ಎಸ್. ನಾರಾಯಣ
ಮುನಿರಾಬಾದ್ : ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಮ್ಮ ಶಾಲೆ ಉತ್ತಮ ಸಾಧನೆ ತೋರಬೇಕೆಂದು ಪಣತೊಟ್ಟಿರುವ ಮುಖ್ಯಶಿಕ್ಷಕರೊಬ್ಬರು ಶಾಲೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳ ಕಲಿಕೆಯಲ್ಲಿ ಪ್ರಗತಿ ಸಾಧಿಸಲು ನೆರವಾಗಿದ್ದಾರೆ.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಜಭಕ್ಷ ಅವರು ಪಂಚಾಯತ್ ಕ್ರಿಯಾಯೋಜನೆಯಲ್ಲಿ ₹ 2.5 ಲಕ್ಷ ವೆಚ್ಚದಲ್ಲಿ ಡಿಜಿಟಲ್ ಕ್ಲಾಸ್ ಸ್ಥಾಪಿಸಿ 2 ಇಂಟರಾಕ್ಟೀವ್ ಪ್ಯಾನಲ್ ಬೋರ್ಡ್ ಅಳವಡಿಸಿದ್ದಾರೆ. ಈ ಮೂಲಕ ವಿದ್ಯಾರ್ಥಿಗಳಿಗೆ ತರಗತಿ ನಡೆಸುತ್ತಿದ್ದಾರೆ. ಇದರಲ್ಲಿ ಯೂಟ್ಯೂಬ್ ಹಾಗೂ ಗೂಗಲ್ ಕ್ರೋಮ್ ಬ್ರೌಸ್ ಮಾಡಲು ಅನುಕೂಲವಿದೆ. ಗಣಿತದ ಸಮಸ್ಯೆಯನ್ನು ಈ ಬೋರ್ಡ್ ಮೇಲೆ ಬರೆದರೆ ಅದಕ್ಕೆ ಪರಿಹಾರವನ್ನು ಅದು ನೀಡುತ್ತಿದೆ.
ಡಿ. 31ಕ್ಕೆ ಪಠ್ಯ ಮುಕ್ತಾಯ:
ವಿದ್ಯಾರ್ಥಿಗಳಿಗೆ ಪರೀಕ್ಷೆ ಓದಿಕೊಳ್ಳಲು ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಡಿಸೆಂಬರ್ 31ಕ್ಕೆ ಪಠ್ಯಕ್ರಮ ಮುಗಿಸಿದ್ದಾರೆ. ಅಕ್ಟೋಬರ್ ರಜೆಯಲ್ಲೂ 15 ದಿನ ಸಹ ವಿದ್ಯಾರ್ಥಿಗಳಿಗೆ ಪ್ರತಿನಿತ್ಯ 4 ಗಂಟೆ ವಿಷಯಾವಾರು ಪಾಠ ಮಾಡಿದ್ದಾರೆ. ಹೀಗೆ ಎಲ್ಲ ಶಿಕ್ಷಕರು ತಮ್ಮ ವಿಷಯವನ್ನು ಮುಗಿಸಿದ್ದಾರೆ. ಜ. 18ರಿಂದ 23ರ ವರೆಗೆ ಶಾಲಾ ಹಂತದ ಪರೀಕ್ಷೆ, ಫೆ. 2ರಿಂದ 7ರ ವರೆಗೆ ಜಿಲ್ಲಾ ಹಂತದ ಪರೀಕ್ಷೆ ಮುಗಿಸಿದ್ದಾರೆ. ಇದೀಗ ಸೋಮವಾರದಿಂದ ಆರಂಭವಾಗುವ ರಾಜ್ಯಮಟ್ಟದ ಪರೀಕ್ಷೆಗೂ ವಿದ್ಯಾರ್ಥಿಗಳನ್ನು ಸಜ್ಜು ಗೊಳಿಸಿದ್ದಾರೆ.
ವಿದ್ಯಾಥಿಗಳ ಮನೆಗೆ ಶಿಕ್ಷಕರ ಭೇಟಿ:ಶಾಲಾ ಹಂತದ ಪರೀಕ್ಷೆಯಲ್ಲಿ ಕಳಪೆ ಪ್ರದರ್ಶನ ತೋರಿದ 14 ಜನ ವಿದ್ಯಾರ್ಥಿಗಳ ಮನೆಗೆ ಪ್ರತಿ ಗುರುವಾರ ಶಿಕ್ಷಕರಾದ ಗೀತಾಬಾಯಿ, ರಾಜೇಶ್ವರಿ, ಹಿದಾಯತುಲ್ಲಾ, ನಾಗರಾತ್ನ, ಅನುಪಮ, ಮಾರ್ತಾಂಡರಾವ್, ಶಮೀಮುನ್ನೀಸಾ ಬೇಗಂ, ರಸತುನ್ನೀಸಾ ಬೇಗಂ, ಶಮಾಪರ್ವಿನ್, ಅತಿಯಾ ಬಾನು ಭೇಟಿ ನೀಡಿ ಪಾಲಕರೊಂದಿಗೆ ಸಮಾಲೋಚನೆ ನಡೆಸಿ ವಿದ್ಯಾರ್ಥಿಗಳ ಓದಿಗೆ ಉತ್ತಮ ವಾತಾವರಣ ಕಲ್ಪಿಸುವಂತೆ ಹೇಳಿದ್ದಾರೆ.
ಬೆಳಗಿನ ಜಾವ ದೂರವಾಣಿ ಕರೆ:ಜ. 1ರಿಂದ ನಿತ್ಯ ಬೆಳಗಿನ ಜಾವ 4.15ಕ್ಕೆ ಶಿಕ್ಷಕರು ವಿದ್ಯಾರ್ಥಿಗಳಿಗೆ ದೂರವಾಣಿ ಕರೆ ಮಾಡಿ ಅವರನ್ನು ಎಬ್ಬಿಸಿ ಓದಿನಲ್ಲಿ ಪಾಲ್ಗೊಳ್ಳುವಂತೆ ತಿಳಿಸುತ್ತಿದ್ದಾರೆ. ಈ ಪ್ರಕ್ರಿಯೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವ ವರೆಗೂ ಇರಲಿದೆ ಎಂದು ಮುಖ್ಯ ಶಿಕ್ಷಕ ರಾಜ ಭಕ್ಷ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಮ್ಮ ಶಾಲೆಯ 11 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಲಿದ್ದಾರೆ ಎಂದು ಆಶಾಭಾವ ವ್ಯಕ್ತಪಡಿಸಿದ್ದಾರೆ.