ಬಳ್ಳೇಕೆರೆ ಕೆರೆಗೆ ಹರಿದ ಹೇಮಾವತಿ ನೀರು..!

KannadaprabhaNewsNetwork | Published : Feb 6, 2024 1:30 AM

ಸಾರಾಂಶ

ಬರಪೀಡಿತ ತಾಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಯ ಕೆರೆ-ಕಟ್ಟೆಗಳನ್ನುತುಂಬಿಸುವ ಕಟ್ಟಹಳ್ಳಿ (ಐಚನಹಳ್ಳಿ) ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡು ಪ್ರಾಯೋಗಿಕವಾಗಿ ಸೋಮವಾರ ಬಳ್ಳೇಕೆರೆ ಕೆರೆಗೆ ಹೇಮಾವತಿ ನದಿಯಿಂದ ನೀರನ್ನು ಹರಿಸಲಾಯಿತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆಬರಪೀಡಿತ ತಾಲೂಕಿನ ಬೂಕನಕೆರೆ ಮತ್ತು ಶೀಳನೆರೆ ಹೋಬಳಿಯ ಕೆರೆ-ಕಟ್ಟೆಗಳನ್ನುತುಂಬಿಸುವ ಕಟ್ಟಹಳ್ಳಿ (ಐಚನಹಳ್ಳಿ) ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡು ಪ್ರಾಯೋಗಿಕವಾಗಿ ಸೋಮವಾರ ಬಳ್ಳೇಕೆರೆ ಕೆರೆಗೆ ಹೇಮಾವತಿ ನದಿಯಿಂದ ನೀರನ್ನು ಹರಿಸಲಾಯಿತು.

ಈ ಹಿಂದೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಮ್ಮ ಹುಟ್ಟೂರಿನ ಜನರ ಋಣ ತೀರಿಸಲು ₹265 ಕೋಟಿ ಅಂದಾಜು ವೆಚ್ಚದ ಕಟ್ಟಹಳ್ಳಿ ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಿ ಅಗತ್ಯ ಅನುದಾನ ನೀಡಿದ್ದರು. ತಾಲೂಕಿನ ಬೂಕನಕೆರೆ ಹೋಬಳಿಯ 46 ಮತ್ತು ಶಿಳನೆರೆ ಹೋಬಳಿಯ 43 ಕೆರೆಗಳು ಸೇರಿ ಒಟ್ಟು 89 ಕೆರೆಗಳನ್ನು ಹೇಮೆಯ ನೀರಿನಿಂದ ತುಂಬಿಸುವುದು ಈ ಯೋಜನೆಯ ಮೂಲ ಗುರಿಯಾಗಿತ್ತು.

ಇದಕ್ಕಾಗಿ ಕೃಷ್ಣರಾಜ ಸಾಗರ ಜಲಾಶಯದ ಹಿನ್ನೀರಿಗೆ ಹೊಂದಿಕೊಂಡಂತೆ ಮುಳುಗಡೆಯಾಗಿರುವ ಕಟ್ಟಹಳ್ಳಿ ಕಿರು ಅಣ್ಣೆಕಟ್ಟೆಯ ಒಳಭಾಗದಲ್ಲಿ ಏತ ನೀರಾವರಿ ಮೂಲಕ ನೀರೆತ್ತಿ ಕೆರೆಗಳನ್ನು ತುಂಬಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು.

ಅಮೃತ್ ನಿರ್ಮಾಣ ಸಂಸ್ಥೆ ಈ ಕಾಮಗಾರಿಯನ್ನು ನಿರ್ವಹಿಸಿ ಮೊದಲ ಹಂತದಲ್ಲಿ 46 ಕೆರೆಗಳನ್ನು ಹೇಮೆಯ ನೀರಿನಿಂದ ತುಂಬಿಸಲು ಸಜ್ಜುಗೊಳಿಸಿದೆ. ಯೋಜನೆ ಪೂರ್ಣಗೊಳ್ಳಲು ಇನ್ನೂ ₹100 ಕೋಟಿ ಅನುದಾನದ ಕೊರತೆ ಇದೆ. ಈ ಅನುದಾನ ಬಿಡುಗಡೆಯಾದ ನಂತರ ಎರಡನೇ ಹಂತದಲ್ಲಿ ಶೀಳನೆರೆ ಹೋಬಳಿಯ ಉಳಿದ 43 ಕೆರೆಗಳನ್ನು ತುಂಬಿಸುವ ಕಾಮಗಾರಿ ಆರಂಭಿಸುವುದಾಗಿ ಅಮೃತ್ ನಿರ್ಮಾಣ ಸಂಸ್ಥೆ ತಿಳಿಸಿದೆ.

ಮೊದಲ ಹಂತದ ಕಾಮಗಾರಿ ಮುಕ್ತಾಯಗೊಂಡಿರುವುದರಿಂದ 46 ಕೆರೆಗಳನ್ನು ತುಂಬಿಸುವಂತೆ ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ನೇತೃತ್ವದಲ್ಲಿ ರೈತರು ಒತ್ತಾಯಿಸಿದ್ದರು. ಎಚ್.ಟಿ.ಮಂಜು ಕೂಡ ಮೊದಲ ಹಂತದ 46 ಕೆರೆಗಳಿಗೆ ಹೇಮೆಯ ನೀರು ತುಂಬಿಸುವಂತೆ ರಾಜ್ಯ ಸರ್ಕಾರದ ಮೇಲೆ ಅಗತ್ಯ ಒತ್ತಡ ಹಾಕಿದ್ದರು.

ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಬಿ.ಎಲ್.ದೇವರಾಜು, ಕೆ.ಬಿ.ಚಂದ್ರಶೇಖರ್, ವಿಜಯ ರಾಮೇಗೌಡ ಮುಂತಾದವರು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಮೇಲೆ ಕೆರೆಗಳನ್ನು ತುಂಬಿಸುವಂತೆ ಒತ್ತಡ ಹಾಕಿದ್ದರು.

ಸ್ಥಳೀಯ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರು ಇತ್ತೀಚೆಗೆ ಕಟ್ಟಹಳ್ಳಿ ಏತ ನೀರಾವರಿ ಕಾಮಗಾರಿ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸುವ ಮೂಲಕ ನೀರು ಬಿಡುವ ಸಂಬಂಧ ಸರ್ಕಾರಕ್ಕೆ ಅಗತ್ಯ ಮಾಹಿತಿ ನೀಡಿದ್ದರು. ಕೆಪಿಟಿಸಿಎಲ್ ಅಧಿಕಾರಿಗಳ ತಂಡ ಏತ ನೀರಾವರಿಯ ವಿದ್ಯುತ್ ಘಟಕದ ಪರಿಶೀಲನೆ ನಡೆಸಿ ನಿರ್ವಹಣೆಗಾಗಿ ಅದನ್ನು ಸೆಸ್ಕಾಂ ಗೆ ಹಸ್ತಾಂತರಿಸಿತು.

Share this article