ಇನ್ಮುಂದೆ ‘ಬೃಹತ್‌ ಮೈಸೂರು ಮಹಾನಗರ ಪಾಲಿಕೆ’

KannadaprabhaNewsNetwork |  
Published : Nov 28, 2025, 01:45 AM ISTUpdated : Nov 28, 2025, 12:34 PM IST
Mysuru

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ‘ಮೈಸೂರು ಮಹಾನಗರ ಪಾಲಿಕೆ’ಯನ್ನು ‘ಬೃಹತ್‌ ಮೈಸೂರು ಮಹಾನಗರ ಪಾಲಿಕೆ’ಯಾಗಿ ಪರಿವರ್ತಿಸಲು ಹಾಗೂ ಮೈಸೂರಿನ ಸಾಲಿಗ್ರಾಮ ಸೇರಿ ರಾಜ್ಯದ ಆರು ಜಿಲ್ಲೆಗಳ ವಿವಿಧ 11 ಗ್ರಾಪಂಗಳನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದೆರ್ಜೆಗೇರಿಸಲು   ಅನುಮೋದನೆ  

 ಬೆಂಗಳೂರು :  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯ ‘ಮೈಸೂರು ಮಹಾನಗರ ಪಾಲಿಕೆ’ಯನ್ನು ‘ಬೃಹತ್‌ ಮೈಸೂರು ಮಹಾನಗರ ಪಾಲಿಕೆ’ಯಾಗಿ ಪರಿವರ್ತಿಸಲು ಹಾಗೂ ಮೈಸೂರಿನ ಸಾಲಿಗ್ರಾಮ ಸೇರಿ ರಾಜ್ಯದ ಆರು ಜಿಲ್ಲೆಗಳ ವಿವಿಧ 11 ಗ್ರಾಪಂಗಳನ್ನು ಪಟ್ಟಣ ಪಂಚಾಯತಿಯಾಗಿ ಮೇಲ್ದೆರ್ಜೆಗೇರಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.

ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರಣೆ ನೀಡಿದ ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್‌.ಕೆ.ಪಾಟೀಲ್‌, ಮೈಸೂರು ಮಹಾನಗರ ಪಾಲಿಕೆಗೆ ಕೆಲವು ಸ್ಥಳೀಯ ಸಂಸ್ಥೆಗಳನ್ನು ಮತ್ತು ಗ್ರಾಮಗಳನ್ನು ಸೇರಿಸಿ ಗ್ರೇಡ್‌ -1 ಮಹಾನಗರ ಪಾಲಿಕೆಯಾಗಿ ಪರಿವರ್ತಿಸಲು ಸಚಿವ ಸಂಪುಟ ತೀರ್ಮಾನಿಸಿದೆ. ಕರ್ನಾಟಕ ಮಹಾನಗರ ಪಾಲಿಕೆಗಳ ಅಧಿನಿಯಮ 1976ರ ಅನ್ವಯ ಶೆಡ್ಯೂಲ್‌-ಎ ರಲ್ಲಿ ಒಳಗೊಂಡ ಪ್ರದೇಶಗಳನ್ನು ಶೆಡ್ಯೂಲ್‌-ಬಿ ರಲ್ಲಿ ಆ ಪ್ರದೇಶದ ಗಡಿರೇಖೆ ಗುರುತಿಸಲಾಗಿರುವಂತೆ ಹಾಲಿ ಪಾಲಿಕೆ ವ್ಯಾಪ್ತಿಗೆ ಸೇರ್ಪಡೆ ಮಾಡಿ ಬೃಹತ್‌ ಮೈಸೂರು ಮಹಾನಗರ ಪಾಲಿಕೆ ಎಂದು ಹೆಸರಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

11 ಗ್ರಾಪಂ ಮೇಲ್ದರ್ಜೆಗೆ:

