ಹೆಮ್ಮಾಡಿ ಶಾಲೆ ಹೆಚ್ಚುವರಿ ಶಿಕ್ಷಕರ ವರ್ಗಾವಣೆ: ಪ್ರತಿಭಟನೆ

KannadaprabhaNewsNetwork |  
Published : Sep 16, 2025, 12:04 AM IST
32 | Kannada Prabha

ಸಾರಾಂಶ

ಈರ್ವರು ಶಿಕ್ಷಕಿಯರನ್ನು ಮಧ್ಯಾಂತರ ವರ್ಗಾವಣೆಗೊಳಿಸಿದ್ದನ್ನು ಖಂಡಿಸಿ ಶಾಲಾಭಿವೃದ್ದಿ ಸಮಿತಿ, ಪೋಷಕರು, ಹಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಹೆಮ್ಮಾಡಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.

ಕುಂದಾಪುರ: ಶಿಕ್ಷಣ ಇಲಾಖೆಯ ನಿಯಮಾನುಸಾರ ಹೆಚ್ಚುವರಿ ಆದೇಶದ ಮೇರೆಗೆ ಈರ್ವರು ಶಿಕ್ಷಕಿಯರನ್ನು ಮಧ್ಯಾಂತರ ವರ್ಗಾವಣೆಗೊಳಿಸಿದ್ದನ್ನು ಖಂಡಿಸಿ ಶಾಲಾಭಿವೃದ್ದಿ ಸಮಿತಿ, ಪೋಷಕರು, ಹಳೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಹೆಮ್ಮಾಡಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದಿದೆ.ಪ್ರತಿಭಟನೆ ನೇತೃತ್ವ ವಹಿಸಿದ ಹಳೆ ವಿದ್ಯಾರ್ಥಿ ಸಂಘದ ಜೊತೆ ಕಾರ್ಯದರ್ಶಿ ರಾಘವೇಂದ್ರ ಕುಲಾಲ್ ಮಾತನಾಡಿ, ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಲು ಹಳೆ ವಿದ್ಯಾರ್ಥಿಗಳು, ಶಾಲಾಭಿವೃದ್ದಿ ಸಮಿತಿ ಸಾಕಷ್ಟು ಶ್ರಮ ವಹಿಸುತ್ತಿವೆ. ದಾನಿಗಳಿಂದ ದೇಣಿಗೆ ಸಂಗ್ರಹಿಸಿ ಅಭಿವೃದ್ದಿ ಕೆಲಸಗಳನ್ನು ಮಾಡುತ್ತಿದ್ದು, ಶಾಲೆ ಅಭಿವೃದ್ದಿಯಾಗುತ್ತಿರುವ ಹೊತ್ತಲ್ಲೇ ಶಿಕ್ಷಣ ಇಲಾಖೆಯ ಅವೈಜ್ಞಾನಿಕ ನೀತಿಗಳಿಂದಾಗಿ ವಿದ್ಯಾರ್ಥಿಗಳ ಮೇಲೆ ಸಾಕಷ್ಟು ದುಷ್ಪರಿಣಾಮ ಬೀರುತ್ತಿದೆ ಎಂದು ಆರೋಪಿಸಿದರು.

ಶೈಕ್ಷಣಿಕ ವರ್ಷದ ಮದ್ಯಾಂತರ ಅವಧಿಯಲ್ಲಿ ಶಿಕ್ಷಕರ ವರ್ಗಾವಣೆ ಮಾಡುತ್ತಿರುವುದು ಸರಿಯಾದ‌ ಕ್ರಮವಲ್ಲ. ಮಕ್ಕಳ ಭವಿಷ್ಯದ‌ ಮೇಲೆ ಇಲಾಖೆ ಚೆಲ್ಲಾಟವಾಡಬಾರದು. 1ರಿಂದ 7ನೇ ತರಗತಿಯವರೆಗಿನ 68 ವಿದ್ಯಾರ್ಥಿಗಳಿಗೆ ಮೂರು ಶಿಕ್ಷಕರಿಂದ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವೇ ಇಲ್ಲ. ವಿದ್ಯಾರ್ಥಿಗಳ ಹಿತದೃಷ್ಠಿಯಿಂದ ಐವರು ಶಿಕ್ಷಕಿಯರ ಪೈಕಿ ಇಬ್ಬರು ಶಿಕ್ಷಕಿಯರ ವರ್ಗಾವಣೆ ಆದೇಶ ಕೂಡಲೇ ರದ್ದುಗೊಳಿಸಬೇಕು. ಮುಂದಿನ ಶೈಕ್ಷಣಿಕ ಅವಧಿಯ ಆರಂಭದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಹಳೆ ವಿದ್ಯಾರ್ಥಿ ಸಂಘ ಇನ್ನೂ ಹೆಚ್ಚಿನ ಪ್ರಾಮಾಣಿಕ ಪ್ರಯತ್ನ ಮಾಡಲಿದೆ ಎಂದರು.

