಷಯ ಪ್ರಸ್ತಾಪಿಸಿ ಎಲ್ಲಾ ಇಲಾಖೆಯ ಅಧಿಕಾರಿಗಳು ಗ್ರಾಮಸಭೆ ನಡೆಯುವ ಸಂದರ್ಭದಲ್ಲಿ ಮಾತ್ರ ಇಲಾಖೆಯ ಯೋಜನೆ, ಇಲಾಖೆಯಿಂದ ಜನರಿಗೆ ದೊರೆಯುವ ಸೇವೆ ಸೌಲಭ್ಯಗಳ ಬಗ್ಗೆ ಸುಲಭವಾಗಿ ದೊರೆಯುವಂತೆ ಹೇಳುತ್ತಾರಷ್ಟೆ. ಆದರೆ ಫಲಾನುಭವಿಗಳು ಕಚೇರಿ ಹೋದಾಗ ಅಲೆದಾಡಿಸುತ್ತಾರೆ. ಯಾವುದೆ ಕೆಲಸವಾಗುವುದಿಲ್ಲ ಎಂದು ಅಸಮಾಧಾನ ವ್ಯಕ್ತ ಪಡಿಸಿದರು. ಅರಣ್ಯ ಇಲಾಖೆ ಅಧಿಕಾರಿ ಶ್ರೀನಿವಾಸ್ ಇಲಾಖೆಯ ಯೋಜನೆ ಕುರಿತಾಗಿ ಮಾಹಿತಿ ನೀಡುತ್ತಿದ್ದ ಸಂದರ್ಭ ಗ್ರಾಮಸ್ಥರು ಅರಣ್ಯದಿಂದ ಕಾಡುಹಂದಿ ನಾವು ಮಾಡಿರುವ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿವೆ. ನಾವು ಬೆಳೆಯನ್ನು ರಕ್ಷಿಸುಗೋಸ್ಕರ ಕಾಡುಹಂದಿಯನ್ನು ಹೊಡೆಯಲು ಅರಣ್ಯ ಇಲಾಖೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು. ಅರಣ್ಯ ಇಲಾಖೆ ಅರಣ್ಯದಲ್ಲಿ ತೇಗ, ಸಿಲ್ವರ್ ಮರವನ್ನು ಬೆಳೆಸುತ್ತಾರೆ ಇದರಿಂದ ಏನೂ ಪ್ರಯೋಜನವಾಗದು ಬದಲಿಗೆ ನೀರಿನಾಂಶ, ಕಾಡಾನೆ, ಕಾಡು ಪ್ರಾಣಿಗಳಿಗೆ ಆಹಾರವಾಗುವಂತ ಮರಗಿಡಗಳನ್ನು ಬೆಳೆಸುವುದರಿಂದ ಕಾಡಾನೆ, ಕಾಡು ಪ್ರಾಣಿಗಳು ಗ್ರಾಮದೊಳಗೆ ಬರುವುದಿಲ್ಲ ಎಂದು ಗ್ರಾಮಸ್ಥರ ಪರವಾಗಿ ಗ್ರಾ.ಪಂ.ಸದಸ್ಯ ಕಾರ್ತಿಕ್ ಪ್ರಸ್ತಾಪಿಸಿದರು.

ವಿದ್ಯುತ್ ಇಲಾಖೆ ಕುರಿತು ಮಾಹಿತಿ ನೀಡಿದ ಶನಿವಾರಸಂತೆ ಚೆಸ್ಕಾಂ ಅಭಿಯಂತರ ಸುದೀಪ್ ಗೃಹಜ್ಯೋತಿ ಯೋಜನೆಯ ಉಪಯೋಗ ಪಡೆಯದೆ ಇರುವ ಫಲಾನುಭವಿಗಳು ಇಲಾಖೆ ಕಚೇರಿಗೆ ಬಂದು ಯೋಜನೆಯ ಉಪಯೋಗವನ್ನು ಪಡೆದುಕೊಳ್ಳಬಹುದು ಎಂದರು.

ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಮಾಹಿತಿ ನೀಡಿದ ಗ್ರಾಮ ಆಡಳಿತ ಅಧಿಕಾರಿ ರಜಾಕ್ ಶನಿವಾರಸಂತೆ ಹೋಬಳಿಯ 6 ಗ್ರಾ.ಪಂ.ವ್ಯಾಪ್ತಿಯಲ್ಲಿ 64 ಕೆರೆಗಳನ್ನು ಒತ್ತುವರಿ ಮಾಡಿರುವ ಬಗ್ಗೆ ಮಾಹಿತಿ ಇದ್ದು ಕಂದಾಯ ಇಲಾಖೆ ಕೆರೆಗಳ ಮೂಲ ವಿಸ್ತೀರ್ಣದ ಬಗ್ಗೆ ಸರ್ವೆ ಕಾರ್ಯ ನಡೆಸಿದ ಮೇಲೆ ಒತ್ತುವರಿ ಮಾಡಿರುವ ಕೆರೆಯನ್ನು ತೆರವುಗೊಳಿಸಿ ಸಂಬಂಧ ಪಡುವ ಗ್ರಾ.ಪಂ.ಗಳಿಗೆ ಹಸ್ತಾಂತರಿಸಲಾಗುತ್ತದೆ ಎಂದರು.

ಉದ್ಯೋಗ ಖಾತ್ರಿ ಯೋಜನೆ ಕುರಿತು ಇಲಾಖೆಯ ಅಭಿಯಂತರ ಅಶೋಕ್ ಮಾಹಿತಿ ನೀಡಿದರು. ವಿವಿಧ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು. ಶನಿವಾರಸಂತೆ ಪಶುವೈದ್ಯ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸತೀಶ್ ಗ್ರಾಮಸಭೆಯ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷ ಎಚ್.ಡಿ.ಮನು ಮಾತನಾಡಿದರು. ಗ್ರಾ.ಪಂ.ಉಪಾಧ್ಯಕ್ಷೆ ಸುಮಿತ್ರ, ಗ್ರಾ.ಪಂ.ಯ ಸದಸ್ಯರು ಗ್ರಾ.ಪಂ.ಸಿಬ್ಬಂದಿ ಸಭೆಯಲ್ಲಿ ಹಾಜರಿದ್ದರು.

Share this article