ಹೈಕಮಾಂಡ್ ಸಂಸ್ಕೃತಿಗೆ ಕಡಿವಾಣ ಹಾಕಬೇಕಿದೆ

KannadaprabhaNewsNetwork |  
Published : Oct 13, 2025, 02:00 AM IST

ಸಾರಾಂಶ

ಚುನಾಯಿತ ಪ್ರತಿನಿಧಿಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಹೈಕಮಾಂಡ್ ಸಂಸ್ಕೃತಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಚುನಾಯಿತ ಪ್ರತಿನಿಧಿಯನ್ನು ತನ್ನ ಕಪಿಮುಷ್ಠಿಯಲ್ಲಿ ಇಟ್ಟುಕೊಳ್ಳುವ ಹೈಕಮಾಂಡ್ ಸಂಸ್ಕೃತಿಗೆ ಕಡಿವಾಣ ಹಾಕಬೇಕಾಗಿದೆ ಎಂದು ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಜೆ.ಎಚ್.ಪಟೇಲ್‌ ಅವರ 96ನೇ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ ಎಂಬ ವಿಷಯ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು ಕೆ.ಎನ್.ರಾಜಣ್ಣ ಸತ್ಯ ಹೇಳಿ ಮಂತ್ರಿಗಿರಿ ಕಳೆದುಕೊಂಡರು ಎಂದರು.

ಸಿದ್ದರಾಮಯ್ಯನಂತವರು ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಹೊರಟಿವುದು ನಿಜಕ್ಕೂ ನಂಬಲು ಸಾಧ್ಯವಿಲ್ಲ. ಲಿಂಗಾಯಿತರು ನಮ್ಮನ್ನು ಓಬಿಸಿಗೆ ಸೇರಿಸಿ ಎನ್ನುವುದರಲ್ಲಿ ತಪ್ಪಿಲ್ಲ ಎನಿಸುತ್ತದೆ ಎಂದರು.

ಚುನಾವಣಾ ದೃಷ್ಟಿಯಲ್ಲಿ ರೂಪಿತವಾಗುವ ಎಲ್ಲಾ ಯೋಜನೆಗಳನ್ನು ರದ್ದುಮಾಡಿ, ಜನಪರ ಬಜೆಟ್ ಹೆಸರಿನಲ್ಲಿ ಸರ್ಕಾರ ಹಣ ಹಂಚಿಕೆಯಾಗುವುದನ್ನು ತಡೆಯುವುದರಿಂದ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಗಳನ್ನು ತರಲು ಸಾಧ್ಯ ಎಂದರು.

ಪಕ್ಷ ಮತ್ತು ಮತದಾರರ ನಡುವೆ ಕೊಂಡಿಯಾಗಿದ್ದ ಪಕ್ಷದ ಕಾರ್ಯಕರ್ತರು ಸಹ ಇಂದು ಸ್ವಾರ್ಥಿಗಳಾಗಿದ್ದಾರೆ. ಪಕ್ಷ ಗೆಲ್ಲಬೇಕು ಎನ್ನುವುದಕ್ಕಿಂತ, ನಮಗೆ ಏನು ಸಿಗುತ್ತದೆ ಎಂಬುದರ ಬಗ್ಗೆ ಹೆಚ್ಚು ಆಲೋಚನೆ ನಡೆಸುತ್ತಿದ್ದಾರೆ. ಕಾರ್ಯಕರ್ತರನ್ನು ಸಂಭಾಳಿಸುವುದೇ ದೊಡ್ಡ ಸವಾಲಾಗಿದೆ. ಹಿಂದೆ ಜನರು ಯಾರನ್ನು ಅನುಸರಿಸುತ್ತಾರೋ ಅವರನ್ನು ಜನ ನಾಯಕ ಎನ್ನಲಾಗುತ್ತಿತ್ತು. ಆದರೆ ಇಂದು ಜನರನ್ನು ಯಾರು ಅನುಸರಿಸುತ್ತಾರೋ ಅವರು ಜನನಾಯಕರು ಎನ್ನುವಂತಹ ಪರಿಸ್ಥಿತಿ ಬದಲಾಗಿದೆ ಎಂದರು.

ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ ಎಂಬ ವಿಷಯಕುರಿತುಉಪನ್ಯಾಸ ನೀಡಿದ ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು, ಇಂದಿನ ಚುನಾವಣಾ ವ್ಯವಸ್ಥೆಯಲ್ಲಿಚುನಾಯಿತ ಪ್ರತಿನಿಧಿಗಳು ಫಲಾನುಭವಿಗಳಾದರೆ, ಸೋತವರು ಮತ್ತು ಮತದಾರರು ಬಲಿಪಶುಗಳು ಎಂಬಂತಾಗಿದೆ. ಚುನಾವಣಾ ಪ್ರವೇಶವೇ ಚುನಾವಣೆ ನೀತಿಯ ಉಲ್ಲಂಘನೆಯಿಂದ ಆರಂಭಗೊಳ್ಳುತ್ತಿದೆ. ವಿ.ಎಂ.ಥಾರ್‌ಕುಂಟೆ ಅವರು ಸರ್ಕಾರಕ್ಕೆ ಸಲ್ಲಿಸಿದ ಸುಧಾರಣಾ ಶಿಫಾರಸ್ಸುಗಳಲ್ಲಿ ಕೆಲವನ್ನು ಜಾರಿಗೆ ತರಲಾಗಿದೆ.ಆದರೆ ಇತ್ತೀಚಿನ ಸರ್ಕಾರ ಚುನಾವಣಾ ಆಯುಕ್ತರ ನೇಮಕ ಸಮಿತಿಯ ತಿದ್ದುಪಡಿಯಿಂದ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಪಡೆದಿದೆ. ಅದೇ ರೀತಿ ಒಂದು ತಿಂಗಳ ಕಾಲ ಜೈಲಿನಲ್ಲಿ ಇರುವ ವ್ಯಕ್ತಿಗೆ ಸ್ಪರ್ಧೆಸಲು ಅವಕಾಶ ಇಲ್ಲ ಎಂಬ ನಿಯಮ ಉದ್ದೇಶಪೂರ್ವಕವಾಗಿಯೇ ಕೆಲವರನ್ನು ಅಧಿಕಾರದಿಂದ ದೂರವಿಡಲು ಮಾಡಿದ ತಿದ್ದುಪಡಿಯಾಗಿದೆ. ಈ ಹಿಂದಿನ ಶಿಫಾರಸ್ಸಿನಂತೆ ಐದು ವರ್ಷ ಶಿಕ್ಷೆಗೆ ಆರ್ಹವಾದಂತಹ ಅಪರಾದಗಳ ತನಿಖೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಸ್ಪರ್ಧೆಗೆ ಅವಕಾಶವಿಲ್ಲ ಎಂಬ ಕಾಯ್ದೆ ತಂದರೆ ಈಗಿರುವ ಎಂ.ಪಿಗಳಲ್ಲಿ ಮತ್ತುಎಂ.ಎಲ್.ಎ ಗಳಲ್ಲಿ ಅರ್ಧದಷ್ಟು ಜನಪ್ರತಿನಿಧಿಗಳು ಖಾಲಿಯಾಗಲಿವೆ ಎಂದರು.

ಇದುವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಜನಪ್ರತಿನಿಧಿಗಳು ಸಲ್ಲಿಸುವ ಆದಾಯ ಮತ್ತು ಅಪರಾಧ ಪ್ರಕರಣಗಳ ಪ್ರಮಾಣ ಪತ್ರದ ಬಗ್ಗೆ ಇದುವರೆಗು ಐಟಿ, ಇಡಿ ಇಂದು ಕ್ರಾಸ್‌ಚೆಕ್ ನಡೆದಿಲ್ಲ. ಗಾಂಧಿ ಮತ್ತು ಜೆ.ಪಿ.ನಾರಾಯಣ್‌ ಇಬ್ಬರು ಒಳ್ಳೆಯ ರಾಜಕಾರಣಿಗಳು, ಆದರೆ ಚುನಾವಣೆಗೆ ಸ್ಪರ್ಧಿಸದೆ ಕೊನೆಯ ವರೆಗೂ ಜನನಾಯಕರಾಗಿಯೇ ಉಳಿದುಕೊಂಡರು. ವ್ಯವಸ್ಥೆಯ ಸುಧಾರಣೆ ಒಂದು ಚಳವಳಿಯ ರೂಪ ಪಡೆಯಬೇಕು. ಮಾತನಾಡುವುದಕ್ಕಿಂತ ಅನುಸರಿಸುವುದಕ್ಕೆ ಮುಂದಾಗಬೇಕು. ಜನಜಾಗೃತಿಗಿಂತ, ಕಾನೂನಿನ ಮೂಲಕ ಸುಧಾರಣೆಗೆ ಹೆಚ್ಚು ಒತ್ತು ನೀಡಿದಾಗ ಹೆಚ್ಚು ಪರಿಣಾಮಕಾರಿಯಾಗಲಿದೆ. ಹಾಗಾದಾಗ ಮಾತ್ರ ಪ್ರಾಮಾಣಿಕರು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಟಿಕೇಟ್ ನೀಡಲು ಜಾತಿ, ಹಣಬಲ, ತೋಳ್ಬಲ, ಗೆಲುವೆ ಮಾನದಂಡ, ಪ್ರಜಾಪ್ರಭುತ್ವವನ್ನು ಅಣಕಿಸಿದಂತಾಗುತ್ತದೆ ಎಂದು ದಿನೇಶ ಅಮಿನ್ ಮಟ್ಟು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು ಮಾತನಾಡಿ, ಶಿಕ್ಷಕಿಯಾಗಿದ್ದ ನನ್ನನ್ನು ಜನಪ್ರತಿನಿಧಿಯಾಗಿಸಿದ್ದು ಜೆ.ಹೆಚ್.ಪಟೇಲರು, ತಮ್ಮ ಸಹೋದರಿಯನ್ನೇ ಜಿ.ಪಂ.ಅಧ್ಯಕ್ಷರನ್ನಾಗಿಸಬೇಕು ಎಂಬ ಒತ್ತಡವಿದ್ದರೂ ನನ್ನನ್ನು ಜಿ.ಪಂ.ಅಧ್ಯಕ್ಷರನ್ನಾಗಿಸಿ, ಕುಟುಂಬ ವನ್ನು ರಾಜಕೀಯದಿಂದ ದೂರ ಉಳಿಯುವಂತೆ ಮಾಡಿದರು. ಇಂತಹವರ ಸಂಖ್ಯೆ ರಾಜಕಾರಣದಲ್ಲಿ ಹೆಚ್ಚಾದಾಗ ಮಾತ್ರದ್ವನಿ ಇಲ್ಲದ ಸಮುದಾಯಗಳಿಗೆ ರಾಜಕೀಯ ಅಧಿಕಾರ ದೊರೆಯಲು ಸಾಧ್ಯ ಎಂದರು.

