ಶಿರಹಟ್ಟಿ: ಕೃಷಿಯಲ್ಲಿ ಆರ್ಥಿಕವಾಗಿ ಸಬಲರಾಗಲು ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ನೀಡುವ ಔಡಲ ಬೇಸಾಯವು ರೈತರ ಪಾಲಿಗೆ ವರದಾನವಾಗಿದ್ದು, ಕಡಿಮೆ ಮಳೆಯಲ್ಲಿಯೂ ಉತ್ತಮ ಫಸಲು ಬರುತ್ತದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಡಾ. ಚೇತನಾ ಪಾಟೀಲ ಸಲಹೆ ನೀಡಿದರು. ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ, ಹೈದರಾಬಾದ್‌ನ ಭಾರತೀಯ ಎಣ್ಣೆಕಾಳು ಸಂಶೋಧನಾ ಸಂಸ್ಥೆ, ಬೆಂಗಳೂರಿನ ಅ.ಭಾ.ಸು.ಸಂ.ಪ್ರಾ. ಬೀಜಬೆಳೆ, ಜಿ.ಕೆ.ವಿ.ಕೆ. ಇವರ ಸಹಯೋಗದಲ್ಲಿ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಬೆಳ್ಳಟ್ಟಿ ಗ್ರಾಮದ ರೈತ ತಿಮ್ಮರಡ್ಡಿ ಮೇಕಳಿ ಅವರ ತೋಟದಲ್ಲಿ ಆಯೋಜಿಸಿದ್ದ ಔಡಲ(ಹರಳು)ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸ್ತುತವಾಗಿ ರೈತರು ಕೇವಲ ಹೆಸರು, ಗೋವಿನ ಜೋಳಗಳಂಥ ವಾಣಿಜ್ಯ ಬೆಳೆಗೆ ಮಹತ್ವ ನೀಡಿ ಮಳೆ ಬೆಳೆ ಬಾರದೇ ಆರ್ಥಿಕ ಸಂಕಷ್ಟತೆಗೆ ಸಿಲುಕುತ್ತಿರುವುದು ವಿಷಾದದ ಸಂಗತಿ. ಆದ್ದರಿಂದ ಬೇಸಾಯ ಪದ್ಧತಿಯಲ್ಲಿ ಬದಲಾವಣೆ ತರುವಲ್ಲಿ ಚಿಂತನೆ ನಡೆಸಿ ಕೃಷಿ ವಿಶ್ವವಿದ್ಯಾನಿಲಯಗಳು, ಕೃಷಿ ಸಂಶೋಧನಾ ಕೇಂದ್ರಗಳು ಸಂಶೋಧಿಸಿ ಜಾರಿಗೆ ತಂದ ಹೊಸ ಸಂಸ್ಕರಣ ಬೀಜ ತಳಿಗಳ ಮಾಹಿತಿ ಪಡೆದು ಬಿತ್ತನೆ ಮೂಲಕ ವ್ಯವಸಾಯದಲ್ಲಿ ಬದಲಾವಣೆ ತರಲು ಸಲಹೆ ನೀಡಿದರು.