ಮಾಜಿ ಶಾಸಕ ಆಕ್ರೋಶ:ಪ್ರತಿಭಟನೆಯ ಸುದ್ದಿ ತಿಳಿದು ಹೆಮ್ಮಾಡಿ ಪ್ರಾಥಮಿಕ ಶಾಲೆಗೆ ಆಗಮಿಸಿದ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು, ಪೋಷಕರ ಮತ್ತು ಹಳೆ ವಿದ್ಯಾರ್ಥಿಗಳ ಮನವಿ ಆಲಿಸಿದರು. ಸ್ಥಳದಲ್ಲೇ ಬೈಂದೂರು ಬಿಇಒ ಗೆ ಕರೆ ಮಾಡಿ ಕಿಡಿಕಾರಿದರು. ಕೂಡಲೇ ಶಾಲೆಗೆ ಆಗಮಿಸಿ, ಪ್ರತಿಭಟನಾನಿರತರ ಮನವಿ ಆಲಿಸಿ ಶಿಕ್ಷಕರಿಯರ ವರ್ಗಾವಣೆ ಆದೇಶವನ್ನು ತಡೆ ಹಿಡಿದು ಯಥಾಪ್ರಕಾರ ಈ ಶೈಕ್ಷಣಿಕ ಅವಧಿ ಮುಗಿಯುವ ತನಕ ಶಿಕ್ಷಕಿಯರು ಇಲ್ಲೇ ಇರುವಂತೆ ನೋಡಿಕೊಳ್ಳಿ ಎಂದು ಆದೇಶಿಸಿದರು.ಬಿಇಒ ಸ್ಥಳಕ್ಕೆ ಬರುವಂತೆ ಪಟ್ಟು:

ಸೋಮವಾರ ಬೆಳಗ್ಗೆ ಮಕ್ಕಳೊಂದಿಗೆ ಶಾಲೆಗೆ ಆಗಮಿಸಿದ ಪೋಷಕರು ಹಾಗೂ ಹಳೆ ವಿದ್ಯಾರ್ಥಿಗಳು ಶಾಲಾ ಕಚೇರಿ ಎದುರು ಪ್ರತಿಭಟನೆ ನಡೆಸಿ ಬೈಂದೂರು ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಸ್ಥಳಕ್ಕಾಗಮಿಸಿದ ಶಿಕ್ಷಣ ಸಂಯೋಜಕ ಯೋಗೀಶ್, ಪ್ರತಿಭಟನಾ ನಿರತರ ಮನವೊಲಿಸಲು ಪ್ರಯತ್ನಿಸಿದರು. ಆಕ್ರೋಶಗೊಂಡ ಪ್ರತಿಭಟನಾಕಾರರು ಬಿಇಓ ಸ್ಥಳಕ್ಕೆ ಬರಲೇಬೇಕು ಎಂದು ಪಟ್ಟು ಹಿಡಿದ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್ ಸ್ಥಳಕ್ಕಾಗಮಿಸಿದರು.

ಶಾಲೆಯ ಪ್ರಸ್ತುತ ಶೈಕ್ಷಣಿಕ ಸ್ಥಿತಿಗತಿಗಳ ಕುರಿತು, ವರ್ಗಾವಣೆಯಿಂದಾಗಿ ಮಕ್ಕಳ ಮೇಲಾಗುವ ಪರಿಣಾಮದ ಕುರಿತಂತೆ ಸೋಮವಾರ ಸಂಜೆಯೊಳಗೆ ಮಾಜಿ ಶಾಸಕರಿಗೆ ವರದಿ ಕಳುಹಿಸುತ್ತೇನೆ. ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಇತ್ಯರ್ಥ ಮಾಡುವ ಬಗ್ಗೆ ಮಾಜಿ ಶಾಸಕರು ಪ್ರಯತ್ನ ಮಾಡುತ್ತಾರೆ ಎಂದು ಬಿಇಒ ಪ್ರತಿಭಟನಾನಿರತರಿಗೆ ಆಶ್ವಾಸನೆ ಕೊಟ್ಟ ಬಳಿಕ ಮಧ್ಯಾಹ್ನದ ಮೇಲೆ ಪ್ರತಿಭಟನೆ ಹಿಂಪಡೆದುಕೊಳ್ಳಲಾಯಿತು.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷೆ ಭಾರತಿ ಆಚಾರ್, ಉಪಾಧ್ಯಕ್ಷ ರಾಘವೇಂದ್ರ ಬಿ ಮೊಗವೀರ, ಹೆಮ್ಮಾಡಿ ಗ್ರಾ.ಪಂ. ಸದಸ್ಯ ರಾಘವೇಂದ್ರ ಪೂಜಾರಿ ಹೆದ್ದಾರಿ ಮನೆ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಅಶೋಕ್ ಕುಮಾರ್ ಭಟ್, ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ, ಹಳೆ ವಿದ್ಯಾರ್ಥಿಗಳಾದ ನಾಗರಾಜ್ ಪುತ್ರನ್, ಕಿರಣ್ ದೇವಾಡಿಗ ಹೊಸ್ಕಳಿ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