ಕೆಂಪೇಗೌಡ ಲೇಔಟ್‌ ಭೂಸ್ವಾಧೀನ ಅಧಿಸೂಚನೆ ಎತ್ತಿ ಹಿಡಿದ ಹೈಕೋರ್ಟ್‌

KannadaprabhaNewsNetwork |  
Published : Feb 23, 2024, 01:49 AM IST
ಕೆಂಪೇಗೌಡ ಲೇಔಟ್‌ | Kannada Prabha

ಸಾರಾಂಶ

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 12 ಗ್ರಾಮಗಳಲ್ಲಿ ಸುಮಾರು 4,043 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಯನ್ನು ಪುರಸ್ಕರಿಸಿ ಹೈಕೋರ್ಟ್‌ ವಿಭಾಗೀಯ ಪೀಠ ಮಹತ್ವದ ಆದೇಶ ಹೊರಡಿಸಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ 12 ಗ್ರಾಮಗಳಲ್ಲಿ ಸುಮಾರು 4,043 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೊರಡಿಸಿದ್ದ ಅಧಿಸೂಚನೆಯನ್ನು ಪುರಸ್ಕರಿಸಿ ಹೈಕೋರ್ಟ್‌ ವಿಭಾಗೀಯ ಪೀಠ ಮಹತ್ವದ ಆದೇಶ ಹೊರಡಿಸಿದೆ.

ಭೂ ಸ್ವಾಧೀನ ಅಧಿಸೂಚನೆಯನ್ನು ರದ್ದುಪಡಿಸಿ 2014ರ ಜು.11ರಂದು ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ ಹೊರಡಿಸಿದ್ದ ತೀರ್ಪು ರದ್ದು ಮಾಡಬೇಕು ಮತ್ತು ಭೂ ಸ್ವಾಧೀನ ಅಧಿಸೂಚನೆಯನ್ನು ಎತ್ತಿಹಿಡಿಯುವಂತೆ ಕೋರಿ ಬಿಡಿಎ ಸಲ್ಲಿಸಿದ್ದ ಸುಮಾರು 140ಕ್ಕೂ ಅಧಿಕ ಪ್ರತ್ಯೇಕ ತಕರಾರು ಮೇಲ್ಮನವಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಅಧಿಸೂಚನೆಯಲ್ಲಿ ಸ್ವಾಧೀನಕ್ಕೆ ಗುರುತಿಸಲಾಗಿದ್ದ ಜಾಗದಲ್ಲಿ ನರ್ಸರಿ ಅಭಿವೃದ್ಧಿಯಾಗಿದೆ ಹಾಗೂ ಕಟ್ಟಡ ನಿರ್ಮಾಣವಾಗಿದೆ ಎಂಬುದು ಸೇರಿದಂತೆ ಇನ್ನಿತರ ಕಾರಣಗಳಿಂದ ತಮ್ಮ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಬೇಕು ಎಂಬ ಬಗ್ಗೆ ಯಾವುದಾದರೂ ಮನವಿಯಿದ್ದರೆ, ಭೂ ಮಾಲೀಕರು ಮೂರು ತಿಂಗಳಲ್ಲಿ ಬಿಡಿಎ ಮನವಿ ಸಲ್ಲಿಸಬೇಕು. ಬಿಡಿಎ ಆ ಮನವಿಗಳ ಕುರಿತು ಕಾನೂನು ಪ್ರಕಾರ ವಿಚಾರಣೆ ನಡೆಸಿ ಸೂಕ್ತ ಆದೇಶ ಹೊರಡಿಸಬೇಕು ಎಂದು ಪೀಠ ಆದೇಶಿಸಿದೆ.

