ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ನೆಲೆ ಗಟ್ಟಿನಲ್ಲಿ ಉಭಯ ಪಥಗಳ ನಡುವೆ ವಿಭಾಜಕ ರಚಿಸಲು ಹಾಕಿರುವ ಮಣ್ಣಿನಲ್ಲಿ ಸತತ ಎರಡನೇ ದಿನವೂ ಮಹಿಳೆಯರು ಹೂತು ಹೋಗಿ ಉಪ್ಪಿನಂಗಡಿಯಲ್ಲಿ ಅಪಾಯ ಸಂಭವಿಸಿದ್ದು, ಸಕಾಲಿಕ ರಕ್ಷಣಾ ಕಾರ್ಯದಿಂದಾಗಿ ಮಹಿಳೆಯರನ್ನು ರಕ್ಷಿಸಿದ ಘಟನೆ ಬುಧವಾರ ನಡೆದಿದೆ.
ಈ ಮದ್ಯೆ ಎರಡು ಪಾರ್ಶ್ವಗಳ ಹೆದ್ದಾರಿಯ ನಡುವೆ ವಿಭಾಜಕದ ನಿರ್ಮಾಣಕ್ಕಾಗಿ ಮಣ್ಣು ಹಾಕಲಾಗಿದ್ದು, ಸತತ ಮಳೆ ಸುರಿಯುತ್ತಿದ್ದ ಹಾಕಲಾಗಿದ್ದ ಮಣ್ಣುಗಳು ಮೃದುವಾಗಿ ಕಾಲಿಟ್ಟರೆ ಹೂತು ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಮಂಗಳವಾರ ಶಿಕ್ಷಕಿಯೋರ್ವರು ತಾನು ಪ್ರಯಾಣಿಸುವ ಬಸ್ಸು ಬಸ್ ನಿಲ್ದಾಣಕ್ಕೆ ತಲುಪುವ ಮುನ್ನವೇ ಹೆದ್ದಾರಿಯಲ್ಲಿಯೇ ಇಳಿದು, ಉನ್ನೊಂದು ಪಾರ್ಶ್ವದ ರಸ್ತೆಗೆ ಹೋಗುವ ಸಲುವಾಗಿ ವಿಭಾಜಕಕ್ಕೆ ಹಾಕಲಾದ ಮಣ್ಣಿನಲ್ಲಿ ಕಾಲಿರಿಸಿದ್ದಾರೆ. ನೋಡುತ್ತಿದ್ದಂತೆಯೇ ಸೊಂಟಮಟ್ಟದ ವರೆಗೆ ಹೂತು ಹೋದ ಅವರನ್ನು ಸಮೀಪದಲೇ ಇದ್ದ ಜೆಸಿಬಿ ಯಂತ್ರದ ಸಹಾಯದಿಂದ ಸುರಕ್ಷಿತವಾಗಿ ಮೇಲಕ್ಕೆತ್ತಲಾಯಿತು.
ಬುಧವಾರ ಅಂತಹದ್ದೇ ಘಟನೆ ಮರುಕಳಿಸಿದ್ದು , ಶಾಸಗಿ ವಿದ್ಯಾ ಸಂಸ್ಥೆಯ ಶಾಲಾ ಪರಿವೀಕ್ಷಕಿ ಮೀನಾಕ್ಷಿ ಹೆದ್ದಾರಿಯಲೇ ಬಸ್ಸಿನಿಂದ ಇಳಿದು ಇನ್ನೊಂದು ಪಾರ್ಶ್ವದ ರಸ್ತೆಗೆ ಹೋಗುವ ಸಲುವಾಗಿ ವಿಭಾಜಕ ಮಣ್ಣು ಹಾಕಲಾದ ಸ್ಥಳಕ್ಕೆ ಕಾಲಿರಿಸಿದಂತೆ ಮಣ್ಣಿನಲ್ಲಿ ಹೂತು ಹೋಗಿದ್ದಾರೆ. ಈ ವೇಳೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಅಟೋ ರಿಕ್ಷಾ ಚಾಲಕ ತಕ್ಷಣ ಸಹಾಯಕ್ಕಾಗಿ ಧಾವಿಸಿ ಬಂದರಾದರೂ ಅವರೂ ಕೂಡಾ ಮಣ್ಣಿನಲ್ಲಿ ಹೂತು ಹೋದಂತಾಗಿ ಪ್ರಯಾಸದಿಂದ ಮೇಲೆದ್ದರು. ಬಳಿಕ ಪರಿವೀಕ್ಷಕಿಯವರನ್ನು ಮೇಲೆತ್ತಿ ಸ್ಥಳೀಯ ದೇವಸ್ಥಾನದಲ್ಲಿ ಮೈಗೆ ಮತ್ತಿದ್ದ ಮಣ್ಣನ್ನು ತೆಗೆದು ಕರ್ತವ್ಯಕ್ಕೆ ಹಾಜರಾದರು.ಹೆದ್ದಾರಿ ಮಧ್ಯದಲ್ಲಿ ಅಳವಡಿಸಲಾದ ರಸ್ತೆ ವಿಭಾಜಕ ಸ್ಥಳವು ಆಳವಾಗಿದ್ದು, ಇತ್ತೀಚೆಗಷ್ಟೇ ಮಣ್ಣು ಹಾಕಿರುವುದರಿಂದ ಮಳೆ ನೀರಿನಿಂದ ಸಡಿಲಗೊಂಡು ಅಪಾಯಕಾರಿಯಾಗಿದೆ. ಸಂಬಂಧಪಟ್ಟ ಕಾಮಗಾರಿ ಗುತ್ತಿಗೆದಾರ ಸಂಸ್ಥೆ ಜನರನ್ನು ಈ ಭಾಗದ ಮೂಲಕ ಸಂಚರಿಸದಂತೆ ಎಚ್ಚರಿಸಲು ಸೂಚನಾ ಫಲಕ ಹಾಕಬೇಕಾಗಿದೆ.