ಮೈಸೂರು ಜಿಲ್ಲೆಯ ಸಾಲಿಗ್ರಾಮ ಗ್ರಾಪಂ, ಬೆಂಗಳೂರು ಗ್ರಾಮಾಂತರದ ತ್ಯಾಮಗೊಂಡ್ಲು ಗ್ರಾಪಂ, ಬೀದರ್‌ ಜಿಲ್ಲೆಯ ಹುಲಸೂರು ಗ್ರಾಪಂ, ಕಮಠಾಣಾ ಗ್ರಾಪಂ, ಮನ್ನಾಖೇಳ್ಳಿ ಗ್ರಾಪಂ, ಯಾದಗಿರಿ ಜಿಲ್ಲೆಯ ಸಗರ(ಬಿ) ಗ್ರಾಪಂ, ವಡಗೇರಾ ಗ್ರಾಪಂ, ಬೆಳಗಾವಿ ಜಿಲ್ಲೆಯ ಅಂಕಲಿ ಗ್ರಾಪಂ, ಕಟಕೋಲಾ ಗ್ರಾಮ ಪಂಗಳನ್ನು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೇರಿಸಲು ಸಂಪುಟ ಒಪ್ಪಿದೆ. ಅದೇ ರೀತಿ ಬೆಳಗಾವಿ ಜಿಲ್ಲೆಯ ಸುರೇಬಾನ ಮತ್ತು ಮನಿಹಾಳ ಗ್ರಾಪಂಗಳನ್ನು ಸೇರಿಸಿ ಒಂದು ಪಟ್ಟಣ ಪಂಚಾಯತಿ, ಉತ್ತರ ಕನ್ನಡ ಜಿಲ್ಲೆಯ ಮಾವಳ್ಳಿ 1 ಮತ್ತು ಮಾವಳ್ಳಿ 2 ಗ್ರಾ.ಪಂಗಳನ್ನು ಸೇರಿಸಿ ಒಂದು ಪಟ್ಟಣ ಪಂಚಾಯಿತಿ ರಚಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಅದೇ ರೀತಿ ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ, ಬೆಳಗಾವಿ ಜಿಲ್ಲೆಯ ರಾಮದುರ್ಗ ಪುರಸಭೆಯನ್ನು ನಗರಸಭೆಯನ್ನಾಗಿ ಮೇಲ್ದರ್ಜೆಗೇರಿಸಲು ಸಭೆ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಇತರೆ ಪ್ರಮುಖ ನಿರ್ಣಯಗಳು

- ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಚೆಕ್‌ ಡ್ಯಾಂ ನಿರ್ಮಾಣ, ಕೆರೆಗಳ ಅಭಿವೃದ್ಧಿಗೆ 200 ಕೋಟಿ ರು.ಗಳ ಕಾಮಗಾರಿಗಳಿಗೆ ಅನುಮೋದನೆ

- ಉತ್ತರ ಕನ್ನಡ ಜಿಲ್ಲೆಯ ಮುಳ್ಕೋಡು ಗ್ರಾಮ ಸಮೀಪ ಶರಾವತಿ ನದಿಗೆ 200 ಕೋಟಿ ರು. ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್‌

- 15ನೇ ಹಣಕಾಸು ಆಯೋಗದ ಅನುದಾನದಲ್ಲಿ 114 ಆಯುಷ್ಮಾನ್‌ ಆರೋಗ್ಯ ಮಂದಿರಗಳ ಕಟ್ಟಡ ನಿರ್ಮಾಣಕ್ಕೆ 14 ಕೋಟಿ ರು.

- ಮೆ.ಮುರುಗೋಡು ಬಳೆ ತಯಾರಕರ ಫೌಂಡೇಷನ್‌ಗೆ ಬೆಳಗಾವಿ ಜಿಲ್ಲೆಯ ಮುರುಗೋಡು ಗ್ರಾಮದಲ್ಲಿ 5 ಎಕರೆ ಸರ್ಕಾರಿ ಜಮೀನು

- ಕಬಿನಿ ಎಡದಂಡೆ ಮತ್ತು ಬಲದಂಡೆ ನಾಲೆಗಳ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 50 ಕೋಟಿ ರು.ರಾಜ್ಯ ಹಜ್‌ ಸಮಿತಿ ನಿಯಮ ಜಾರಿಗೆ ಕ್ಯಾಬಿನೆಟ್‌ ಸಮ್ಮತಿ:

ಹಜ್‌ ಸಮಿತಿಗೆ ಕಾರ್ಯವಿಧಾನಗಳನ್ನು ನಿಗದಿಪಡಿಸುವ ‘ಕರ್ನಾಟಕ ರಾಜ್ಯ ಹಜ್‌ ಸಮಿತಿ ನಿಯಮಾವಳಿ-2025’ಅನ್ನು ಜಾರಿಗೆ ತರಲು ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ.