ಸರ್ಕಾರದಿಂದ ಪೂರ್ವಾನುಮತಿ ಪಡೆದಿಲ್ಲ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಪಾಲಿಸಿಲ್ಲ. ಭೂ ಸ್ವಾಧೀನದಲ್ಲಿ ತಾರತಮ್ಯ ನೀತಿ ಅನುಸರಿಸಲಾಗಿದೆ. ಆದ್ದರಿಂದ ಬಡಾವಣೆ ನಿರ್ಮಾಣಕ್ಕೆ ನಡೆಸಿದ ಭೂ ಸ್ವಾಧೀನ ಪ್ರಕ್ರಿಯೆ ಕಾನೂನುಬಾಹಿರವಾಗಿದೆ ಎಂದು ತೀರ್ಮಾನಿಸಿದ್ದ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ, ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ 2014ರ ಜು.11ರಂದು ಆದೇಶಿಸಿತ್ತು. ಇದೀಗ ಈ ತೀರ್ಪನ್ನು ಹೈಕೋರ್ಟ್‌ ರದ್ದುಪಡಿಸಿ ಭೂ ಸ್ವಾಧೀನ ಅಧಿಸೂಚನೆಯನ್ನು ಪುರಸ್ಕರಿಸಿದೆ.

ಮೊದಲಿಗೆ 4814 ಎಕರೆ ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯಲ್ಲಿ ಬಿಡಿಎ ಉದ್ದೇಶಿಸಿತ್ತು. ನಂತರ ವಿವಿಧ ಕಾರಣಗಳನ್ನು ನೀಡಿ ಸುಮಾರು 800 ಎಕರೆ ಜಮೀನನ್ನು ಅಂತಿಮ ಭೂ ಸ್ವಾಧೀನ ಅಧಿಸೂಚನೆಯನ್ನು ಕೈ ಬಿಡಲಾಗಿದೆ. ಆ ಮೂಲಕ ಭೂ ಸ್ವಾಧೀನದಲ್ಲಿ ತಾರತಮ್ಯ ಎಸಗಲಾಗಿದೆ ಎಂದು ಭೂ ಸ್ವಾಧೀನ ಅಧಿಸೂಚನೆ ರದ್ದುಪಡಿಸುವ ಸಂದರ್ಭದಲ್ಲಿ ಏಕ ಸದಸ್ಯ ಪೀಠ ಹೇಳಿದೆ. ಆದರೆ, ಭೂ ಸ್ವಾಧೀನಕ್ಕೆ ಸರ್ಕಾರದಿಂದ ಬಿಡಿಎ ಅನುಮತಿ ಪಡೆದಿದ್ದು, ಅದು ಕಾನೂನುಬದ್ಧವಾಗಿದೆ. ತಾರತಮ್ಯ ನೀತಿ ಅನುಸರಿಸಲಾಗಿದೆ ಎಂಬ ಕಾರಣಕ್ಕೆ ಇಡೀ ಭೂ ಸ್ವಾಧೀನ ಪ್ರಕ್ರಿಯೆಯೇ ಕಾನೂನು ಬಾಹಿರವಾಗಿದೆ ಎಂದು ಅಧಿಸೂಚನೆ ರದ್ದುಪಡಿಸಲಾಗದು. ತಾರತಮ್ಯ ಇದ್ದರೆ, ಆ ಕುರಿತು ಭೂ ಮಾಲೀಕರು ಮನವಿ ಪತ್ರ ಸಲ್ಲಿಸಿ ತಮ್ಮ ಕುಂದುಕೊರತೆ ಬಗೆಹರಿಸಿಕೊಳ್ಳಬಹುದು ಎಂದು ಆದೇಶದಲ್ಲಿ ವಿಭಾಗೀಯ ಪೀಠ ತಿಳಿಸಿದೆ.

