ಗದಗ: ರಾಜ್ಯದಲ್ಲಿ ವಿಶ್ವವಿದ್ಯಾಲಯಗಳ ಸುಧಾರಣೆಗಾಗಿ ರಾಜ್ಯ ಸರ್ಕಾರವು ಉನ್ನತ ಮಟ್ಟದ ಸಮಿತಿ ರಚನೆ ಮಾಡುವುದು ಅಗತ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ. ಪಾಟೀಲ ಹೇಳಿದರು.
ವಿಶ್ವ ವಿದ್ಯಾಲಯಗಳ ಸಿಂಡಿಕೇಟ್ ಸದಸ್ಯರು ಸಭೆಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ನಿಮ್ಮ ವ್ಯಕ್ತಿತ್ವ ಉನ್ನತ ಮಟ್ಟಕ್ಕೆ ಒಯ್ಯಲು ಸಹಕಾರಿಯಾಗಿವೆ. ವಿಶ್ವ ವಿದ್ಯಾಲಯಗಳಲ್ಲಿ ಶೇ.70 ರಷ್ಟು ಬೋಧಕ ಹುದ್ದೆಗಳು ಖಾಲಿ ಇದ್ದು ಮುನ್ನಡೆಸುವುದು ಕಷ್ಟ ಸಾಧ್ಯವಾಗಿದೆ.ವಿದ್ಯಾರ್ಥಿಗಳ ಸಂಖ್ಯೆ ಅಧಿಕವಾಗುತ್ತಿದ್ದು ಶಿಕ್ಷಕರ ಸಂಖ್ಯೆ ಕ್ಷೀಣಿಸುತ್ತಿದೆ.ಜತೆಗೆ ವಿವಿಗಳಿಗೆ ನೀಡುವ ಅನುದಾನವು ಸಹ ಅಗಾಧ ಪ್ರಮಾಣದಲ್ಲಿ ಕುಂಠಿತವಾಗಿದೆ. ಕಳೆದ 5 ವರ್ಷದಲ್ಲಿ ವಿಶ್ವ ವಿದ್ಯಾಲಯಗಳ ಅಭಿವೃದ್ಧಿಗೆ ಅನುದಾನ ಬಂದಿಲ್ಲ.ಇದರಿಂದ ಮೂಲ ಸೌಕರ್ಯಗಳ ಅಭಿವೃದ್ಧಿ ಜತೆಗೆ ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವುದು ಸವಾಲಾಗಿದೆ ಎಂದರು.
ಗದಗ ಸ್ನಾತಕೋತ್ತರ ಕಟ್ಟಡದ ಮೊದಲ ಹಂತದ ಕಾಮಗಾರಿಯನ್ನು ₹9 ಕೋಟಿಗಳಲ್ಲಿ ಕೈಗೊಳ್ಳಲಾಗಿದೆ. ಸ್ನಾತಕೋತ್ತರ ಕಟ್ಟಡದ ಸಂಪೂರ್ಣ ಕಾಮಗಾರಿಗೆ ₹25 ರಿಂದ 30 ಕೋಟಿ ಅನುದಾನ ಅಗತ್ಯವಿದೆ. ಬೋಧಕ ಸಿಬ್ಬಂದಿಗಳ ಅಗತ್ಯವಿದು ಇದಕ್ಕೆ ಸಂಪೂರ್ಣ ಸಹಕಾರ ಒದಗಿಸಲಾಗುವುದು ಎಂದು ತಿಳಿಸಿದರು.ವಿಪ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ,ಗದಗ ಜಿಲ್ಲೆಯಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾಗಿ 24 ವರ್ಷಗಳು ಕಳೆದಿವೆ. ಈಗ ಸ್ವಂತ ಕಟ್ಟಡ ಆಗಿರುವುದು ಸಂತಸ ತಂದಿದೆ. ಮಾಜಿ ಸಿಎಂ ಎಸ್.ಎಂ.ಕೃಷ್ಣ , ಬಸವರಾಜ ರಾಯರೆಡ್ಡಿ ಸಹಕಾರದಿಂದ ಕಟ್ಟಡ ನಿರ್ಮಾಣ ಸಾಧ್ಯವಾಗಿದೆ ಎಂದರು.
ಈ ವೇಳೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ ಮಾತನಾಡಿದರು. ಸ್ನಾತಕೊತ್ತರ ಕೇಂದ್ರದ ಸಿಂಡಿಕೇಟ್ ಸದಸ್ಯ ರಾಬರ್ಟ ಗಡ್ಡಾಪುರ, ಮಹೇಶ ಹುಲ್ಲಣ್ಣವರ, ರತ್ನಾ ಪಾಟೀಲ, ಶಾಮ್ ಮಲ್ಲನಗೌಡರ, ಮಂಜುಳಾ, ಪ್ರಕಾಶ ಹೊಸಮನಿ, ಕಳಸಾಪುರ ಗ್ರಾಪಂ ಅಧ್ಯಕ್ಷೆ ಅನುಸೂಯಾ ಬೆಟಗೇರಿ, ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಪ್ರೊ.ಎನ್.ವೈ.ಮಟ್ಟಿಹಾಳ, ಆಡಳಿತಾಧಿಕಾರಿ ಮಲ್ಲಿಕಾರ್ಜುನ ನಾಯಕ, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ರಮೇಶ ಪಾಟೀಲ ಇದ್ದರು.