- ಬಳ್ಳೇಶ್ವರದಲ್ಲಿ ನೂತನ ಬಸ್ ಸೇವೆಗೆ ಚಾಲನೆ ನೀಡಿ ಶಾಸಕ ಡಿ.ಜಿ.ಶಾಂತನಗೌಡ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಕಾಂಗ್ರೆಸ್ ಸರ್ಕಾರ ಜನಹಿತಕ್ಕಾಗಿ 5 ಗ್ಯಾರಂಟಿಗಳನ್ನು ಜಾರಿಗೆ ತಂದು ಯಶಸ್ವಿಯಾಗಿದೆ. ಈ ಪೈಕಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಗೆ ಬಂದ ನಂತರದಲ್ಲಿ ಎಲ್ಲ ಕಡೆಗಳಲ್ಲಿ ಸರ್ಕಾರಿ ಬಸ್‌ಗಳ ಸೌಲಭ್ಯಕ್ಕಾಗಿ ಬೇಡಿಕೆ ಹೆಚ್ಚಾಗಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.ಸೋಮವಾರ ತಾಲೂಕಿನ ಬಳ್ಳೇಶ್ವರದಲ್ಲಿ ಹೊನ್ನಾಳಿಯಿಂದ, ಕೊನಾಯಕನಹಳ್ಳಿ, ಬಳ್ಳೇಶ್ವರ, ಕುಂಬಾರ ಬೀದಿ ಮಾರ್ಗದಲ್ಲಿ ಸಂಚರಿಸುವ ನೂತನ ಬಸ್ ಸೇವೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಜನರ ಬೇಡಿಕೆ ಮೇರೆಗೆ ಸರ್ಕಾರ ಕೂಡ ಸುಮಾರು 3 ಸಾವಿರ ನೂತನ ಬಸ್‌ಗಳ ಖರೀದಿಗೆ ಕ್ರಮ ಕೈಗೊಂಡಿದೆ. ಈಗಾಗಲೇ 2500 ಹೆಚ್ಚು ಬಸ್‌ಗಳು ಬಂದಿವೆ. ಬಸ್‌ಗಳಿದ್ರೂ, ಡ್ರೈವರ್ ಮತ್ತು ಕಂಡಕ್ಟರ್‌ಗಳ ಕೊರತೆ ಉಂಟಾಗಿದೆ ಎಂದು ಹೇಳಿದರು.ಸ್ವಾತಂತ್ರ್ಯ ಬಂದು 77 ವರ್ಷ ನಂತರವೂ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು 15 ತಿಂಗಳಾಗುತ್ತಿರುವ ಇಲ್ಲಿಯವರೆಗೆ ಈ ಭಾಗದ ಜನರಿಂದ ಸರ್ಕಾರಿ ಬಸ್ ಸೌಲಭ್ಯಕ್ಕಾಗಿ ಬೇಡಿಕೆ ಸಲ್ಲಿಸುತ್ತಲೇ ಇದ್ದರು. ಇವರ ಬಹುದಿನಗಳ ಬೇಡಿಕೆ ಈಗ ನೂತನ ಬಸ್ ಸೌಲಭ್ಯಕ್ಕೆ ಚಾಲನೆ ನೀಡುವ ಮೂಲಕ ಸಾಕಾರಗೊಂಡಂತಾಗಿದೆ. ಇದು ಸಂತಸದ ವಿಷಯವಾಗಿದೆ ಎಂದು ಹೇಳಿದರು.
ಹರಿಹರ-ಹೊನ್ನಾಳಿ-ಶಿವಮೊಗ್ಗ ಮಾರ್ಗದಲ್ಲಿ ಪ್ರತಿದಿನ ಸುಮಾರು 278 ಬಸ್‌ಗಳು ಸಂಚರಿಸುತ್ತಿವೆ. ಇಲ್ಲಿನ ಜನಸಂಚಾರ ದಟ್ಟಣೆಯಿಂದ ಕೂಡಿದ್ದು, ಜನರಿಗಾಗಿ ಬಸ್‌ಗಳು ಹಗಲು-ರಾತ್ರಿ ಸೇವೆ ಸಲ್ಲಿಸುತ್ತಿವೆ ಎಂದರು.