ಸ್ಥಳೀಯ ಸಂಸ್ಥೆ ಚುನಾವಣೆಗೆ ಹೈ ಸೂಚನೆ: ಡಿಕೆಶಿ

KannadaprabhaNewsNetwork | Published : Mar 20, 2025 1:15 AM

ಸಾರಾಂಶ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನವದೆಹಲಿ

ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಹೈಕಮಾಂಡ್ ಸೂಚನೆ ನೀಡಿದೆ ಎಂದು ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಬುಧವಾರ ಇಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಕಾರ್ಯಕರ್ತರ ಸಭೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ. ವಿಧಾನಸಭೆ ಅಧಿವೇಶನ ಮುಗಿದ ನಂತರ ಎಲ್ಲಾ ಕ್ಷೇತ್ರಗಳಲ್ಲಿ ಸಭೆ ನಡೆಸಲಾಗುವುದು ಎಂದರು.

ರಾಮನಗರ ಜಿಲ್ಲೆ ಹೆಸರು ಬದಲು:

ರಾಮನಗರ ಜಿಲ್ಲೆ ಹೆಸರು ಬದಲಾವಣೆ ಕೇಂದ್ರ ಸರ್ಕಾರ ತಿರಸ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿ ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ರಾಜ್ಯದ ವಿಚಾರ. ಇದನ್ನು ಹೇಗೆ ಜಾರಿಗೆ ತರಬೇಕು ಎಂಬುದು ನಮಗೆ ಗೊತ್ತಿದೆ ಎಂದು ಪ್ರತಿಕ್ರಿಯಿಸಿದರು.

ಇಲ್ಲಿ ಒಂದಷ್ಟು ಸಚಿವರು ಕೇಂದ್ರ ಗೃಹ ಸಚಿವರಿಗೆ ಹೆಸರು ಬದಲಾವಣೆ ಬೇಡ ಎಂದು ಹೇಳಿದ್ದಾರೆ ಎಂದರು. ಈ ವೇಳೆ ಕುಮಾರಸ್ವಾಮಿ ಅವರೇ ಎಂದು ಮರು ಪ್ರಶ್ನಿಸಿದಾಗ ‘ಇನ್ಯಾರು'''''''' ಎಂದು ಹೆಸರು ಹೇಳದೆ ಛೇಡಿಸಿದರು.

ಒಂದು ಅಫಿಡವಿಟ್ ಮಾಡಿಕೊಂಡು ಹೆಸರು ಬದಲಾವಣೆ ಮಾಡಿಕೊಳ್ಳಬಹುದಂತೆ. ಇದು ರಾಜ್ಯದ ವಿಷಯ. ದ್ವೇಷದ ರಾಜಕಾರಣ ಹೇಗೆ ನಡೆಯುತ್ತಿದೆ ನೋಡಿ. ರಾಮನಗರ ಜನತೆ ಮೇಲೆ ನಡೆಸುತ್ತಿರುವ ಗದಾ‌ಪ್ರಹಾರಕ್ಕೆ ಇದು ಸಾಕ್ಷಿ ಎಂದು ತಿರುಗೇಟು ನೀಡಿದರು.----ಬಾಕ್ಸ 1---

ಕಾಂಗ್ರೆಸ್ ‌ಭವನ

ಪೂಜೆಗೆ ಆಹ್ವಾನ

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಹಾಗೂ ಪಕ್ಷದ ಪ್ರಧಾ‌ನ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ನೂತನ ಕಾಂಗ್ರೆಸ್ ಭವನದ ಭೂಮಿ ಪೂಜೆಗೆ ಸಮಯ ನೀಡಿ ಎಂದು ಹೇಳಿದ್ದೇನೆ. 100 ಕಾಂಗ್ರೆಸ್ ಕಚೇರಿಗಳನ್ನು ಕಟ್ಟಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಅವರು ಸಮಯ ನೀಡಿದಾಗ ಭೂಮಿಪೂಜೆ ನಡೆಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

---ಬಾಕ್ಸ 2---

ಅಧಿಕಾರ ಹಸ್ತಾಂತರ

ಪ್ರತಿಕ್ರಿಯೆಗೆ ನಕಾರ

ರಾಜ್ಯದಲ್ಲಿ ವಿಧಾನ ಮಂಡಲದ ಅಧಿವೇಶನದ ವೇಳೆ ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಮುಂದಿನ ಬಜೆಟ್ ನಾನೇ ಮಂಡಿಸುತ್ತೇನೆ, ಐದು ವರ್ಷ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿರುವ ಹಿನ್ನೆಲೆಯಲ್ಲಿ ಅಧಿಕಾರ ಹಸ್ತಾಂತರ ವಿಚಾರವಾಗಿ ಹೈಕಮಾಂಡ್‌ ಜತೆ ಚರ್ಚೆ ನಡೆಸಲಾಯಿತೇ ಎಂದು ಪತ್ರಕರ್ತರು ಕೇಳಿದಾಗ, ‘ಈ ರೀತಿಯ ಯಾವ ಸುದ್ದಿಯೂ ಇಲ್ಲ,‌ ಏನೂ ಇಲ್ಲ. ನಾವು ಇದರ ಬಗ್ಗೆ ಯಾವ ವಿಚಾರವನ್ನೂ ಮಾತನಾಡಲು ಹೋಗುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

Share this article