ಸಂದೀಪ್ ವಾಗ್ಲೆ
ಕನ್ನಡಪ್ರಭ ವಾರ್ತೆ ಮಂಗಳೂರುಸುಮಾರು 150 ವರ್ಷಗಳಿಗೂ ಅಧಿಕ ಇತಿಹಾಸ ಇರುವ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯಕ್ಷಗಾನ ಮೇಳಗಳಿಗೆ ಕೊರೋನಾ ಪೂರ್ವದಲ್ಲಿ ಇದ್ದಂತೆ ರಾತ್ರಿಪೂರ್ತಿ ಯಕ್ಷಗಾನ ಪ್ರದರ್ಶನ ನೀಡುವ ಅನುಮತಿಯನ್ನು ಇದೀಗ ರಾಜ್ಯ ಉಚ್ಚ ನ್ಯಾಯಾಲಯವು ದ.ಕ. ಜಿಲ್ಲಾಧಿಕಾರಿ ಅಂಗಳದಲ್ಲಿ ಇರಿಸಿದೆ. ಆದರೆ ಕಟೀಲು ಮೇಳವು ಈಗಾಗಲೇ ಈ ವರ್ಷದ ‘ಕಾಲಮಿತಿ’ ತಿರುಗಾಟಕ್ಕೆ ಸಿದ್ಧತೆ ನಡೆಸಿ, ಸೇವೆಯಾಟ ಆರಂಭಿಸಿರುವುದರಿಂದ ಸದ್ಯಕ್ಕಂತೂ ರಾತ್ರಿಪೂರ್ತಿ ಯಕ್ಷಗಾನ ನಡೆಯುವ ಸಾಧ್ಯತೆ ತೀರ ವಿರಳ.
ಧ್ವನಿವರ್ಧಕ ಇಲ್ಲದೆ ಯಕ್ಷಗಾನ ಪ್ರದರ್ಶನ ಕಷ್ಟಸಾಧ್ಯ, ಅಲ್ಲದೆ ಯಕ್ಷಗಾನ ಉಳಿವಿನ ದೃಷ್ಟಿಯಿಂದಲೂ ಕಾಲಮಿತಿ ಯಕ್ಷಗಾನ ಪೂರಕ ಎಂದು ದೇವಾಲಯ ಹಾಗೂ ಮೇಳಕ್ಕೆ ಸಂಬಂಧಿಸಿದವರು ಅಭಿಪ್ರಾಯಪಟ್ಟಿದ್ದಾರೆ.ಕೊರೋನಾ ಪೂರ್ವದಲ್ಲಿ ಬೆರಳೆಣಿಕೆಯ ಮೇಳಗಳನ್ನು ಹೊರತುಪಡಿಸಿದರೆ ಹೆಚ್ಚಿನ ಮೇಳಗಳ ಪ್ರದರ್ಶನ ರಾತ್ರಿಪೂರ್ತಿ ನಡೆಯುತ್ತಿತ್ತು. ಆದರೆ ಕೊರೋನಾ ಕಾಲದಲ್ಲಿ ಶಬ್ದಮಾಲಿನ್ಯ ಕಾಯ್ದೆ (2000)ಯನ್ನು ಮುಂದಿಟ್ಟು ಕೇವಲ ಕಟೀಲು ಮೇಳಕ್ಕೆ ಮಾತ್ರ ಪೊಲೀಸ್ ನೋಟಿಸ್ ಹೊರಡಿಸಲಾಗಿತ್ತು. ಬಳಿಕ ಯಕ್ಷಗಾನ ಕಲಾಭಿಮಾನಿಗಳ ಮನವಿ ಮೇರೆಗೆ ಧಾರ್ಮಿಕ ನೆಲೆಗಟ್ಟಿನಲ್ಲಿ ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿದ ಆಗಿನ ಜಿಲ್ಲಾಧಿಕಾರಿ, ರಾತ್ರಿ 12.30ರವರೆಗೆ ಯಕ್ಷಗಾನ ನಡೆಸಲು 2022ರ ನವೆಂಬರ್ 15ರಂದು ಲಿಖಿತ ಅನುಮತಿ ನೀಡಿದ್ದರು. ಆ ಆದೇಶಕ್ಕೆ ಪೂರಕವಾಗಿ ಈ ವರ್ಷವೂ ಕಾಲಮಿತಿಯ (ರಾತ್ರಿ 12.30ವರೆಗೆ) ಯಕ್ಷಗಾನಕ್ಕೆ ಕಟೀಲು ಮೇಳ ಸಿದ್ಧವಾಗಿದ್ದು, ಸೇವೆಯಾಟ ನಡೆಯುತ್ತಿದೆ.
