ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿಗೆ ಏನೇ ಕೆಟ್ಟದಾದರೂ ನನ್ನ ತಲೆಗೆ ಕಟ್ಟುವ ಪ್ರಯತ್ನ ನಡೆಯುತ್ತಿದೆ. ಹಿಡಕಲ್ ಜಲಾಶಯದಿಂದ ನೀರು ಯಾರು ಒಯ್ಯುತ್ತಿದ್ದಾರೆ? ಏಕೆ ಒಯ್ಯುತ್ತಿದ್ದಾರೆ? ನನಗೆ ಗೊತ್ತಿಲ್ಲ. ಇದಕ್ಕೆ ನಮ್ಮ ಹೆಸರನ್ನು ತಳುಕು ಹಾಕುವುದನ್ನು ಕೇಳಿ ನನಗೆ ಆಶ್ಚರ್ಯ ಮತ್ತು ಅನುಮಾನ ಹುಟ್ಟಿದೆ. ನಮ್ಮ ಶುಗರ್ ಫ್ಯಾಕ್ಟರಿಗೆ ಈ ನೀರು ಅಗತ್ಯವೂ ಇಲ್ಲ, ಅದಕ್ಕೆ ಸಂಬಂಧವೂ ಇಲ್ಲ. ನಮಗೆ ಹತ್ತಿರದಲ್ಲಿ ಹಳ್ಳವಿದೆ, ಬೇಕಾದಷ್ಟು ಕೊಳವೆ ಬಾವಿಗಳನ್ನೂ ತೋಡಿಸಿದ್ದೇವೆ. ಅಲ್ಲಿ ಸಾಕಷ್ಟು ನೀರು ಬಂದಿದೆ. ನಮಗೆ ಬೇರೆ ನೀರು ಬೇಕಾಗಿಲ್ಲ. ಈ ಯೋಜನೆ ಯಾವಾಗ ಜಾರಿಗೆ ಬಂದಿದೆ, ಯಾರು ರೂಪಿಸಿದ್ದಾರೆ ಎನ್ನುವುದು ನನಗೆ ಗೊತ್ತಿಲ್ಲ. ನನಗಂತೂ ಸಂಬಂಧವೇ ಇಲ್ಲ ಎಂದರು.
ಬೆಳಗಾವಿ ಜನರ ಭಾವನೆಗಳಿಗೆ ವಿರುದ್ಧವಾಗಿ ನಾನು ಯಾವತ್ತೂ ನಡೆದುಕೊಳ್ಳುವುದಿಲ್ಲ. ಹಿಡಕಲ್ ಜಲಾಶಯದ ನೀರನ್ನು ಧಾರವಾಡಕ್ಕೆ ಒಯ್ಯುವ ಯೋಜನೆ ಸಚಿವ ಸಂಪುಟದ ಮುಂದೆಯೂ ಬಂದಿಲ್ಲ. ಇದು ಯಾವ ಕಾಲದಲ್ಲಿ ಮಂಜೂರಾಗಿದೆ ಎನ್ನುವುದೂ ಗೊತ್ತಿಲ್ಲ. ನಾವಂತೂ ಒಪ್ಪಿಗೆ ಕೊಟ್ಟಿಲ್ಲ. ಈ ಬಗ್ಗೆ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಕೊಟ್ಟಿದ್ದಾರೆ. ನಾನೂ ಅವರೊಂದಿಗೆ ಚರ್ಚಿಸಿ, ಸೂಕ್ತವಾಗಿ ಸ್ಪಂದಿಸುತ್ತೇನೆ ಎಂದು ತಿಳಿಸಿದರು.ಯಲ್ಲಮ್ಮ ದೇವಸ್ಥಾನದ ಅಭಿವೃದ್ಧಿ ಕ್ರೆಡಿಟ್ ಶೆಟ್ಟರ್‌ಗೆ ಅಲ್ಲ:
ಎಚ್.ಕೆ.ಪಾಟೀಲರ ಮನೆ ದೇವರು ಸವದತ್ತಿ. ಅವರು ಸವದತ್ತಿ ಅಭಿವೃದ್ಧಿಗೆ ಯೋಜನ ರೂಪಿಸಿ, ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸಾಕಷ್ಟು ಪ್ರಯತ್ನಿಸಿದ್ದಾರೆ. ಅವರ ಪ್ರಯತ್ನದಿಂದ ಅನುದಾನ ಬಂದಿದೆ. ಅದರ ಸಂಪೂರ್ಣ ಶ್ರೇಯಸ್ಸು ಎಚ್.ಕೆ.ಪಾಟೀಲರಿಗೆ ಸಲ್ಲಬೇಕೇ ವಿನಃ ಜಗದೀಶ್ ಶೆಟ್ಟರ್‌ಗೆ ಅಲ್ಲ ಎಂದು ಸ್ಪಷ್ಟಪಡಿಸಿದರು.
ಮಹದಾಯಿ ಯೋಜನೆ ವಿರುದ್ಧ ಪರಿಸರ ವಾದಿಗಳು ಈಗ ಹೋರಾಟ ನಡೆಸುತ್ತಿರುವ ಕುರಿತು ಪ್ರಶ್ನಿಸಿದಾಗ, ಬಹಳ ವರ್ಷಗಳ ಹೋರಾಟದ ಫಲವಾಗಿ ಮಹದಾಯಿ ಯೋಜನೆ ಈಗ ನಿರ್ಣಾಯಕ ಹಂತಕ್ಕೆ ಬಂದು ನಿಂತಿದೆ. ಇದು ಕುಡಿಯುವ ನೀರಿನ ಯೋಜನೆ ಆಗಿರುವುದರಿಂದ ಇದಕ್ಕೆ ಪರಿಸರವಾದಿಗಳು ಅಡ್ಡಿಪಡಿಸಬಾರದು ಎಂದು ವಿನಂತಿಸುತ್ತೇನೆ. ಜನರ ಹಗೂ ಜಾನುವಾರುಗಳ ಜೀವದ ಪ್ರಶ್ನೆ ಇದರಲ್ಲಿದೆ. ದಯಮಾಡಿ ಅಡ್ಡಿಪಡಿಸಬೇಡಿ ಎಂದು ಮನವಿ ಮಾಡಿದರು.
ಸರ್ಕಾರ 2 ವರ್ಷ ಪೂರೈಸಿರುವ ಸಂದರ್ಭದಲ್ಲಿ ಜನರಿಗೆ ಏನು ಹೇಳಲು ಬಯಸುತ್ತೀರಿ ಎಂದು ಕೇಳಿದಾಗ, ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಜೀವನದಲ್ಲಿ ಒಳ್ಳೆಯದಾಗಲಿ, ಜನರಿಗೆ ಅನುಕೂಲವಾಗಲಿ ಎನ್ನುವ ನೀತಿ, ಸಿದ್ಧಾಂತದಿಂದ ಆಡಳಿತ ನಡೆಸುತ್ತಿದೆ. ನಾವು ಚುನಾವಣೆಗೆ ಮುನ್ನ ನೀಡಿದ ಎಲ್ಲ ವಾಗ್ದಾನಗಳನ್ನೂ ಈಡೇರಿಸಿದ್ದೇವೆ. ಹಾಗಾಗಿ ಜನರು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ, ಉಪಮುಖ್ಯಮಂತ್ರಿಗಳೂ ಆಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರಗೆ ಇನ್ನಷ್ಟು ಶಕ್ತಿ ತುಂಬುತ್ತಾರೆ ಎನ್ನುವ ಭರವಸೆ ಇದೆ ಎಂದರು.
ಮಹಿಳೆಯರ ಸಬಲೀಕರಣ ಗುರಿ ಇಟ್ಟುಕೊಂಡು ಹಲವಾರು ಯೋಜನೆ ಜಾರಿಗೆ ತಂದಿದ್ದೇವೆ. ಈ ದಿಸೆಯಲ್ಲಿ ದೃಢ ಹೆಜ್ಜೆ ಇಟ್ಟಿದ್ದೇವೆ. ಗೃಹಲಕ್ಷ್ಮೀ ಯೋಜನೆ 19 ಕಂತು ಈಗಾಗಲೇ ಹಾಕಲಾಗಿದೆ. ಶೀಘ್ರವೇ 20ನೇ ಕಂತನ್ನೂ ಹಾಕುತ್ತೇವೆ. ಮಾರ್ಚ್ ತಿಂಗಳದ್ದು ಸ್ವಲ್ಪ ತಾಂತ್ರಿಕ ಸಮಸ್ಯೆಯಾಗಿದೆ. ಏಪ್ರಿಲ್ ಹಣ ಇಷ್ಟರಲ್ಲೇ ಜಮಾ ಆಗಲಿದೆ ಎಂದರು.