ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಎರೆಹುಳು ತಯಾರಿಕ ಘಟಕದಿಂದ ತಯಾರಾದ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ರಾಸಾಯನಿಕ ಗೊಬ್ಬರಗಳಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ಹೊಂದಿ ಇಳುವರಿಯನ್ನು ನೀಡುತ್ತದೆ ಎಂದು ಬೆಂಗಳೂರು ಬಸವನಗುಡಿ ರೋಟರಿ ಘಟಕದ ಅಧ್ಯಕ್ಷ ವಿಜಯ್ ರಾಜ್ ತಿಳಿಸಿದರು.ಅಣ್ಣೂರು ಗ್ರಾಮದ ಶಾಂತಮ್ಮ ಶಿವರಾಜುರ ಮನೆ ಪಕ್ಕದ ಆವರಣದಲ್ಲಿ ಬೆಂಗಳೂರಿನ ಬಸವನಗುಡಿ ರೋಟರಿ ಸಂಸ್ಥೆ ಸಹಯೋಗದಲ್ಲಿ ಬೆಂಗಳೂರಿನ ಉದ್ಯಮಿ ಮಣಿಕಂಠರ ಸಹಾಯಸ್ತದೊಂದಿಗೆ ಎರೆಹುಳು ಗೊಬ್ಬರ ತಯಾರಿಕ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತ ಮಿತ್ರ ಎರೆಹುಳು ಗೊಬ್ಬರ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತದೆ. ಗ್ರಾಮೀಣ ಭಾಗದ ಕೃಷಿ ಹಾಗೂ ರೈತರಿಗೆ ಅನುಕೂಲವಾಗುವಂತೆ ಅಣ್ಣೂರು ಗ್ರಾಮದಲ್ಲಿ ಐದು ಕಡೆ ಎರೆಹುಳು ಘಟಕ ನಿರ್ಮಾಣವಾಗುತ್ತಿದೆ. ಬೆಂಗಳೂರಿನ ಕೃಷಿ ಮಹಾ ವಿದ್ಯಾಲಯ ಪ್ರಾಧ್ಯಾಪಕರ ಸಲಹೆ ಮೇರೆಗೆ ಜೈವಿಕ ಕೃಷಿ ಪದ್ಧತಿ ಅಳವಡಿಸಿಕೊಂಡು ರೈತರು ಸಾವಯವ ಗೊಬ್ಬರಗಳ ಬಳಕೆಗೆ ಅನುಗುಣವಾಗಿ ಕೃಷಿ ಚಟುವಟಿಕೆ ಮಾಡಲು ಸಹಕಾರಿಯಾಗಿದೆ ಎಂದರು.ನರ್ಸರಿ ಬೆಳೆಗಳಿಗೆ ಸಾವಯವ ಕೃಷಿಗೆ ಹೆಚ್ಚು ಅನುಕೂಲವಾಗುವ ಹಾಗೂ ಭೂಮಿಗೆ ಹೆಚ್ಚು ಫಲವತ್ತತೆಯನ್ನು ತರುವ ಅಂಶಗಳು ಈ ಘಟಕದಲ್ಲಿ ಇರುತ್ತದೆ. ಘಟಕದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರಿನಿಂದ ನೈಸರ್ಗಿಕ ಗೊಬ್ಬರವಾಗಿ ಬೆಳೆಗಳಿಗೆ ಸಹಕಾರಿಯಾಗಲಿದೆ ಎಂದರು.
ಈ ವೇಳೆ ಗ್ರಾಪಂ ಅಧ್ಯಕ್ಷೆ ಅಶ್ವಿನಿ ಆನಂದ್, ರೋಟರಿ ಸಂಸ್ಥೆ ಜಿಲ್ಲಾ ಮಹಿಳಾ ಸಬಲೀಕರಣದ ನಿರ್ದೇಶಕಿ ಡಾ.ಅನುಪಮಾ ಸವದಿ, ಮಾಜಿ ಅಧ್ಯಕ್ಷೆರಾದ ಆಶಾ ರಾಜೇಶ್, ಕವಿತಾ ಸುಂದರರಾಜ್, ಪಿಡಿಓ ಅಶ್ವಿನಿ, ಸದಸ್ಯರಾದ ಪಿಣ್ಣ ಸತೀಶ್, ಕಾರ್ಕಹಳ್ಳಿ ಮಹೇಶ್, ಚಂದ್ರಶೇಖರ್, ಸಿದ್ದೇಗೌಡ, ಮುಖಂಡರಾದ ಜಯಸ್ವಾಮಿ, ವೀರೇಂದ್ರ, ಗ್ರಾಪಂ ದ್ವಿತಿಯ ದರ್ಜೆ ಸಹಾಯಕ ರಾಮು ಸೇರಿದಂತೆ ಹಲವರು ಉಪಸ್ಥಿತರಿದ್ದರು.