ಈ ನಡುವೆ ಜಿಲ್ಲಾಧಿಕಾರಿ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಕೃಷ್ಣ ಕುಮಾರ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸ್ವೀಕಾರ ಮಾಡಿರುವ ಕೋರ್ಟ್, ಶಬ್ದಮಾಲಿನ್ಯ ಕಾಯ್ದೆಯ ಮಿತಿಯಲ್ಲಿ ರಾತ್ರಿ ಯಕ್ಷಗಾನ ನಡೆಸಲು ಅರ್ಜಿದಾರರಿಗೆ ಒಪ್ಪಿಗೆ ಸೂಚಿಸಿದೆ.ಕಾಲಮಿತಿಯಲ್ಲೂ ಇದೆ ಸಂಪೂರ್ಣ ಪ್ರಸಂಗ:
‘ಹಿಂದೆ ರಾತ್ರಿಪೂರ್ತಿ ನಡೆಯುತ್ತಿದ್ದ ಕಟೀಲು ಮೇಳಕ್ಕೂ ಈಗ ನಡೆಯುತ್ತಿರುವ ಕಾಲಮಿತಿ ಮೇಳದಲ್ಲೂ ಪ್ರಸಂಗಕ್ಕೆ ಯಾವುದೇ ಕೊರತೆಯಿಲ್ಲ. ಹಿಂದೆ ಪೂಜೆ ಮುಗಿದು ರಾತ್ರಿ 7ರಿಂದ 12 ಗಂಟೆವರೆಗೆ ಪೂರ್ವ ರಂಗ ಇತ್ತು. ನಿಜವಾದ ಪ್ರಸಂಗ ನಡೆಯುತ್ತಿದ್ದುದು ರಾತ್ರಿ 12ರಿಂದ ಬೆಳಗ್ಗೆ 5.30ರವರೆಗೆ ಕೇವಲ 5.30 ಗಂಟೆ ಮಾತ್ರ. ಈಗ ಕಾಲಮಿತಿ ಯಕ್ಷಗಾನದಲ್ಲಿ ಸಂಜೆ 6ರಿಂದ 7 ಗಂಟೆವರೆಗೆ ಪೂರ್ವ ರಂಗ ಮುಗಿಸಿ, 7 ಗಂಟೆಗೆ ಪ್ರಸಂಗ ಆರಂಭವಾಗಿ ರಾತ್ರಿ 12.30ರವರೆಗೆ ನಡೆಯುತ್ತದೆ. ನಿಜವಾದ ಪ್ರಸಂಗಕ್ಕೆ ಕಾಲಮಿತಿಯಲ್ಲೂ ಯಾವುದೇ ಕೊರತೆ ಆಗಿಲ್ಲ. ಅಲ್ಲದೆ, ಧ್ವನಿವರ್ಧಕ ಇಲ್ಲದೆ ಪ್ರದರ್ಶನ ನೀಡಲು ಕಲಾವಿದರಿಗೆ ಅಷ್ಟು ತಾಳ್ಮೆಯೂ ಇಲ್ಲ’ ಎಂದು ದೇವಾಲಯಕ್ಕೆ ಸಂಬಂಧಿಸಿದವರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಳ:
ಕಾಲಮಿತಿ ಯಕ್ಷಗಾನ ಆರಂಭವಾದ ಬಳಿಕ ಸಣ್ಣ ಮಕ್ಕಳಾದಿಯಾಗಿ ಕುಟುಂಬ ಸಮೇತ ಯಕ್ಷಗಾನ ನೋಡುವವರ ಸಂಖ್ಯೆ ಹೆಚ್ಚಿದೆ. ಈ ಕಾರಣದಿಂದಲೇ ಯುವ ಜನಾಂಗ ಈಗ ಹೆಚ್ಚು ಯಕ್ಷಗಾನದತ್ತ ಆಕರ್ಷಿತವಾಗಿದೆ. ಯಕ್ಷಗಾನ ಕಲೆಯ ಉಳಿವಿನ ದೃಷ್ಟಿಯಿಂದ ಇದು ಅತ್ಯಂತ ಅಮೂಲ್ಯ ಕಾಲಘಟ್ಟ. ಕಲಾವಿದರ ದೃಷ್ಟಿಯಿಂದ ನೋಡುವುದಾದರೂ, ಹಿಂದೆ ಇದನ್ನೇ ಉದ್ಯೋಗವನ್ನಾಗಿ ಮಾಡಿಕೊಂಡವರಿದ್ದರು. ಈಗ ಅದೆಷ್ಟೋ ಮಂದಿ ಕಲಾವಿದರು ಇತರ ಉದ್ಯೋಗ ಮಾಡುತ್ತಾ ರಾತ್ರಿ ಕಲಾಪ್ರದರ್ಶನ ನೀಡಿ ಮತ್ತೆ ಮರುದಿನ ಉದ್ಯೋಗಕ್ಕೆ ಹೊರಡುತ್ತಾರೆ. ಕಾಲಮಿತಿ ಯಕ್ಷಗಾನದಿಂದ ಯಕ್ಷಗಾನಕ್ಕೆ ಸೇರುವ ಆಸಕ್ತರ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎನ್ನುತ್ತಾರವರು.ಶುದ್ಧ ಯಕ್ಷಗಾನಕ್ಕೆ ಆದ್ಯತೆ:
‘ರಾತ್ರಿಪೂರ್ತಿ ಯಕ್ಷಗಾನದಲ್ಲಿ ಅನಗತ್ಯ ಮಾತುಗಾರಿಕೆ, ಚಾಲು ಕುಣಿತ ಸಾಮಾನ್ಯ- ಇದೆಲ್ಲವೂ ಯಕ್ಷಗಾನೀಯವಲ್ಲ. ಕಾಲಮಿತಿ ಮಾಡುವುದರಿಂದ ಇಂಥ ಅನಗತ್ಯಗಳಿಗೆ ಅವಕಾಶವೇ ಇಲ್ಲದಂತಾಗಿ ಶುದ್ಧ ಯಕ್ಷಗಾನ ಕಲೆ ಉಳಿಯಲಿದೆ. ಕಟೀಲು ಮೇಳ ದೇವರ ಮೇಳವಾಗಿರುವುದರಿಂದ ಶುದ್ಧ ಯಕ್ಷಗಾನದ ಅಗತ್ಯವೂ ಹೆಚ್ಚಿದೆ’ ಎಂದು ಹೆಸರು ಹೇಳಲಿಚ್ಛಿಸದ ಸೇವಾಕರ್ತರು ಅಭಿಪ್ರಾಯಪಟ್ಟಿದ್ದಾರೆ.ಚರ್ಚೆಯೇನು?
ಅರ್ಜಿದಾರರಿಗೆ ಮಾತ್ರ ಯಕ್ಷಗಾನ ನಡೆಸಲು ಕೋರ್ಟ್ ಒಪ್ಪಿಗೆ ವ್ಯಕ್ತಪಡಿಸಿದೆಯೇ ವಿನಾ ಇತರ ಸೇವಾದಾರರಿಗೆ ಅಲ್ಲ, ಮೇಳಕ್ಕೂ ಅಲ್ಲ ಎನ್ನುವುದು ಈಗ ಯಕ್ಷಗಾನ ವಲಯದಲ್ಲಿ ನಡೆಯುತ್ತಿರುವ ಚರ್ಚೆ. ಶಬ್ದಮಾಲಿನ್ಯ ಕಾಯ್ದೆ ಮಿತಿಗೆ ಒಳಪಟ್ಟು ರಾತ್ರಿಪೂರ್ತಿ ಯಕ್ಷಗಾನ ನಡೆಸುವುದು ಕಷ್ಟಸಾಧ್ಯ. ಧ್ವನಿವರ್ಧಕ ಇಲ್ಲದೆ ಪ್ರದರ್ಶನ ನೀಡುವುದು ಕಲಾವಿದರಿಗೂ ಸಮಸ್ಯೆ. ಹಾಗೊಂದು ವೇಳೆ ಅಪ್ಪಿ ತಪ್ಪಿ ಶಬ್ದಮಾಲಿನ್ಯ ಮಿತಿ ದಾಟಿ ಯಕ್ಷಗಾನ ಪ್ರದರ್ಶನ ಅರ್ಧಕ್ಕೆ ನಿಲ್ಲಿಸುವ ಕೆಲಸ ನಡೆದರೆ ಸೇವಾದಾರರ ಧಾರ್ಮಿಕ ಭಾವನೆಗೆ ಧಕ್ಕೆಯಾಗಲಿದೆ ಎನ್ನುವ ಚರ್ಚೆಯೂ ಜಾಲತಾಣಗಳಲ್ಲಿ ಹಾಗೂ ಯಕ್ಷಗಾನ ವಲಯದಲ್ಲಿ ನಡೆಯುತ್ತಿದೆ.