ರೋಣ: ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸ್ತ್ರೀ ಕುಲದ ಮಹಾನ್ ಅನರ್ಘ್ಯ ರತ್ನ, ಅವರ ತತ್ವಾದರ್ಶ, ಸಂದೇಶಗಳು ಎಂದೆಂದಿಗೂ ಅಜರಾಮರವಾಗಿವೆ. ಅವುಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯವಾಗಬೇಕಿದೆ ಎಂದು ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಅವರು ಶುಕ್ರವಾರ ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಮಹಾಸಾದ್ವಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮಸದ್ಬೋಧನಾ ಪೀಠ ಅಬ್ನುಗೇರಿ-ರೋಣ ವತಿಯಿಂದ ಜರುಗಿದ ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಶಿವಶರಣರ, ಶರಣೆಯರ ಮೌಲ್ಯಯುತ ಸಂದೇಶಗಳು ಅವರ ಜೀವನದ ಆದರ್ಶಗಳನ್ನು ಇಂದಿನ ಮಕ್ಕಳಿಗೆ ತಿಳಿಸುವ ಅಗತ್ಯತೆ ಇದೆ. ಹೇಮರೆಡ್ಡಿ ಮಲ್ಲಮ್ಮ ಬದುಕೇ ಒಂದು ಮಹಾನ್ ಗ್ರಂಥ. ಸನ್ಯಾನಿಸಿ, ವೈರಾಗಿಣಿ ಆಗದೆ, ಸಾಂಸಾರಿಕ ಜೀವನ ನಡೆಸುತ್ತ ಸಾಧನೆ ಮಾಡಬಹುದು ಎಂಬುದನ್ನು ನಿರೂಪಿಸಿದರು. ಪ್ರತಿಯೊಬ್ಬರೂ ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮಳ ಆದರ್ಶ ಅರಿತು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಮಹಾ ಮಹಿಮರ, ಶಿವ ಶರಣರ ಜಯಂತಿಯ ಆಚರಣೆಯ ಮೂಲಕ ಯುವ ಪೀಳಿಗೆಗೆ ಶರಣರ ಮಹತ್ವ ಸಾರುವ ಕೆಲಸ ಮಾಡಬೇಕಿದೆ. ರೆಡ್ಡಿ ಸಾಮಾಜವು ಎಲ್ಲ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದಿದೆ. ತಮ್ಮ ಬೆಳೆವಣಿಗೆಯೊಟ್ಟಿಗೆ ಇತರ ಸಮಾಜದ ಬೆಳವಣಿಗೆಗೆ ಸಮಾಜದ ಕೊಡುಗೆ ಅಪಾರವಾಗಿದೆ. ಸಮಾಜವು ಇನ್ನು ಹೆಚ್ಚಿನ ರೀತಿಯಲ್ಲಿ ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಬೆಳೆಯಲಿ ಎಂದರು.
ಶಾಸಕ ಜಿ.ಎಸ್. ಪಾಟೀಲ ಮಾತನಾಡಿ, ಒಂದು ಸಮಾಜ ಅಭಿವೃದ್ಧಿ ಹೊಂದಬೇಕಾದಲ್ಲಿ ಸಮಾಜದ ಎಲ್ಲರ ಸಹಾಯ ಸಹಕಾರ ಅಗತ್ಯವಾಗಿದೆ. ಅಲ್ಲದೇ ಇತರೆ ಸಮಾಜದ ಜತೆಗೂ ಉತ್ತಮ ಬಾಂಧವ್ಯ ಹೊಂದಿ ಎಲ್ಲರನ್ನು ಒಗ್ಗೂಡಿಸಿಕೊಂಡು ನಾವು ಬೆಳೆಯಬೇಕು. ಶಿವಶರಣೆ ಮಲ್ಲಮ್ಮ ತಮ್ಮ ಜೀವನದಲ್ಲಿ ಎಷ್ಟೆ ಕಷ್ಟ ಎದುರಿಸಿದರೂ ತಮ್ಮ ಕಾಯಕ ನಿಷ್ಠೆ, ಮೌಲ್ಯ,ಆದರ್ಶ ಕೈ ಬಿಡದೇ ಗುರಿ ಸಾಧಿಸಿದರು.ಅಂತಹ ಗುಣಗಳನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ವಿಶೇಷವಾಗಿ ಮಹಿಳೆಯರು ಮಲ್ಲಮ್ಮನ ಆದರ್ಶಗಳನ್ನು ಮೈಗೂಡಿಸಿಕೊಂಡು ಮನೆಗೆ ಬೆಳಕಾಗಿ ಬಾಳಬೇಕು ಎಂದರು.ಸಾನ್ನಿಧ್ಯ ವಹಿಸಿದ್ದ ಶ್ರೀಶೈಲಂ ಮಹಾಪೀಠದ ಶ್ರೀ ಚನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಹಾಲಕೇರಿ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು, ಬಸವರಾಜ ದೇವರಿ ಬಸವರಡ್ಢೇರ , ವಿಶ್ವನಾಥ ದೇವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆಯನ್ನು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರಡ್ಡಿ ಸಮಾಜ ತಾಲೂಕಾಧ್ಯಕ್ಷ ವೆಂಕಣ್ಣ ಬಂಗಾರಿ ವಹಿಸಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಶೇಖರಗೌಡ ಪಾಟೀಲ, ರಘುನಾಥಗೌಡ ಕೆಂಪಲಿಂಗಣ್ಣವರ, ಡಾ. ಕೊಟ್ರೇಶ ಬಿದ್ರಿ, ವೆಂಕಣ್ಣ ಬಂಗಾರಿ, ಶರಣಗೌಡ ಪಾಟೀಲ ಸರ್ಜಾಪೂರ, ಕರಿಬಸಪ್ಪ ಹಂಚನಾಳ, ಬಸವರಾಜಸ್ವಾಮಿ ಬಸವರಡ್ಡೆರ, ಭೀಮರಡ್ಡೇಪ್ಪ ರಡ್ಡೇರ, ಕುಬೇರಪ್ಪ ಗಡಗಿ, ಅನೀಲಕುಮಾರ ತೆಗ್ಗಿನಕೇರಿ, ಸುರೇಶ ಶಿರೋಳ, ಬಸವರಾಜ ನವಲಗುಂದ, ಹನುಮಂತಪ್ಪ ಗಡಗಿ, ಶಂಕರಗೌಡ ಗಿರಡ್ಡಿ, ಭೀಮರಡ್ಡಿ ರಡ್ಡೇರ, ಕುಮಾರ ಗಡಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.