ಉಪ್ಪಿನಂಗಡಿ: ಒಂದೆಡೆ ಹೆದ್ದಾರಿ ಕಾಮಗಾರಿ, ಇನ್ನೊಂದೆಡೆ ಸಂಚಾರ ನಿಯಂತ್ರಿಸಬೇಕಾದ ಪೊಲೀಸರ ನಿರ್ಲಕ್ಷ್ಯದಿಂದಾಗಿ ಉಪ್ಪಿನಂಗಡಿ ಪೇಟೆ ಪ್ರವೇಶ ಮತ್ತು ನಿರ್ಗಮನ ತ್ರಾಸದಾಯಕವಾಗಿದೆ.
ಉಪ್ಪಿನಂಗಡಿ: ಒಂದೆಡೆ ಹೆದ್ದಾರಿ ಕಾಮಗಾರಿ, ಇನ್ನೊಂದೆಡೆ ಸಂಚಾರ ನಿಯಂತ್ರಿಸಬೇಕಾದ ಪೊಲೀಸರ ನಿರ್ಲಕ್ಷ್ಯದಿಂದಾಗಿ ಉಪ್ಪಿನಂಗಡಿ ಪೇಟೆ ಪ್ರವೇಶ ಮತ್ತು ನಿರ್ಗಮನ ತ್ರಾಸದಾಯಕವಾಗಿದೆ. ಹೆದ್ದಾರಿಯಿಂದ ಉಪ್ಪಿನಂಗಡಿ ಪೇಟೆಗೆ ಸಂಪರ್ಕ ಸಾಧಿಸುವ ರಸ್ತೆಯನ್ನು ಕಾಂಕ್ರೀಟೀಕರಣಗೊಳಿಸುವ ಸಲುವಾಗಿ ಒಂದು ಪಾರ್ಶ್ವ್ವ ಅಗೆಯಲಾಗಿದ್ದು, ಕಳೆದ ಕೆಲ ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣ ಕಾಂಕ್ರೀಟ್ ಕಾಮಗಾರಿ ತೀರಾ ಮಂದಗತಿಯಲ್ಲಿದೆ.
ಅಗೆಯಲಾಗಿರುವ ಭಾಗದಲ್ಲಿ ಮಳೆ ನೀರು ನಿಂತು ಈಜು ಕೊಳದಂತಾಗಿದೆ. ಲಭ್ಯ ಇರುವ ಒಂದು ಪಾರ್ಶ್ವದಲ್ಲಿ ಉಭಯ ದಿಕ್ಕಿನ ವಾಹನ ಸಾಗಬೇಕಾಗಿದ್ದು, ಘನ ವಾಹನಗಳ ಸಂಚಾರ ವಾಹನ ದಟ್ಟಣೆಯುಂಟಾಗುತ್ತಿದೆ. ಕಳೆದ ಕೆಲ ದಿನಗಳಿಂದ ಈ ಸಮಸ್ಯೆ ಇಲ್ಲಿ ತಲೆದೋರಿದರೂ ವಾಹನ ಸಂಚಾರವನ್ನು ಸುಲಲಿತಗೊಳಿಸುವ ನಿಟ್ಟಿನಲ್ಲಿ ಯಾವೊಬ್ಬ ಪೊಲೀಸ್ ಸಿಬ್ಬಂದಿಯೂ ಸ್ಥಳದಲ್ಲಿ ಕರ್ತವ್ಯದಲ್ಲಿ ಕಾಣುತ್ತಿಲ್ಲ.
ದಂಡ ಶುಲ್ಕ ವಿಧಿಸಲು ಸಮಯ ಸಿಗುತ್ತಿದೆ: ಈ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯವಾಗಿ ಜನರು ಸಮಸ್ಯೆಗೆ ಸಿಲುಕಿದಾಗ ವಾಹನ ಸಂಚಾರವನ್ನು ನಿಯಂತ್ರಿಸಲು ಸಂಚಾರಿ ಪೊಲೀಸರಾಗಲಿ, ಸ್ಥಳೀಯ ಪೊಲೀಸರಾಗಲಿ ಮುಂದಾಗುತ್ತಿಲ್ಲ. ಆದರೆ ಅದೇ ಸಮಯದಲ್ಲಿ ಅದೇ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲಿಸಿ ದಂಡ ಶುಲ್ಕ ವಿಧಿಸುವ ಕಾರ್ಯ ಟ್ರಾಫಿಕ್ ಪೊಲೀಸರು ನಡೆಸಿದ್ದು, ಸ್ಥಳೀಯರನ್ನು ಕೆರಳಿಸಿದೆ.
