ಕನ್ನಡ ಶಾಲೆಗಳ ಉಳಿವಿಗೆ ಒತ್ತಾಯಿಸಿ ಹೆದ್ದಾರಿ ತಡೆ

KannadaprabhaNewsNetwork |  
Published : Mar 13, 2026, 01:15 AM IST
೧೨ಕೆಎಂಎನ್‌ಡಿ-೧ಕನ್ನಡ ಶಾಲೆಗಳ ಉಳಿವಿಗೆ ಒತ್ತಾಯಿಸಿ ಮಂಡ್ಯದ ಜೆ.ಸಿ.ವೃತ್ತದಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. | Kannada Prabha

ಸಾರಾಂಶ

ಕನ್ನಡಿಗರ ತೆರಿಗೆ ಹಣದಲ್ಲಿ ಆಡಳಿತ ನಡೆಸುವ ಸರ್ಕಾರಕ್ಕೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಯೋಗ್ಯತೆ ಇಲ್ಲವೇ? ಕಳೆದ ೩೦ ವರ್ಷಗಳಿಂದ ಕನ್ನಡ ಶಾಲೆಗಳನ್ನು ಹಂತ ಹಂತವಾಗಿ ಕಗ್ಗೊಲೆ ಮಾಡಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಕನ್ನಡ ಶಾಲೆಗಳ ಉಳಿವಿಗಾಗಿ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಗುರುವಾರ ಹೆದ್ದಾರಿ ತಡೆ ನಡೆಸಿ ಬಂಧನಕ್ಕೆ ಒಳಗಾದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ವೃತ್ತದಲ್ಲಿ ಸೇರಿದ ಕಾರ್ಯಕರ್ತರು, ರಾಜ್ಯ ಸರ್ಕಾರದ ಕನ್ನಡ ಶಾಲೆಗಳ ವಿರೋಧಿ ನೀತಿಯನ್ನು ಖಂಡಿಸಿ ಘೋಷಣೆ ಕೂಗಿದರು.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕುಳಿತು ರಸ್ತೆ ಸಂಚಾರಕ್ಕೆ ತಡೆಯೊಡ್ಡಿದ ಪ್ರತಿಭಟನಾಕಾರರನ್ನು ಮನವೊಲಿಸಲು ಪೊಲೀಸರು ಪ್ರಯತ್ನಿಸಿದರು. ಯಾವುದೇ ಕಾರಣಕ್ಕೂ ಹೆದ್ದಾರಿಯಿಂದ ಮೇಲೇಳುವುದಿಲ್ಲಿ ಪಟ್ಟುಹಿಡಿದರು. ಇದರಿಂದ ಹಿರಿಯ ಪೊಲೀಸ್ ಅಧಿಕಾರಿಗಳ ಸೂಚನೆ ಮೇರೆಗೆ ವಾಟಾಳ್ ನಾಗರಾಜ್, ಕೆ.ಕುಮಾರ್, ಮಂಜುನಾಥ್ ಸೇರಿದಂತೆ ಹಲವರನ್ನು ಬಂಧಿಸಿ, ಪೊಲೀಸ್ ಪರೇಡ್ ಮೈದಾನಕ್ಕೆ ಕರೆದೊಯ್ದು, ಪ್ರಕರಣ ದಾಖಲಿಸಿ ನಂತರ ಬಿಡುಗಡೆ ಮಾಡಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕುಮಾರ್ ಮಾತನಾಡಿ, ರಾಜ್ಯದಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಸ್ಥಿತಿ ಶೋಚನೀಯವಾಗಿದ್ದು, ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಶಾಲೆಗಳನ್ನು ಉಳಿಸಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಕನ್ನಡಿಗರ ತೆರಿಗೆ ಹಣದಲ್ಲಿ ಆಡಳಿತ ನಡೆಸುವ ಸರ್ಕಾರಕ್ಕೆ ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಯೋಗ್ಯತೆ ಇಲ್ಲವೇ? ಕಳೆದ ೩೦ ವರ್ಷಗಳಿಂದ ಕನ್ನಡ ಶಾಲೆಗಳನ್ನು ಹಂತ ಹಂತವಾಗಿ ಕಗ್ಗೊಲೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಕನ್ನಡ ಶಾಲೆಗಳಿಗೆ ಅನುದಾನ ನೀಡಲು ಸರ್ಕಾರದ ಬಳಿ ಹಣವಿಲ್ಲದಂತಾಗಿದೆ. ೩೦ ವರ್ಷಗಳಿಂದ ಕನ್ನಡ ಶಾಲೆಗಳನ್ನು ಕತ್ತಲೆಯಲ್ಲೇ ಇಡಲಾಗಿದೆ. ಶಾಲಾ ಕಟ್ಟಡಗಳು ಕುಸಿದು ಬೀಳುತ್ತಿವೆ, ಶಿಕ್ಷಕರ ಕೊರತೆಯಿದೆ. ಕೂಡಲೇ ವಿಶೇಷ ಪ್ಯಾಕೇಜ್ ಮೂಲಕ ಕನ್ನಡ ಮಾಧ್ಯಮ ಶಾಲೆಗಳನ್ನು ಸಬಲೀಕರಣಗೊಳಿಸಬೇಕು ಎಂದು ಒತ್ತಾಯಿಸಿದರು.

ಕನ್ನಡ ಶಾಲೆಗಳಿಗೆ ೨೦ ದಿನಗಳೊಳಗೆ ಅನುದಾನ ನೀಡಬೇಕು ಎಂದು ಗಡುವು ನೀಡಿದರಲ್ಲದೆ, ೨೦ ದಿನಗಳೊಳಗೆ ಅನುದಾನ ನೀಡದಿದ್ದರೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂವಿಧಾನ ಸೇನೆ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ, ಹನಿಯಂಬಾಡಿ ಪಾರ್ಥಸಾರಥಿ, ಬೆಟ್ಟಹಳ್ಳಿ ಮಂಜುನಾಥ, ಗಿರೀಶ್ ಗೌಡ, ಜಗದೀಶ್, ಗಂಗಾಧರ್, ಖಲೀಮ್, ಸೌಭಾಗ್ಯ, ಎಂ.ಎಸ್. ಮಂಜುನಾಥ್, ಪ್ರಸನ್ನ ಹಾಗೂ ಜಿಲ್ಲೆಯ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಸಮಾಜದ ಅಭಿವೃದ್ಧಿಗೆ ಅಡಿಗಲ್ಲುಗಳು: ಜಿ.ಮುನಿರೆಡ್ಡಿ
ಕರ್ನಾಟಕದ ರಫ್ತುಗಳ ಭವಿಷ್ಯ ಅತ್ಯಂತ ಪ್ರಕಾಶಮಾನ