ಬೆಂಗಳೂರು ಜಿಕೆವಿಕೆಯ ಸಹ ಪ್ರಾಧ್ಯಾಪಕಿ ಡಾ. ಎನ್. ನೇತ್ರಾ ಮಾತನಾಡಿ, ಈ ಭಾಗದ ರೈತರಲ್ಲಿ ಕೃಷಿ ವಿಧಾನದ ಬಗ್ಗೆ ಅರಿವು ಮೂಡಿಸಲು ಔಡಲ ಬೆಳೆಯ ಕ್ಷೇತ್ರೋತ್ಸವ ಹಮ್ಮಿಕೊಂಡಿದ್ದು, ರೈತರು ಇದರ ಪ್ರಯೋಜನ ಪಡೆದು ವ್ಯವಸಾಯದಲ್ಲಿ ಬದಲಾವಣೆ ತಂದಾಗ ಪ್ರಗತಿ ಸಾಧಿಸಬಹುದೆಂದರು.ಬೆಂಗಳೂರು ಜಿಕೆವಿಕೆಯ ತಳಿ ವಿಜ್ಞಾನಿ ಮುಖ್ಯಸ್ಥ ಡಾ. ಯಮನೂರ ಪ್ರಾಸ್ತಾವಿಕವಾಗಿ ಮಾತನಾಡಿ, ಔಡಲ ನೂತನ ತಳಿಗಳು, ಬೀಜೋಪಚಾರ, ಬಿತ್ತನೆಗೆ ಕೈಗೊಳ್ಳಬೇಕಾದ ಕ್ರಮ, ಕೀಟ ಮತ್ತು ರೋಗಗಳ ನಿರ್ವಹಣೆ, ಕಡಿಮೆ ಖರ್ಚು, ಅಧಿಕ ಇಳುವರಿಯ ಮೂಲಕ ಔಡಲ ಬೇಸಾಯದಿಂದ ಪಡೆಯುವ ಲಾಭ ಕುರಿತು ರೈತರಿಗೆ ಮಾಹಿತಿ ನೀಡಿ, ಸದರಿ ಔಡಲ ಬೆಳೆಗಾರ ತಿಮ್ಮರಡ್ಡಿ ಮೇಕಳಿ ಇವರು ಅನುಸರಿಸಿದ ರೀತಿ ಉತ್ಪಾದಿಸಿದ ಔಡಲು ಬೆಳೆ ಬಗ್ಗೆ ಮಾಹಿತಿ ನೀಡಿದರು.ಕೃಷಿ ಬೀಜ ಮಾರಾಟಗಾರ ವೀರೇಂದ್ರ ಪಾಟೀಲ ಮಾತನಾಡಿ, ಈ ಭಾಗದಲ್ಲಿ ರೈತರು ನೂತನ ಔಡಲ ಬೆಳೆಗೆ ಆಸಕ್ತಿ ತೋರಬೇಕಾಗಿದ್ದು, ಹಾಗೆಯೇ ಕ್ಷೇತ್ರೋತ್ಸವದಲ್ಲಿ ಭಾಗಿಯಾದ ಅಧಿಕಾರಿಗಳು, ಕೃಷಿ ವಿಜ್ಞಾನಿಗಳು ರೈತರ ನೆರವಿಗೆ ಬರುವ ಮೂಲಕ ಅವರು ಬೆಳೆದ ಬೆಳೆಗೆ ಯೋಗ್ಯದರ, ಮಾರುಕಟ್ಟೆ ವ್ಯವಸ್ಥೆ ಮಾಡುವುದು ಅಗತ್ಯವಿದೆ ಎಂದರು.
ಶಿರಹಟ್ಟಿ ಕೃಷಿ ಇಲಾಖೆ ಡಿಡಿಎ ಡಾ. ಸ್ಫೂರ್ತಿ, ಎಡಿಎ. ಡಾ. ಶಿವಕುಮಾರ ಕಾಶಪ್ಪನವರ, ಹಿರಿಯ ತಾಂತ್ರಿಕ ಅಧಿಕಾರಿ ಡಾ. ರಂಗನಾಥ ಎಸ್.ಸಿ., ಎನ್.ಎನ್. ಗೋಕಾವಿ, ಎಸ್.ಬಿ. ಮಹಾಜನಶೆಟ್ಟರ, ಯಲ್ಲಪ್ಪ ಅಚ್ಚಳ್ಳಿ, ಹನುಮರಡ್ಡಿ ಭರಮರಡ್ಡಿ, ಮಹೇಶ ಬಡ್ನಿ, ತಿಮ್ಮರಡ್ಡಿ ಮರಡ್ಡಿ, ನಿವೃತ್ತ ತೋಟಗಾರಿಕೆ ಅಧಿಕಾರಿ ಸುರೇಶ ಕುಂಬಾರ, ಸಿದ್ರಾಮಪ್ಪ ಮೊರಬದ ಇತರ ರೈತರಿದ್ದರು.