ಪ್ರತೀ ವರ್ಷ ಹಜ್‌ ಯಾತ್ರೆ ಕೈಗೊಳ್ಳಲು ಸೌದಿ ಅರೇಬಿಯಾಗೆ ತೆರಳುವ ರಾಜ್ಯ ಹಜ್‌ ಯಾತ್ರಿಕರಿಗೆ ಸೇವೆ ಒದಗಿಸುವ ಉದ್ದೇಶದಿಂದ ಹಜ್‌ ಸಮಿತಿ ಕಾರ್ಯನಿರ್ವಹಿಸುತ್ತದೆ. ಈ ಸಮಿತಿ ಮೂಲಕ ಆಯ್ಕೆಯಾದ ಯಾತ್ರಿಕರು ಬೆಂಗಳೂರು, ಮಂಗಳೂರು, ಮುಂಬೈ ಮತ್ತು ಹೈದರಾಬಾದ್‌ನ ನಿಗದಿತ ಕೇಂದ್ರಗಳಿಂದ ನೇರವಾಗಿ ಹಜ್‌ ಯಾತ್ರೆಗೆ ಪ್ರಯಾಣಿಸುತ್ತಾರೆ. ಯಾತ್ರಿಕರ ಸೌಲಭ್ಯಕ್ಕಾಗಿ ಈ ಎಲ್ಲಾ ಕೇಂದ್ರಗಳಲ್ಲಿ ಪ್ರತೀ ವರ್ಷ ಹಜ್‌ ಶಿಬಿರಗಳನ್ನು ಸಮಿತಿಯಿಂದ ಆಯೋಜಿಸಲಾಗುತ್ತದೆ.ಆದರೆ, ಈವರೆಗೂ ಹಜ್‌ ಸಮಿತಿಗೆ ಕಾರ್ಯವಿಧಾನಗಳನ್ನು ನಿಗದಿಪಡಿಸುವ ಯಾವುದೇ ನಿಯಮಗಳು ಇರಲಿಲ್ಲ. ಈಗ ಜಾರಿಗೊಳಿಸಲು ಸಂಪುಟ ಸಮ್ಮತಿಸಿರುವ ನಿಯಮಗಳು ಸಮಿತಿಯ ಕಾರ್ಯಚಟುವಟಿಕೆಗಳನ್ನು ಸುವ್ಯವಸ್ಥಿತಗೊಳಿಸುವುದರೊಂದಿಗೆ ಅದರ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆಯನ್ನೂ ತರಲಿದೆ. ಕೇಂದ್ರ ಹಜ್‌ ಕಾಯ್ದೆ 2002ರ ಉದ್ದೇಶಗಳನ್ನು ಜಾರಿಗೆ ತರಲು ಈ ನಿಯಮಾವಳಿ ರೂಪಿಸಲಾಗಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ನಕಲಿ ಔಷಧ ಮಾರಿದರೆ ಬೇಲ್‌ ನಿರಾಕರಿಸುವ ಬಿಲ್‌ ಮಂಡನೆ:

