ಎಚ್‌ಎಸ್ಆರ್‌ಪಿ ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಕೆ: ನ.೨೦ಕ್ಕೆ ವಿಚಾರಣೆ

KannadaprabhaNewsNetwork | Published : Sep 19, 2024 1:48 AM

ಸಾರಾಂಶ

ಅತಿಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್‌ಗಳು ಮಾತ್ರ ಅಳವಡಿಸಬೇಕೆಂದು ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಲು ಕೋರಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್‌ ನ.20ಕ್ಕೆ ಮುಂದೂಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅತಿಸುರಕ್ಷಿತ ನೋಂದಣಿ ಫಲಕಗಳನ್ನು (ಎಚ್‌ಎಸ್‌ಆರ್‌ಪಿ) ನಿರ್ದಿಷ್ಟ ಉತ್ಪಾದಕರು ಮಾತ್ರ ಪೂರೈಸಬೇಕು ಮತ್ತು ನಿರ್ದಿಷ್ಟ ಡೀಲರ್‌ಗಳು ಮಾತ್ರ ಅಳವಡಿಸಬೇಕೆಂದು ರಾಜ್ಯ ಸಾರಿಗೆ ಇಲಾಖೆ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಲು ಕೋರಿ ಸಲ್ಲಿಸಲಾಗಿರುವ ಮೇಲ್ಮನವಿಗಳ ವಿಚಾರಣೆಯನ್ನು ಹೈಕೋರ್ಟ್‌ ನ.20ಕ್ಕೆ ಮುಂದೂಡಿದೆ.

ಸಾರಿಗೆ ಇಲಾಖೆ 2023ರ ಆ.17ರಂದು ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಲು ನಿರಾಕರಿಸಿದ ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ಪ್ರಶ್ನಿಸಿ ಗುಜರಾತ್‌ನ ಸೂರತ್‌ ಮೂಲದ ಬಿಎನ್‌ಡಿ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌, ಭಾರತದಲ್ಲಿ ಫಲಕ ಉತ್ಪಾದಕರ ನೋಂದಣಿ ಸಂಸ್ಥೆ, ಭಾರತೀಯ ಅತಿಸುರಕ್ಷಿತ ನೋಂದಣಿ ಫಲಕ ಉತ್ಪಾದಕರ ಕಂಪನಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದವು.

ಈ ಮೇಲ್ಮನವಿಯು ಹಿರಿಯ ನ್ಯಾಯಮೂರ್ತಿ ಕೆ.ಕಾಮೇಶ್ವರ ರಾವ್‌ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಬುಧವಾರವಿಚಾರಣೆಗೆ ನಿಗದಿಯಾಗಿದ್ದವು. ವಿಚಾರಣೆ ಆರಂಭವಾಗುತ್ತಿದ್ದಂತೆ ರಾಜ್ಯ ಸರ್ಕಾರ ಮತ್ತು ಸಾರಿಗೆ ಇಲಾಖೆ ಪರ ವಕೀಲರು ಮೇಲ್ಮನವಿಯ ವಿಚಾರಣೆಯನ್ನು ನವೆಂಬರ್‌ಗೆ ಮುಂದೂಡುವಂತೆ ಕೋರಿದರು. ಅದನ್ನು ಪರಿಗಣಿಸಿದ ವಿಭಾಗೀಯ ಪೀಠ ವಿಚಾರಣೆಯನ್ನು ನ.20ಕ್ಕೆ ಮುಂದೂಡಿತು.

ಪ್ರಕರಣದ ವಿವರ

ವಾಹನ ತಯಾರಿಸುವ ಮೂಲ ಉತ್ಪಾದಕರು ಅನುಮತಿಸಿ, ಪರವಾನಗಿ ಹೊಂದಿರುವ ಅತಿಸುರಕ್ಷಿತ ನೋಂದಣಿ ಫಲಕ ಉತ್ಪಾದಕರು ಮಾತ್ರ ಎಚ್‌ಎಸ್‌ಆರ್‌ ಫಲಕಗಳನ್ನು ಹಳೆಯ ವಾಹನಗಳಿಗೆ ಪೂರೈಸಬೇಕು. ಈ ಫಲಕಗಳನ್ನು ವಾಹನ ಉತ್ಪಾದಕರು ಅನುಮ ತಿಸಿರುವ ಡೀಲರ್‌ಗಳು ಮಾತ್ರ ಅಳವಡಿಸಬೇಕು. ಹಳೆಯ ವಾಹನಗಳ ಮಾಲೀಕರು ಅಧಿಸೂಚನೆ ಹೊರಡಿಸಿರುವ ಮೂರು ತಿಂಗಳ ಒಳಗಾಗಿ ಎಚ್‌ಎಸ್‌ಆರ್‌ ಫಲಕ ಅಳವಡಿಸಬೇಕು ಎಂದು 2023ರ ಆ.8 ರಾಜ್ಯ ಸಾರಿಗೆ ಇಲಾಖೆ ಸುತ್ತೋಲೆ ಹೊರಡಿಸಿತ್ತು.

ಈ ಆದೇಶ ಪ್ರಶ್ನಿಸಿ ವಿವಿಧ ಕಂಪನಿಗಳು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು, ಸಾರಿಗೆ ಇಲಾಖೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕೆಂಬ ಕಂಪನಿಗಳ ಮನವಿಯನ್ನು ಹೈಕೋರ್ಟ್‌ ಏಕಸದಸ್ಯ ಪೀಠ ತಳ್ಳಿಹಾಕಿತ್ತು. ಇದರಿಂದ ಕಂಪನಿಗಳು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿವೆ.

Share this article