ರಾಮನಗರ: ಬಯಲು ಸೀಮೆ ಜಿಲ್ಲೆಗಳಿಗೆ ಅನುಕೂಲವಾಗಲಿರುವ ಮೇಕೆದಾಟು ಯೋಜನೆ ಜಾರಿ ಸೇರಿದಂತೆ ರೈತರ ಹಲವಾರು ಬೇಡಿಕೆಗಳನ್ನು ರಾಜ್ಯ ಸರ್ಕಾರ ಕೂಡಲೇ ಈಡೇರಿಸಬೇಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕನಕಪುರ ತಾಲೂಕು ಅಧ್ಯಕ್ಷ ಬಿ.ಸತೀಶ್ ಒತ್ತಾಯಿಸಿದರು.
ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ಪಕ್ಷ ಪಾದಯಾತ್ರೆ ನಡೆಸಿತ್ತು. ಇದೀಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ಬಜೆಟ್ ನಲ್ಲಿ ಯೋಜನೆಗೆ ಬೇಕಾದಷ್ಟು ಪೂರ್ಣ ಹಣವನ್ನು ತೆಗೆದಿರಿಸಿ ತ್ವರಿತವಾಗಿ ಜಲಾಶಯಕ್ಕೆ ಭೂಮಿ ಪೂಜೆ ನೆರವೇರಿಸುವ ಮೂಲಕ ಯೋಜನೆಗೆ ಚಾಲನೆ ನೀಡಬೇಕು. ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದುಕೊಳ್ಳಲಿ ಎಂದು ಹೇಳಿದರು.
ಸಾತನೂರು ತಾಲೂಕು ಮಾಡಲು 1984ರಿಂದ 3 ಸಮಿತಿಗಲ ರಚನೆ ಮಾಡಿದ್ದು, ಆ ಸಮಿತಿಯಲ್ಲಿ ರಾಮನಗರ ಜಿಲ್ಲೆಯ ಅತಿ ದೊಡ್ಡ ತಾಲೂಕಾದ ಕನಕಪುರ ತಾಲೂಕಿನ ಸಾತನೂರು ಹೋಬಳಿಯನ್ನು ಹೊಸ ತಾಲೂಕು ಮಾಡಬೇಕೆಂದು ಆಗಿನ ಸಮಿತಿಗಳೇ ವರದಿ ನೀಡಿವೆ. ಆದರೂ ತಾಲೂಕು ರಚನೆ ಮಾಡದೇ ಎಲ್ಲ ಸರ್ಕಾರಗಳು ಮೀನಮೇಷ ಮಾಡುತ್ತಿವೆ.ಸಾತನೂರು ವಿಧಾನಸಭಾ ಕ್ಷೇತ್ರ ಆಗಿದ್ದಾಗ 6 ಬಾರಿ ಪ್ರತಿನಿಧಿಸಿದ ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಗಳಾಗಿದ್ದು, ಅವರ ಮೇಲೆ ಸಾತನೂರಿನ ಋಣ ಇದೆ.
ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಮಾತ್ರವಲ್ಲದೆ ರೈತರ ಪ್ರಾಣ ಹಾನಿಯಾಗುತ್ತಿದೆ. ವನ್ಯಜೀವಿಗಳ ಉಪಟಳದಿಂದ ಬೆಳೆ ಬೆಳೆಯಲು ಆಗುತ್ತಿಲ್ಲ. ಬೆಳೆ ನಷ್ಟಕ್ಕೆ ನೀಡುತ್ತಿರುವ ಪರಿಹಾರ ಬಿತ್ತನೆಗೂ ಸಾಲುತ್ತಿಲ್ಲ. ವನ್ಯಜೀವಿಗಳ ಹಾವಳಿ ತಡೆಗಟ್ಟುವುದರ ಜೊತೆಗೆ ಬೆಳೆ ಹಾನಿಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ಸತೀಶ್ ಆಗ್ರಹಿಸಿದರು.
ಸರ್ಕಾರ ಬಿಡುಗಡೆ ಮಾಡಿದ ಆದೇಶದಂತೆ ಸರ್ಕಾರಿ ನಕಾಶೆ ರಸ್ತೆಗಳನ್ನು ಸರ್ಕಾರವೇ ಸ್ವಯಂ ಪ್ರೇರಿತವಾಗಿ ಅಧಿಕಾರಿಗಳಿಂದ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ರಸ್ತೆ ಮಾಡಿಸಿಕೊಡಬೇಕೆಂದು ಸತೀಶ್ ಆಗ್ರಹಿಸಿದರು.
23ಕೆಆರ್ ಎಂಎನ್ 1.ಜೆಪಿಜಿ