ಕಟ್ಟಡ ಕಾರ್ಮಿಕರಿಗೆ ಅವಶ್ಯಕತೆಯೇ ಇಲ್ಲದ ಟೂಲ್, ಯೂಮಿನಿಟಿ ಕಿಟ್ ಮತ್ತಿತರೆ ವಸ್ತುಗಳ ವಿತರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎಐಟಿಯುಸಿ ರಾಜ್ಯಾಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ ಹೇಳಿದ್ದಾರೆ.
- ಸಂಘಟನೆಗಳಿಗೆ ಏರುಧ್ವನಿಯಲ್ಲಿ ಮಾತನಾಡಿದ ಕಾರ್ಮಿಕ ಸಚಿವ - ಸಚಿವ ಸಂತೋಷ್ ಲಾಡ್ ವಜಾಗೊಳಿಸಲು ಎಚ್.ಜಿ.ಉಮೇಶ್ ತಾಕೀತು - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ಕಟ್ಟಡ ಕಾರ್ಮಿಕರಿಗೆ ಅವಶ್ಯಕತೆಯೇ ಇಲ್ಲದ ಟೂಲ್, ಯೂಮಿನಿಟಿ ಕಿಟ್ ಮತ್ತಿತರೆ ವಸ್ತುಗಳ ವಿತರಣೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎಐಟಿಯುಸಿ ರಾಜ್ಯಾಧ್ಯಕ್ಷ ಆವರಗೆರೆ ಎಚ್.ಜಿ. ಉಮೇಶ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ತಮ್ಮ ಸಂಘಟನೆಯು ಕಟ್ಟಡ ಕಾರ್ಮಿಕರಿಗೆ ಇಂತಹ ಅಗತ್ಯವಿಲ್ಲದ ಕಿಟ್ ನೀಡದಂತೆ ಹೋರಾಟ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೂ ಮನವಿ ಮಾಡಿತ್ತು. ಆದರೂ, ಕಮಿಷನ್ ಆಸೆಗೆ ಮಂಡಳಿಯಿಂದ ಕಿಟ್ ಖರೀದಿಸಲಾಗಿತ್ತು ಎಂದು ದೂರಿದರು.
ಕೊರೋನಾ ಹಾವಳಿ ನಂತರ ಕಾರ್ಮಿಕರಿಗೆ ನೀಡಬೇಕಾದ ನಿವೃತ್ತಿ ವೇತನ, ಮಹಿಳಾ ಕಾರ್ಮಿಕರಿಗೆ ಹೆರಿಗೆ ಭತ್ಯೆ, ಸಹಾಯಧನಕ್ಕೆ ಮೀಸಲಾದ ಹಣವನ್ನೆಲ್ಲಾ ಅನಾವಶ್ಯಕ ಕಿಟ್‌ಗಳ ಖರೀದಿಗೆ ಬಳಕೆ ಮಾಡಲಾಗಿದೆ. ಎಐಟಿಯುಸಿ ಮತ್ತು ಇತರೆ ಕಾರ್ಮಿಕ ಸಂಘಟನೆಗಳು ಸಭೆ ಮಾಡಿ, ಅಂತಿಮವಾಗಿ ಕಟ್ಟಡ ಕಾರ್ಮಿಕರಿಗೆ ಯಾವುದೇ ರೀತಿಯ ಉಪಯೋಗ ಆಗದ ಕಿಟ್ ಖರೀದಿಗೆ ತಡೆಯಾಜ್ಞೆ ನೀಡುವಂತೆ ಹೈಕೋರ್ಟ್ ಮೂಲಕ ತಡೆಯಾಜ್ಞೆ ತರಲು ನಿರ್ಧರಿಸಿ, ಕೋರ್ಟ್ ಮೊರೆ ಹೋಗಿದ್ದೆವು ಎಂದು ಹೇಳಿದರು.
