ಎಸ್‌ಆರ್‌ಎಸ್ ಪ್ರಜ್ಞಾ ಶಾಲೆಯಲ್ಲಿ ಪದವಿ ಪ್ರದಾನ ಸಮಾರಂಭ
ಎಳೆಯ ವಯಸ್ಸಿನಲ್ಲಿ ಮಕ್ಕಳನ್ನು ಸೂಕ್ಷ್ಮವಾಗಿ ಗಮನಿಸುತ್ತ ಅವರ ಜೊತೆ ಹೆಚ್ಚಿನ ಸಮಯವನ್ನು ಕಳೆಯುವುದರಿಂದ ಮಕ್ಕಳು ತಮ್ಮ ಬಾಲ್ಯವನ್ನು ಸಂತೋಷಭರಿತವಾಗಿ ಪೋಷಕರೊಂದಿಗೆ ಕಳೆಯಲು ಸಹಾಯಕವಾಗುತ್ತದೆ ಎಂದು ಮಂಜುನಾಥ ಆಸ್ಪತ್ರೆಯ ಡಾ. ಅಮೋಘ್‌ಗೌಡ ತಿಳಿಸಿದರು.
ನಗರದ ಎಸ್.ಆರ್.ಎಸ್. ಪ್ರಜ್ಞಾ ವಿದ್ಯಾಶಾಲೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಪೂರ್ವ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಯುಕೆಜಿ ತರಗತಿಯನ್ನು ಮುಗಿಸಿದ ಪುಟಾಣಿ ಮಕ್ಕಳಿಗೆ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಪೂರ್ವ ಪ್ರಾಥಮಿಕ ಶಾಲಾ ಹಂತದ ಪುಟಾಣಿ ಮಕ್ಕಳು ಅನುಕರಣೆಯ ಮೂಲಕ ಕಲಿಯುವಂತಹದ್ದು ಹೆಚ್ಚಾಗಿರುವುದರಿಂದ ತಂದೆ, ತಾಯಿ ಮನೆಯಲ್ಲಿ ಮಕ್ಕಳ ಎದುರು ಎಚ್ಚರಿಕೆಯಿಂದಿದ್ದು ಸೌಹಾರ್ದಯುತವಾದ ವಾತಾವರಣವಿರುವಂತೆ ನೋಡಿಕೊಳ್ಳಬೇಕು. ಮಕ್ಕಳನ್ನು ಪಾಠದ ಜೊತೆಗೆ ಆಟೋಟಗಳಲ್ಲಿ ಹೆಚ್ಚಾಗಿ ತೊಡಗಿಸಿ ಅವರ ಮನೋದೈಹಿಕ ಬೆಳವಣಿಗೆಗೆ ಸಹಾಯವಾಗುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಅಧ್ಯಕ್ಷ ಆರ್. ರಾಜಗೋಪಾಲ ಶೆಟ್ಟಿ ಮಾತನಾಡಿ, ಪೂರ್ವ ಪ್ರಾಥಮಿಕ ಶಾಲಾ ಶಿಕ್ಷಣವನ್ನು ಮುಗಿಸಿ ಪ್ರಾಥಮಿಕ ಶಿಕ್ಷಣಕ್ಕೆ ಹೆಜ್ಜೆ ಇಡುತ್ತಿರುವ ಈ ಮಕ್ಕಳು ಮೂರು ವರ್ಷಗಳ ಅವಧಿಯಲ್ಲಿ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ವೃಧ್ಧಿಸಿಕೊಳ್ಳುವಂತಹ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳನ್ನು ಮನನ ಮಾಡಿಕೊಂಡಿದ್ದಾರೆ. ಇನ್ನು ಮುಂದೆ ಇವುಗಳ ಬಗ್ಗೆ ದೀರ್ಘ ಅಧ್ಯಯನ ಮಾಡಲು ಪೂರ್ವ ಪ್ರಾಥಮಿಕ ಹಂತದ ಕಲಿಕೆ ಬುನಾದಿಯಾಗಲಿದೆ. ಪೋಷಕರು ಹಾಗೂ ಶಿಕ್ಷಕರು ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಉದಾತ್ತ ಗುಣಗಳು, ಸನ್ನಡತೆ, ಉತ್ತಮ ಮೌಲ್ಯಗಳು ಹಾಗೂ ಗುರು-ಹಿರಿಯರ ಬಗ್ಗೆ ಗೌರವಗಳನ್ನು ಎಳೆಯ ವಯಸ್ಸಿನಿಂದಲೇ ಕಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ನಟರಾಜ್.ಎಂ., ಸಂಸ್ಥೆಯ ಟ್ರಸ್ಟಿ ಆಶಾ ನಟರಾಜ್, ಪುಟಾಣಿ ಪದವೀಧರರು, ಶಿಕ್ಷಕರು ಹಾಗೂ ಪೋಷಕರು ಇದ್ದರು.ಸಮಾರಂಭದಲ್ಲಿ ಪದವಿ ಪ್ರಮಾಣಪತ್ರ ಪಡೆದ ವಿದ್ಯಾರ್ಥಿಗಳು.