ಸಮಸ್ಯೆ ನಿವಾರಿಸಿ ಜನರಿಗೆ ಅನುಕೂಲತೆಯನ್ನು ಕಲ್ಪಿಸಬೇಕಾದ ಕರ್ತವ್ಯವನ್ನು ಮರೆತು ಸಂಕಷ್ಟಕ್ಕೆ ಸಿಲುಕಿದ ಜನರನ್ನು ಮತ್ತೆ ಸಂಕಷ್ಟಕ್ಕೆ ತಳ್ಳುವ ಟ್ರಾಫಿಕ್ ಪೊಲೀಸರ ನಡೆ ಜನಾಕ್ರೋಶಕ್ಕೆ ಕಾರಣವಾಗಿದೆ.
ಬಸ್ಸು ನಿರ್ವಾಹಕನ ಶ್ಲಾಘನೀಯ ಕಾರ್ಯ
ಮಂಗಳವಾರ ಸಂಜೆ ಉಂಟಾದ ವಾಹನ ದಟ್ಟಣೆಯ ಸಮಯದಲ್ಲಿ ಬಸ್ಸಿನ ಕಂಡೆಕ್ಟರೊಬ್ಬರು ಬಸ್ಸಿನಿಂದ ಇಳಿದು ವಾಹನಗಳ ಸುಗಮ ಸಂಚಾರಕ್ಕೆ ಶ್ರಮಿಸುತ್ತಿದ್ದ ದೃಶ್ಯ ಕಂಡು ಬಂದಿತ್ತು. ಇದನ್ನು ಕಂಡ ಸ್ಥಳೀಯರು ಪೊಲೀಸರಿಲ್ಲದ ಊರಿನಲ್ಲಿ ಬಸ್ ಕಂಡೆಕ್ಟರ್ ನೇ ಪೊಲೀಸರಾಗಬೇಕಾಗಿದೆ ಎಂದು ಹೇಳುತ್ತಿರುವುದು ಕಂಡುಬಂತು.ಪ್ರಸಕ್ತ ನಡೆಯುತ್ತಿರುವ ಹೆದ್ದಾರಿ ಕಾಮಗಾರಿಯು ಜನ ಸಂಚಾರ ಹಾಗೂ ವಾಹನ ಸಂಚಾರಕ್ಕೆ ಸಂಬಂಧಿಸಿ ಪ್ರಮುಖ ಸ್ಥಳದಲ್ಲಿ ನಡೆಯುತ್ತಿದ್ದು, ಇದರಿಂದಾಗಿ ಜನಜೀವನವೇ ಅಸ್ತವ್ಯಸ್ತಗೊಳ್ಳುವಂತಾಗಿದೆ. ಗುತ್ತಿಗೆದಾರ ಸಂಸ್ಥೆ ರಾತ್ರಿ ವೇಳೆ ಕಾಮಗಾರಿ ನಡೆಸಿದ್ದರೆ ಅನಗತ್ಯ ತೊಂದರೆ ತಪ್ಪಿಸಬಹುದಾಗಿದೆ.
-ಯು. ರಾಮ ಹಿರಿಯ ವರ್ತಕ
ಸಂಕಷ್ಠದ ಸಮಯದಲ್ಲಿ ಕರ್ತವ್ಯ ಪ್ರಜ್ಞೆ ತೋರದೆ ವಾಹನಗಳ ದಾಖಲೆ ಪರಿಶೀಲನೆ ನಡೆಸಿ ದಂಡ ವಿಧಿಸುವುದು ಪೊಲೀಸ್ ಇಲಾಖೆಯ ಬಗ್ಗೆ ಸಮಾಜಕ್ಕೆ ಋಣಾತ್ಮಕ ಭಾವನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಸಂವೇದನಾಶೀಲ ಕರ್ತವ್ಯಬದ್ಧತೆ ಪೊಲೀಸರು ಪ್ರದರ್ಶಿಸಬೇಕು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.