ಏರುದನಿಯಲ್ಲಿ ಮಾತಾಡಿದ ಕಾರ್ಮಿಕ ಸಚಿವ- ಆರೋಪ:
ಕಟ್ಟಡ ಕಾರ್ಮಿಕರಿಗೆ ಕಿಟ್‌ಗಳ ವಿತರಣೆ ನಿಲ್ಲಿಸುವಂತೆ ಹೈಕೋರ್ಟ್ ಏಪ್ರಿಲ್‌ನಲ್ಲೇ ತಡೆಯಾಜ್ಞೆ ನೀಡಿದೆ. ನ್ಯಾಯಾಲಯದ ಆದೇಶದ ಹೊರತಾಗಿಯೂ ಕಿಟ್ ವಿತರಿಸಲು ಕಾರ್ಮಿಕ ಕಲ್ಯಾಣ ಮಂಡಳಿ ಅಧಿಕಾರಿಗಳು ಮುಂದಾಗಿದ್ದಾರೆ. ಇದರಿಂದ ಈ ಹಿಂದೆಯೇ ಕಿಟ್‌ಗಳನ್ನು ಖರೀದಿಸಿಟ್ಟುಕೊಂಡಿದ್ದ ವಿಚಾರ ಗೊತ್ತಾಗಿದೆ. ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಳಿ ಚರ್ಚಿಸಲು ಹೋದರೆ, ಕಾರ್ಮಿಕ ಸಂಘಟನೆಗಳ ಮುಖಂಡರ ಜೊತೆಗೆ ಏರುಧ್ವನಿಯಲ್ಲಿ, ಜೋರಾಗಿ ಮಾತನಾಡಿದ್ದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಲಾಡ್ ವಿರುದ್ಧ ಜುಲೈನಲ್ಲಿ ಧಾರವಾಡ ಚಲೋ:
ಬಂಡವಾಳಶಾಹಿ ಹಿನ್ನೆಲೆಯ ಸಚಿವ ಸಂತೋಷ್ ಲಾಡ್ ಅವರನ್ನು ತಕ್ಷಣವೇ ಸಚಿವ ಸ್ಥಾನದಿಂದ ವಜಾ ಮಾಡಬೇಕು. ಕಾರ್ಮಿಕರ ಬಗ್ಗೆ ಕನಿಷ್ಟ ಕಾಳಜಿ, ಬದ್ಧತೆ ಹೊಂದಿರುವವರಿಗೆ ಕಾರ್ಮಿಕ ಇಲಾಖೆ ಜವಾಬ್ದಾರಿ ನೀಡಬೇಕು. ಕಾರ್ಮಿಕ ಕಲ್ಯಾಣ ಮಂಡಳಿತ ಅನೇಯ ವಿಷಯಗಳ ಬಗ್ಗೆ ಜುಲೈ ಮೊದಲ ವಾರದಲ್ಲಿ ಚರ್ಚಿಸುವುದಾಗಿ ಸಂತೋಷ ಲಾಡ್ ಹೇಳಿದ್ದು, ಸಭೆ ಕರೆದು, ವಿಷಯ ಚರ್ಚಿಸದಿದ್ದರೆ ಜುಲೈ ಕಡೇ ವಾರ ಧಾರವಾಡ ಚಲೋ ಹೋರಾಟದ ಮೂಲಕ ಕಾರ್ಮಿಕ ಸಚಿವರ ಕಚೇರಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.
ಸಂಘಟನೆ ಜಿಲ್ಲಾಧ್ಯಕ್ಷ ವಿ.ಲಕ್ಷ್ಮಣ. ಶಿವಕುಮಾರ ಡಿ. ಶೆಟ್ಟರ್, ಮುರುಗೇಶ, ಯರಗುಂಟೆ ಸುರೇಶ, ಸಿದ್ದೇಶ, ಕೆ.ಸುರೇಶ, ಡಿ.ಷಣ್ಮುಗಂ ಇತರರು ಇದ್ದರು.
- - - -17ಕೆಡಿವಿಜಿ8:
ದಾವಣಗೆರೆಯಲ್ಲಿ ಸೋಮವಾರ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘ ಎಐಟಿಯುಸಿ ರಾಜ್ಯಾಧ್ಯಕ್ಷ ಆವರಗೆರೆ ಎಚ್.ಜಿ.ಉಮೇಶ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.