ಕಾರ್ಯಕ್ರಮದಲ್ಲಿ ಗ್ರಾಮಸ್ಥರಿಂದ ಶಾಲೆ ಕಟ್ಟಡ ಹಾಗೂ ಅಡುಗೆ ಮನೆಗಳ ದುರಸ್ತಿ ಸಮುದಾಯ ಭವನ, ಸ್ಮಶಾನಕ್ಕಾಗಿ ಬೇಡಿಕೆ ಸಲ್ಲಿಸಲಾಯಿತು. ಇದಕ್ಕೆ ಸ್ಪಂದಿಸಿದ ಶಾಸಕರು, ಶಾಲೆ ಕಟ್ಟಡಗಳ ದುರಸ್ತಿಗಾಗಿ ಸಾಕಷ್ಟು ಬೇಡಿಕೆಯಿದೆ. ಹಂತ ಹಂತವಾಗಿ ಬೇಡಿಕೆ ಈಡೇರಿಸುವ ಬಗ್ಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಗ್ರಾಮದ ಮುಖಂಡ ಷಣ್ಮುಖಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಾಮದ ಅನೇಕ ಬೇಡಿಕೆಗಳ ಬಗ್ಗೆ ಶಾಸಕರ ಗಮನಕ್ಕೆ ತರಲಾಗಿದೆ. ಬಳ್ಳೇಶ್ವರದಲ್ಲಿ ಅಲ್ಪಸಂಖ್ಯಾತ ಸಮುದಾಯದವರಿಗೆ ಸಮುದಾಯ ಭವನ, ಸ್ಮಶಾನಕ್ಕಾಗಿ ಅನುದಾನ ಮಂಜೂರು ಮಾಡಬೇಕು. ಗ್ರಾಮಕ್ಕೆ ಇಂದಿನಿಂದ ಬಸ್ ಸೌಕರ್ಯ ಕಲ್ಪಿಸಿದ್ದು ಅತ್ಯಂತ ಸಂತೋಷ ತಂದಿದೆ ಎಂದರು.ಶಾಲಾ ಮಕ್ಕಳಿಗೆ ಬ್ಯಾಗ್:
ಸಾಮಾಜಿಕ ಕಾರ್ಯಕರ್ತ ದರ್ಶನ್ ಬಳ್ಳೇಶ್ವರ ಅವರು ತಮ್ಮ ತಂದೆ ಶಾಂತರಾಜ್ ಮಸಣಗಿ ಸ್ಮರಣಾರ್ಥ 7 ವರ್ಷಗಳಿಂದ ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡುತ್ತಿದ್ದಾರೆ. ಕಾರ್ಯಕ್ರಮದಲ್ಲಿಯೂ ಸಹ ಸರ್ಕಾರಿ ಶಾಲೆಗಳ ಬಡಮಕ್ಕಳಿಗೆ ಉಚಿತ ಬ್ಯಾಗ್ ವಿತರಿಸಲಾಯಿತು.ಅಧ್ಯಕ್ಷೆ ವಹಿಸಿದ್ದ ಹನುಮಸಾಗರ ಗ್ರಾಪಂ ಅಧ್ಯಕ್ಷೆ ಶೃತಿ ಮಂಜುನಾಥ ಮಾತನಾಡಿ, ಅಭಿವೃದ್ಧಿ ವಿಷಯದಲ್ಲಿ ಪಕ್ಷಬೇಧ ಮರೆತು ಎಲ್ಲರೂ ಕೈ ಜೋಡಿಸಿ, ಸಹಕಾರದಿಂದ ಕೆಲಸ ಮಾಡಬೇಕು ಎಂದರು.
ಉಪವಿಭಾಗಾಧಿಕಾರಿ ಅಭಿಷೇಕ, ತಹಸೀಲ್ದಾರ್ ಪಟ್ಟರಾಜ ಗೌಡ, ಗ್ರಾಪಂ ಉಪಾಧ್ಯಕ್ಷ ನಾಗರಾಜ ನಾಯ್ಕ, ಸದಸ್ಯರು, ಕೆಎಸ್‌ಆರ್‌ಟಿಸಿ ಡಿಪೋ ವ್ಯವಸ್ಥಾಪಕ ರಾಮಚಂದ್ರ, ಮುಖಂಡರಾದ ಶ್ರೇಯಾನ್ಸ ಪಾಟೀಲ್, ಎಸ್.ಡಿ.ಎಂ.ಸಿ. ಅಧ್ಯಕ್ಷ ದೇವೇಂದ್ರಪ್ಪ, ರಂಜಿತ, ಹನುಮಗೌಡ, ಹೊಳೆಹರಳಹಳ್ಳಿ ನಾಗರಾಜ್, ಷಣ್ಮುಖಪ್ಪ, ದರ್ಶನ್ ಬಳ್ಳೇಶ್ವರ ಮುಂತಾದವರು ಇದ್ದರು.ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ಮಂಜುನಾಥ ನಿರೂಪಿಸಿದರು. ಭುಜಬಲ ಸ್ವಾಗತಿಸಿದರು.
- - - -2ಎಚ್.ಎಲ್.ಐ1:ಹೊನ್ನಾಳಿ ತಾಲೂಕಿನ ಬಳ್ಳೇಶ್ವರದಲ್ಲಿ ಸೋಮವಾರ ನೂತನ ಬಸ್ ಸಂಚಾರಕ್ಕೆ ಶಾಸಕ ಡಿ.ಜಿ.ಶಾಂತನಗೌಡ ಚಾಲನೆ ನೀಡಿದರು. ಎಸಿ ಅಭಿಷೇಕ್, ತಹಸೀಲ್ದಾರ್ ಪಟ್ಟರಾಜ ಗೌಡ ಗ್ರಾಮಸ್ಥರು ಇದ್ದರು.