‘ಔಷಧಗಳು ಮತ್ತು ಸೌಂದರ್ಯವರ್ಧಕಗಳು (ಕರ್ನಾಟಕ ತಿದ್ದುಪಡಿ) ವಿಧೇಯಕ-2025’, ‘ಚಂದ್ರಗುತ್ತಿ ಶ್ರೀ ರೇಣುಕಾಂಬ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ವಿಧೇಯಕ-2025’ ಸೇರಿ ಐದು ವಿಧೇಯಕಗಳನ್ನು ಮುಂಬರುವ ಬೆಳಗಾವಿಯಲ್ಲಿ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ನಕಲಿ ಅಥವಾ ಕಲಬೆರಕೆ ಔಷಧ ಹಾಗೂ ಸೌಂದರ್ಯ ವರ್ಧಕಗಳ ಮಾರಾಟವನ್ನು ಜಾಮೀನು ರಹಿತ ಅಪರಾಧವೆಂದು ಪರಿಗಣಿಸುವ ಹಾಗೂ ಕೆಲ ದಂಡಗಳನ್ನು ಜೀವಾವಧಿ ಶಿಕ್ಷೆಗೆ ಪರಿವರ್ತಿಸುವ ಅಂಶಗಳನ್ನು ತಿದ್ದುಪಡಿ ವಿಧೇಯಕ ಒಳಗೊಂಡಿದೆ ಎಂದು ಕಾನೂನು ಸಚಿವ ಎಚ್‌.ಕೆ.ಪಾಟೀಲ್ ಗುರುವಾರ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.ರಾಜ್ಯದ ಸಿನಿ ಹಾಗೂ ಸಾಂಸ್ಕೃತಿಕ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹಾಲಿ ಇರುವ ಅಧಿನಿಯಮದಲ್ಲಿನ ಕೆಲ ಪ್ರಕರಣ ಕೈಬಿಡಲು ಹಾಗೂ ತಿದ್ದುಪಡಿಗಾಗಿ ತರಲಾಗಿರುವ ‘ಕರ್ನಾಟಕ ಸಿನಿ ಮತ್ತು ಸಾಂಸ್ಕೃತಿಕ ಕಾರ್ಯಕರ್ತರ(ಕ್ಷೇಮಾಭಿವೃದ್ಧಿ) ತಿದ್ದುಪಡಿ ವಿಧೇಯಕ 2025’, ನಗರಾಭಿವೃದ್ಧಿ ಪ್ರಾಧಿಕಾರಿಗಳಿಗೆ ನಗರ ಯೋಜನಾ ಅಥವಾ ಮುನಿಸಿಪಲ್‌ ಅಧಿಕಾರಿಗಳ ವೃಂದದ ಗ್ರೂಪ್‌ ಎ ಅಧಿಕಾರಿಗಳನ್ನು ಆಯುಕ್ತರಾಗಿ ನೇಮಿಸಲು ಅವಕಾಶ ಕಲ್ಪಿಸುವ ‘ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳು ತಿದ್ದುಪಡಿ ವಿಧೇಯಕ-2025’ , ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ‘ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ’ ಎಂದು ಮರು ನಾಮಕರಣ ಮಾಡಲು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯ(2ನೇ ತಿದ್ದುಪಡಿ) ವಿಧೇಯಕ -2025ಅನ್ನು ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಿದೆ ಎಂದು ಹೇಳಿದರು.ಕರ್ನಾಟಕ ನ್ಯಾಯಾಂಗ ಸೇವಾ (ನೇಮಕಾತಿ) ತಿದ್ದುಪಡಿ ನಿಯಮಗಳು-2025ರ ಕರಡು ಹೊರಡಿಸಲು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲು, ನಿಗದಿತ ಅವಧಿಯೊಳಗೆ ಯಾವುದೇ ಆಕ್ಷೇಪಣೆ ಬಾರದಿದ್ದರೆ/ಮಾರ್ಪಾಡು ಮಾಡದಿದ್ದರೆ ನೇರವಾಗಿ ಜಾರಿಗೊಳಿಸಲು ಸಂಪುಟ ಸಭೆ ಸಮ್ಮತಿಸಿದೆ.

PREV
Read more Articles on

Recommended Stories

ರೈತರಿಗೆ ಹೆಚ್ಚುವರಿ ಬೆಳೆ ಪರಿಹಾರಕ್ಕೆ ಚಾಲನೆ
ಬೀದಿ ನಾಯಿ ಮಾಹಿತಿಗೆ ಸರ್ಕಾರಿ, ಖಾಸಗಿ ಸಂಸ್ಥೆಗಳಿಗೆ ನೋಟಿಸ್‌