ಜೆ.ಎಚ್.ಪಟೇಲ್ ಪ್ರತಿಷ್ಠಾನದ ವ್ಯವಸ್ಥಾಪಕರು ಹಾಗೂ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಈಗ ಇರುವ ಚುನಾವಣಾ ವ್ಯವಸ್ಥೆಯಿಂದ ಓರ್ವ ಸಾಮಾನ್ಯ ಮನುಷ್ಯ ಚುನಾವಣೆಯಲ್ಲಿ ಸ್ಪರ್ಧೆಸಿ ಗೆಲುವು ಸಾಧಿಸುವುದು ಕನಸಿನ ಮಾತಾಗಿದೆ. ಈ ವ್ಯವಸ್ಥೆಯನ್ನು ಬದಲಾಯಿಸುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ವ್ಯವಸ್ಥೆಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಹಿಡಿದು ನಾಯಕನಾಗುವುದಕ್ಕೂ, ವ್ಯವಸ್ಥೆಯಲ್ಲಿ ಸುಧಾರಣೆ ತಂದು ಜನನಾಯಕನಾಗಿ ಬದಲಾಗುವುದಕ್ಕೂ ಸಾಕಷ್ಟು ವೆತ್ಯಾಸವಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಎಂ.ಪಿ.ನಾಡಗೌಡ ವಹಿಸಿದ್ದರು. ತುಮಕೂರು ನಗರ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್,ಜೆ.ಎಚ್.ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶ್ರೀಶೂಲಪಾಣಿ ಜೆ.ಹೆಚ್.ಪಟೇಲ್, ಧರ್ಮದರ್ಶಿ ಟಿ.ಪ್ರಭಾಕರ್, ಜೆಡಿಯು ಪಕ್ಷದರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ರಂಗನಾಥ್, ಮುಖಂಡರಾದ ಪರಮೇಶ್, ಆಗ್ನೇಯ ಪದವಿಧರರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜು ಮತ್ತಿರರರು ಪಾಲ್ಗೊಂಡಿದ್ದರು.

=---------------------

ಕೋಟ್‌

ಗೃಹಲಕ್ಷ್ಮಿ ಶಕ್ತಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣ ಸಾಧ್ಯವಿಲ್ಲ. ಹಾಗೆಯೇ ವಿಶ್ವದ ಏಳನೇ ದೊಡ್ಡ ರಾಷ್ಟ್ರವಾಗಿರುವ ಭಾರತ ಸಾಲದಲ್ಲಿಯೂ ಏಳನೇ ಸ್ಥಾನದಲ್ಲಿ ಇರುವುದು ವಿಪರ್ಯಾಸ. ದೇಶ ಎತ್ತ ಸಾಗುತ್ತಿದೆ ಎಂಬುದು ತಿಳಿಯದಾಗಿದೆ. ಯುವಜನತೆ ದೇಶದ ಭವಿಷ್ಯದ ಬಗ್ಗೆ ಚಿಂತಿಸಬೇಕಿದೆ. ನಿರಾಶಾವಾದಿಗಳಾದರೆ ಪ್ರಯೋಜನವಿಲ್ಲ. ಅವರನ್ನು ಆಶಾವಾದಿಗಳಾಗಿಸುವ ಪ್ರಯತ್ನ ನಡೆಯಬೇಕಿದೆ. ಮತದಾರರಲ್ಲಿ ಸ್ವಾಭಿಮಾನದ ಬದುಕು ರೂಪಿಸುವ ಕೆಲಸ ಆಗಬೇಕು. ಇದು ಒಂದು ದಿನದಲ್ಲಿ ಆಗುವ ಕ್ರಾಂತಿಯಲ್ಲ.

- ಜೆ.ಸಿ.ಮಾಧುಸ್ವಾಮಿ, ಮಾಧುಸ್ವಾಮಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು