ಫೆ.17ರೊಳಗೆ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ

KannadaprabhaNewsNetwork |  
Published : Nov 16, 2023, 01:15 AM IST
15ಕೆಡಿವಿಜಿ3, 4, 5-ದಾವಣಗೆರೆ ಎಸ್ಪಿ ಕಚೇರಿ ಸಭಾಂಗಣದಲ್ಲಿ ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್. | Kannada Prabha

ಸಾರಾಂಶ

ಜಿಲ್ಲೆಯ 6,16,353 ಖಾಸಗಿ, ಸರ್ಕಾರಿ ವಾಹನಗಳಿಗೆ ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಬೇಕು: ಎಸ್ಪಿ ಉಮಾ ಪ್ರಶಾಂತ್‌

ಜಿಲ್ಲೆಯ 6,16,353 ಖಾಸಗಿ, ಸರ್ಕಾರಿ ವಾಹನಗಳಿಗೆ ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಬೇಕು: ಎಸ್ಪಿ ಉಮಾ ಪ್ರಶಾಂತ್‌

ಕನ್ನಡಪ್ರಭ ವಾರ್ತೆ ದಾವಣಗೆರೆ

ಜಿಲ್ಲಾದ್ಯಂತ 2019ರ ಏ.1ಕ್ಕಿಂತ ಮೊದಲು ನೋಂದಾಯಿಸಲಾದ ಎಲ್ಲಾ ವಾಹನಗಳಿಗೂ 2024ರ ಫೆ.17 ರೊಳಗಾಗಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳ‍ವಡಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಸೂಚಿಸಿದ್ದಾರೆ.

ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸುವ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ 6,16,353 ಖಾಸಗಿ ಹಾಗೂ ಸರ್ಕಾರಿ ವಾಹನಗಳಿಗೆ ಎಚ್ಎಸ್ಆರ್‌ಪಿ ನಂಬರ್ ಪ್ಲೇಟ್‌ ಅಳವಡಿಸಬೇಕಿದೆ ಎಂದರು.

ಹೊಸ ನಂಬರ್‌ ಪ್ಲೇಟ್‌ ಬಳಕೆ ಏಕೆ?

ಅಪರಾಧಿಗಳು ಕಾನೂನು ಬಾಹಿರ ಚಟುವಟಿಕೆಗಳಿಗೆ ಬಳಸುವ ನಕಲಿ ನೋಂದಣಿ ಸಂಖ್ಯೆಗಳನ್ನು ತಡೆಗಟ್ಟಲು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಳಿಂದ ಸಾಧ್ಯವಾಗಲಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ವಾಹನಗಳನ್ನು ಸುಲಭವಾಗಿ ಟ್ರ್ಯಾಕ್ ಮಾಡಲು ಇದರಿಂದ ಸಹಕಾರಿಯಾಗಲಿದೆ ಎಂದು ತಿಳಿಸಿದರು.

2019ಕ್ಕಿಂತ ಮೊದಲಿನ ವಾಹನಗಳಿಗೆ ಅನ್ವಯ:

ಏಪ್ರಿಲ್ 2019ಕ್ಕಿಂತಲೂ ಮುಂಚೆ ನೋಂದಣಿ ಮಾಡಿಸಿಕೊಂಡ ದ್ವಿಚಕ್ರ ವಾಹನಗಳು, ತ್ರಿಚಕ್ರ ವಾಹನಗಳು, ಲಘು ಮೋಟಾರು ವಾಹನ, ಮಧ್ಯಮ ಮತ್ತು ಭಾರಿ ವಾಣಿಜ್ಯ ವಾಹನಗಳು, ಟ್ರ್ಯಾಕ್ಟರ್‌, ಪ್ರಯಾಣಿಕರ ಕಾರು ಸೇರಿ ಎಲ್ಲಾ ಹಳೆಯ ವಾಹನಗಳಿಗೂ ಈ ನಿಯಮ ಅನ್ವಯವಾಗಲಿದೆ ಎಂದು ಹೇಳಿದರು.

ವಾಹನ ಮಾಲೀಕರು ಆನ್ ಲೈನ್ ವೆಬ್ ಸೈಟ್‌- www.siam.in hsrp karnataka book my hsrp ಮತ್ತು book my hsrp ಗೆ ಭೇಟಿ ನೀಡಿ ನೊಂದಾಯಿಸಿ, ಆನ್ ಲೈನ್ ಮೂಲಕವೇ ಎಚ್.ಎಸ್.ಆರ್.ಪಿ ಶುಲ್ಕವನ್ನು ಪಾವತಿಸಿ, ನಂತರ ವಾಹನಗಳ ಡೀಲರ್ ಬಳಿ ನಂಬರ್ ಪ್ಲೇಟ್‍ಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಎಚ್ಎಸ್‌ಆರ್‌ಪಿ ಎಂಬುದು ವಾಹನಗಳ ನೋಂದಣಿ ನಂಬರ್ ಪ್ಲೇಟ್ ಆಗಿದ್ದು, ಅಲ್ಯಮಿನಿಯಂನಿಂದ ತಯಾರಿಸಲಾಗುತ್ತದೆ. ಅದರಲ್ಲಿ ಲೇಸರ್ ಕೋಡ್ ಇದ್ದು, ಸ್ಕ್ಯಾನ್ ಮಾಡಿದಾಗ ವಾಹನದ ಸಂಪೂರ್ಣ ಮಾಹಿತಿ ಹಾಗೂ ಅಶೋಕ ಚಕ್ರದ ಚಿತ್ರವನ್ನು ಒಳಗೊಂಡಿರುತ್ತದೆ. ನಕಲಿ ನಂಬರ್ ಪ್ಲೇಟ್‌ ಅಳವಡಿಸುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಜಯಕುಮಾರ ಸಂತೋಷ್‌, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಪ್ರಮತೇಶ ಇತರರಿದ್ದರು. ಸರ್ಕಾರಿ ಬಸ್‌ಗಳಿಗೆ ಶೀಘ್ರ ಅಳವಡಿಕೆ

ದಾವಣಗೆರೆ ಘಟಕದ 56 ಕೆಎಸ್ಸಾರ್ಟಿಸಿ ಬಸ್‌ಗಳಿಗೆ ಈಗಾಗಲೇ ಎಚ್‌ಎಸ್ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಬಾಕಿ ಇರುವ 323 ಸರ್ಕಾರಿ ಸಾರಿಗೆ ಬಸ್‌ ಗಳಿಗೂ ಶೀಘ್ರವೇ ಹೈಸೆಕ್ಯೂರಿಟಿ ನಂಬರ್ ಪ್ಲೇಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಇದರಿಂದ ಸಾರ್ವಜನಿಕರು, ವಾಹನ ಮಾಲೀಕರಿಗೂ ಹೆಚ್ಚು ಉಪಯುಕ್ತವಾಗಲಿದೆ.

ಶ್ರೀನಿವಾಸ, ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ
.............

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