ಬಸವನಬಾಗೇವಾಡಿ ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ (ಹೆಸ್ಕಾಂ) ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ ಬುಧವಾರ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಪಟ್ಟಣದ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿಯ (ಹೆಸ್ಕಾಂ) ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಸಿದ್ದರಾಮ ಮಲ್ಲಿಕಾರ್ಜುನ ಬಿರಾದಾರ ಬುಧವಾರ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲಿ ಲೋಕಾ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಸ್ಥಳೀಯ ಪ್ರಥಮ ದರ್ಜೆ ಗುತ್ತಿಗೆದಾರ ಸಂತೋಷಕುಮಾರ ಎನ್. ಹುಲಸೂರ ಅವರು 2023ರಲ್ಲಿ ಹೆಬ್ಬಾಳ ಗ್ರಾಮದಲ್ಲಿ ವಿದ್ಯುತ್ ಪರಿವರ್ತಕ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ, ಮುಳವಾಡ ಗ್ರಾಮದಲ್ಲಿ ನಿರಂತರ ಜ್ಯೋತಿ ಕಂಬಗಳ ದುರಸ್ತಿಗೆ ಸಂಬಂಧಿಸಿದ ಬಿಲ್ ₹2.56 ಲಕ್ಷ ಪಾವತಿಸಲು ₹15 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಕುರಿತು ಸಂತೋಷಕುಮಾರ ಬೆಂಗಳೂರಿನ ಲೋಕಾಯುಕ್ತರ ಕಚೇರಿಗೆ ದೂರು ನೀಡಿದ್ದರು. ಗುತ್ತಿಗೆದಾರರು ಈಗಾಗಲೇ ₹5 ಸಾವಿರ ನೀಡಿದ್ದು. ಉಳಿದ ₹10 ಸಾವಿರ ಸ್ವೀಕರಿಸುವಾಗ ಬೆಂಗಳೂರಿನ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಅವರನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಅಧಿಕಾರಿಗಳ ತಂಡ ಕಚೇರಿಯಲ್ಲಿ ಬೀಡು ಬಿಟ್ಟಿದ್ದು ತಡರಾತ್ರಿಯವರೆಗೂ ವಿಚಾರಣೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಮೂರು ವರ್ಷದಿಂದ ಹೆಸ್ಕಾಂ ಇಇ ಬಿಲ್ ಪಾವತಿಸದೇ ಇರುವುದರ ಕುರಿತು ಹೆಸ್ಕಾಂ ಎಂಡಿ, ಸರ್ಕಾರಕ್ಕೂ ಮನವಿ ಸಲ್ಲಿಸಿದರೂ ಪ್ರಯೋಜನವಾಗದಿದ್ದಾಗ ಗುತ್ತಿಗೆದಾರ ಲೋಕಾಯುಕ್ತರ ಮೊರೆ ಹೋಗಿದ್ದರು ಎಂದು ತಿಳಿದುಬಂದಿದೆ.
ಲೋಕಾಯುಕ್ತ ಇಲಾಖೆಯ ಡಿವೈಎಸ್ಪಿಯಾದ ಪುಟ್ಟು ಹೋಬಳಾರೆಡ್ಡಿ, ವಸಂತ.ಸಿ. ಅವರ ನೇತೃತ್ವದಲ್ಲಿ ಲೋಕಾಯುಕ್ತ ಪಿಐಗಳಾದ ರಾಜಶೇಖರ, ರಾಮಪ್ಪ ಸಾವಳಗಿ, ಎಸ್.ಬಿ.ಪಾಟೀಲ ಸೇರಿದಂತೆ 7 ಅಧಿಕಾರಿಗಳ ತಂಡ ದಾಳಿ ನಡೆಸಿದೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.