ಪ್ರಕರಣದ ವಿವರ

ನಾಡಪ್ರಭು ಕೆಂಪೇಗೌಡ ಬಡಾವಣೆ ನಿರ್ಮಾಣಕ್ಕೆ ನಗರದ 12 ಗ್ರಾಮಗಳಲ್ಲಿ 4,814 ಎಕರೆ 15 ಗುಂಟೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿ 2008ರ ಮೇ 21ರಂದು ಬಿಡಿಎ ಪ್ರಾಥಮಿಕ ಅಧಿಸೂಚನೆ ಹೊರಡಿಸಿತ್ತು. ನಂತರ 4,043 ಎಕರೆ 27 ಗುಂಟೆ ಸ್ವಾಧೀನಕ್ಕೆ ತೀರ್ಮಾನಿಸಿ 2020ರ ಫೆ.18ರಂದು ಅಂತಿಮ ಅಧಿಸೂಚನೆ ಹೊರಡಿಸಿತ್ತು. ಯಶವಂತಪುರ ಹೋಬಳಿಯ ಶೀಗೇಹಳ್ಳಿ, ಕನ್ನೇನಹಳ್ಳಿ, ಕೊಡಿಗೇಹಳ್ಳಿ, ಮೇಘನಹಳ್ಳಿ, ಕೆಂಗೇರಿ ಹೋಬಳಿಯ ಕೊಮ್ಮಘಟ್ಟ, ಭೀಮನಕೆರೆ, ಭೀಮನಕುಪ್ಪೆ/ ರಾಮಸಾಗರ, ಸೂಳಿಕೆರೆ, ಕೆಂಚೆನಹಳ್ಳಿ, ರಾಮಸಂದ್ರ, ಕೊಮ್ಮಘಟ್ಟ/ಕೃಷ್ಣಸಾಗರ ಮತ್ತು ಚಲ್ಲಘಟ್ಟದಲ್ಲಿ ಈ 4,043 ಎಕರೆ 27 ಗುಂಟೆ ಜಮೀನು ವಶಪಡಿಸಿಕೊಳ್ಳಲು ಅಂತಿಮ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು.

ಈ ಅಧಿಸೂಚನೆ ಪ್ರಶ್ನಿಸಿ ಆರ್‌. ಶಂಕರನ್ ಸೇರಿದಂತೆ ಅನೇಕ ಭೂ ಮಾಲೀಕರು 2010ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಭೂ ಸ್ವಾಧೀನಕ್ಕೆ ಗುರುತಿಸಿರುವ ತಮ್ಮ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದೇವೆ ಮತ್ತು ಅಲ್ಲಿಯೇ ಮನೆಕಟ್ಟಿಕೊಂಡು ವಾಸವಾಗಿದ್ದೇವೆ. ಜಾನುವಾರುಗಳನ್ನು ಮೇಯಿಸುತ್ತಾ, ಹೈನುಗಾರಿಕೆಯಲ್ಲಿ ತೊಡಗಿದ್ದೇವೆ. ನರ್ಸರಿಗಳನ್ನು ನಡೆಸುತ್ತಿದ್ದು, ಅವು ಚೆನ್ನಾಗಿ ಅಭಿವೃದ್ಧಿಯಾಗಿವೆ. ಸ್ವಾಧೀನ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಮನೆಗಳನ್ನು ಕಟ್ಟಿಕೊಂಡಿದ್ದೇವೆ. ಸಣ್ಣ ಇಟ್ಟಿಗೆ ತಯಾರಿಕೆ ಕಾರ್ಖಾನೆ ಸ್ಥಾಪಿಸಿದ್ದೇವೆ. ಜಮೀನಿನ ಮೇಲೆ ನಮ್ಮ ಜೀವನ ಆಧರಿಸಿದೆ. ಹಾಗಾಗಿ, ತಮ್ಮ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದು ಕೋರಿದ್ದರು.

ಭೂ ಸ್ವಾಧೀನಕ್ಕೆ ಹೊರಡಿಸಿದ್ದ ಪ್ರಾಥಮಿಕ ಹಾಗೂ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸಿ ಹೈಕೋರ್ಟ್‌ ಏಕ ಸದಸ್ಯ ನ್ಯಾಯಪೀಠ ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಬಿಡಿಎ ಮೇಲ್ಮನವಿ ಸಲ್ಲಿಸಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತ್ಯಾಗ, ಬಲಿದಾನ, ಆದರ್ಶಗಳ ಮೇಲೆ ಹುಟ್ಟಿದ ಕಾಂಗ್ರೆಸ್: ಎಸ್.ಆರ್. ಪಾಟೀಲ
ರೈತ ಸೃಷ್ಟಿಯ ಮೊದಲ ವಿಜ್ಞಾನಿ, ಜಮೀನು ಪ್ರಯೋಗಾಲಯ: ಮಾಜಿ ಸಚಿವ ನಿರಾಣಿ