ಜನರನ್ನು ಒಂದುಗೂಡಿಸಲು ಕನ್ನಡ ಭಾಷೆ ಸಹಕರಿಸಿ: ಪ್ರೊ. ನರೇಂದ್ರ ರೈ ದೇರ್ಲ

KannadaprabhaNewsNetwork | Published : Dec 3, 2024 12:32 AM

ಸಾರಾಂಶ

ಬಹುತತ್ವದ ಜನರನ್ನು ಒಂದುಗೂಡಿಸಲು ಕನ್ನಡ ಭಾಷೆ ಮತ್ತು ಸಾಹಿತ್ಯ ಸಹಕರಿಸುತ್ತದೆ ಎಂದು ನಿವೃತ್ತ ಪ್ರಾಧ್ಯಾಪಕ ನರೇಂದ್ರ ರೈ ದೇರ್ಲ ಹೇಳಿದರು.

ಕನ್ನಡಪ್ರಭವಾರ್ತೆವಿರಾಜಪೇಟೆ

ಬಹು ಜಾತಿ, ಬಹು ಧರ್ಮ, ಬಹು ತತ್ವದ ಜನರನ್ನು ಒಂದುಗೂಡಿಸಲು ಕನ್ನಡ ಭಾಷೆ ಮತ್ತು ಸಾಹಿತ್ಯ ಸಹಕರಿಸುತ್ತದೆ ಎಂದು ಕವಿ, ಸಾಹಿತಿ, ಬರಹಗಾರ ಹಾಗೂ ನಿವೃತ್ತ ಪ್ರಾಧ್ಯಾಪಕ ಪ್ರೊ. ನರೇಂದ್ರ ರೈ ದೇರ್ಲ ಹೇಳಿದರು.

ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕರುನಾಡ ಸಂಭ್ರಮ 24 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಭಿತ್ತಿ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪಂಪ, ರನ್ನ, ಬಸವಣ್ಣ, ಶರೀಫ, ಅಲ್ಲಮ, ಅಕ್ಕಮಹಾದೇವಿ, ಕುವೆಂಪು ಬೇಂದ್ರೆಯವರ ಸಾಹಿತ್ಯವನ್ನು ಓದುವುದರಿಂದ ಆತ್ಮೀಯತೆಯ ಬಂಧ ಬೆಳೆಯುತ್ತದೆ. ಜಾಗತೀಕರಣ ಮತ್ತು ಕೊರೊನಾದಿಂದ ಮಕ್ಕಳ ಮನಸ್ಸು ಹಾಳಾಗಿದೆ. ಯಂತ್ರಗಳಂತೆ ಮರ ಗಟ್ಟಿ ಹೋದಂತಹ ಮನಸ್ಸುಗಳನ್ನು ಮತ್ತೆ ಸೂಕ್ಷ್ಮಗೊಳಿಸುವುದಕ್ಕೆ ಸಂವೇದನಾಶೀಲರನ್ನಾಗಿ ಮಾಡುವುದಕ್ಕೆ ಕನ್ನಡ ಭಾಷೆ ಮತ್ತು ಸಾಹಿತ್ಯವು ದಿವ್ಯ ಔಷಧ ಎಂದರು.

ವಿದ್ಯಾರ್ಥಿಗಳು ಗಳಿಸುವ ಹೆಚ್ಚು ಅಂಕಗಳು ಮನಸ್ಸುಗಳನ್ನು ಜೋಡಿಸದಿದ್ದರೆ, ಸಂಬಂಧಗಳನ್ನು ಬೆಸೆಯದಿದ್ದರೆ ಅವು ವ್ಯರ್ಥ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಮಾದಂಡ ತಿಮ್ಮಯ್ಯ ಅವರು ಮಾತನಾಡಿ ಜಾಗತೀಕರಣದ ನೆಲೆಯಲ್ಲಿ ವಿಶ್ವದ ಯಾವುದೇ ಮೂಲೆಗೆ ತೆರಳಿದರೂ ಕನ್ನಡ ಮಾತನಾಡುವ ಕಲಿಸುವ ಹೊಣೆ ನಮ್ಮದಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ ಡಾ. ದಯಾನಂದ ಕೆ.ಸಿ. ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ದಿನಪತ್ರಿಕೆಗಳನ್ನು ಹಾಗೂ ಪುಸ್ತಕಗಳನ್ನು ಓದುವುದರಿಂದ ಕನ್ನಡ ಭಾಷೆಯ ಹಾಗೂ ಸಾಹಿತ್ಯದ ಸತ್ವವನ್ನು ಸವಿಯಬೇಕು ಎಂದರು.

ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಬಸವರಾಜು ಕೆ ಅವರು ಸ್ವಾಗತಿಸಿದರು. ಕನ್ನಡ ಸಹಾಯಕ ಪ್ರಾಧ್ಯಾಪಕರಾದ ರಘುರಾಜ್ ಅವರು ಪ್ರಾಸ್ತಾವಿಕ ನುಡಿ ನುಡಿದರು. ಕನ್ನಡ ಉಪನ್ಯಾಸಕರಾದ ಡಾ. ಪ್ರಭು ವಂದಿಸಿದರು. ದ್ವಿತೀಯ ಬಿ.ಎ ವಿದ್ಯಾರ್ಥಿನಿ ಕೀರ್ತನ ಕಾರ್ಯಕ್ರಮವನ್ನು ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಗೀತೆಗಳ ಗಾಯನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕನ್ನಡ ಗೀತೆಗಳಿಗೆ ವಿದ್ಯಾರ್ಥಿಗಳು ನರ್ತಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share this article