ಹುಬ್ಬಳ್ಳಿ:
ಪಕ್ಷದಲ್ಲಿನ ಆಂತರಿಕ ವಿಷಯಗಳ ಕುರಿತು ಮಾತನಾಡದಂತೆ ಹೈಕಮಾಂಡ್ ಸೂಚನೆ ನೀಡಿದೆ. ಕೆಪಿಸಿಸಿ ಅಧ್ಯಕ್ಷರ, ಮುಖ್ಯಮಂತ್ರಿ ಬದಲಾವಣೆ ಕುರಿತಂತೆ ಸೂಕ್ತ ಸಮಯದಲ್ಲಿ ಎಲ್ಲರೊಂದಿಗೆ ಚರ್ಚಿಸಿ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಸರ್ಕಾರಿ ಮುಖ್ಯ ಸಚೇತಕ, ವಿಪ ಸದಸ್ಯ ಸಲೀಂ ಅಹ್ಮದ್ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರು ತಮ್ಮ ತಮ್ಮ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಕ್ಯಾಬಿನೆಟ್ ಪುನರ್ ರಚನೆ ಸೇರಿದಂತೆ ಪಕ್ಷದ ಒಳಗಿನ ಯಾವುದೇ ನಿರ್ಧಾರಗಳಿರಲಿ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ ಎಂದು ಸ್ಪಷ್ಟಪಡಿಸಿದರು.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಈ ವರೆಗೆ ಪಕ್ಷ ನೀಡಿದ ಎಲ್ಲ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಮುಂದೆಯೂ ಯಾವುದೇ ಜವಾಬ್ದಾರಿ ಕೊಟ್ಟರೂ ಸಮರ್ಥವಾಗಿ, ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಸಚಿವ ಸ್ಥಾನದ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ವಿಶೇಷ ಅರ್ಥ ಬೇಡ:
ಕಾಂಗ್ರೆಸ್ ಶಾಸಕರಿಂದಲೇ ನಡೆಸಲು ಉದ್ದೇಶಿಸಿರುವ ಶೋಷಿತರ ಸಮಾವೇಶ ಕುರಿತು ಕೇಳಿದ ಪ್ರಶ್ನೆಗೆ, ಎಲ್ಲ ಜಾತಿ, ಸಮುದಾಯಗಳಲ್ಲಿ ಸಮಾವೇಶ ನಡೆಸುವುದು ಸಾಮಾನ್ಯ. ಆಯಾ ಸಮಾಜಕ್ಕೆ ಸರ್ಕಾರದಿಂದ ಬೇಕಾದ ಹೆಚ್ಚಿನ ಸೌಲಭ್ಯ, ಅನುದಾನ ಪಡೆದುಕೊಳ್ಳಲು ಸಮಾವೇಶ ಮಾಡುತ್ತಾರೆ. ಇದು ನಿನ್ನೆ, ಇಂದು ಮಾಡುತ್ತಿರುವುದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದೇ ರೀತಿ ಈಗ ಶೋಷಿತರ ಸಮಾವೇಶ ಮಾಡಲಾಗುತ್ತಿದೆ. ಇದರಲ್ಲಿ ಬೇರೆ ಅರ್ಥ ಕಲ್ಪಿಸುವ ಅವಶ್ಯಕತೆಯಿಲ್ಲ ಎಂದರು.ನೂತನ ಕಾಂಗ್ರೆಸ್ ಕಚೇರಿ ಸ್ಥಳಕ್ಕೆ ಭೇಟಿ:
ಇದೇ ವೇಳೆ ಸಲೀಂ ಅಹ್ಮದ ಅವರು ಲ್ಯಾಮಿಂಗ್ಟನ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಕಾಂಗ್ರೆಸ್ ಕಚೇರಿ ಜಾಗಕ್ಕೆ ಭೇಟಿ ನೀಡಿ ಪರಿಶೀಲಿಸಿದರು. 1957ರಲ್ಲಿ ಕಾಂಗ್ರೆಸ್ ಶಾಸಕರು ಖರೀದಿಸಿದ ಜಾಗವಾಗಿದ್ದು. ಕಾಂಗ್ರೆಸ್ ಪಕ್ಷದ ಜಾಗ ಎಂಬುದಕ್ಕೆ ಬೇಕಾದ ಎಲ್ಲ ದಾಖಲೆಗಳಿರುವುದಾಗಿ ತಿಳಿಸಿದರು. ಬಳಿಕ ಚಿಟಗುಪ್ಪಿ ಆಸ್ಪತ್ರೆಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ವ್ಯವಸ್ಥೆಯ ಕುರಿತು ಮಾಹಿತಿ ಪಡೆದರು. ಈ ವೇಳೆ ಗ್ರಾಮೀಣ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅನಿಲಕುಮಾರ ಪಾಟೀಲ, ಮಹಾನಗರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸದಾನಂದ ಡಂಗನವರ, ಮಹಾನಗರ ಕಾಂಗ್ರೆಸ್‌ನ ಯುವ ಘಟಕದ ಅಧ್ಯಕ್ಷ ಅರ್ಜುನ ಪಾಟೀಲ, ಪ್ರೇಮನಾಥ ಚಿಕ್ಕತುಂಬಳ ಸೇರಿದಂತೆ ಹಲವರಿದ್ದರು.