ಹೆಣ್ಣು ಮಕ್ಕಳನ್ನು ಕಾಲೇಜಿಗೆ ಕರೆ ತನ್ನಿ

KannadaprabhaNewsNetwork | Published : Sep 11, 2024 1:13 AM

ಸಾರಾಂಶ

ನೂತನವಾಗಿ ನಿರ್ಮಿಸಲಾಗಿರುವ ಎರಡು ತರಗತಿ ಕೊಠಡಿ ಉದ್ಘಾಟಿಸಿ

ಕನ್ನಡಪ್ರಭ ವಾರ್ತೆ ಮೈಸೂರು

ಕುಂಬಾರಕೊಪ್ಪಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರವೇಶಾತಿ ಹೆಚ್ಚಿಸಲು ವಿಶೇಷ ನೋಂದಣಿ ಅಭಿಯಾನ ಆರಂಭಿಸಿ ಮುಖ್ಯವಾಗಿ ಹೆಣ್ಣು ಮಕ್ಕಳನ್ನು ಕಾಲೇಜಿಗೆ ಸೇರಿಸಿ ಎಂದು ಶಾಸಕ ಕೆ. ಹರೀಶ್ ಗೌಡ ಸಲಹೆ ನೀಡಿದರು.

ನಗರದ ಹೆಬ್ಬಾಳು ಲೋಕನಾಯಕನಗರದಲ್ಲಿ ಪಾದಯಾತ್ರೆ ನಡೆಸಿ ಕುಂದುಕೊರತೆಗಳನ್ನು ಆಲಿಸಿ ಅಹವಾಲು ಸ್ವೀಕರಿಸಿದ ಬಳಿಕ ಕುಂಬಾರಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಎರಡು ತರಗತಿ ಕೊಠಡಿಗಳನ್ನು ಅವರು ಉದ್ಘಾಟಿಸಿ ಮಾತನಾಡಿದರು.

ಕುಂಬಾರಕೊಪ್ಪಲಿನ ಜನತೆ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲೆಂದು ಈ ಕಾಲೇಜಿಗೆ ಜಾಗ ನೀಡಿದ್ದಾರೆ. ಕಲೆ, ವಾಣಿಜ್ಯ ವಿಷಯದಲ್ಲಿ ಪಿಯುಸಿ ಅಧ್ಯಯನಕ್ಕೆ ಅವಕಾಶವಿದೆ. ಅಂತೆಯೇ ಈ ಕಾಲೇಜಿನ ಸುತ್ತ 7 ವಾರ್ಡ್ ಗಳಿದ್ದು ಕೇವಲ 65 ವಿದ್ಯಾರ್ಥಿಗಳು ಮಾತ್ರ ಪ್ರವೇಶಾತಿ ಪಡೆದಿರುವುದು ಬೇಸರದ ಸಂಗತಿ ಎಂದರು.

ನಾನು ಕಾಲೇಜಿಗೆ ಬೇಕಾದ ಎಲ್ಲಾ ರೀತಿ ಸೌಲಭ್ಯಗಳನ್ನು ನೀಡಲು ಸಿದ್ದನಿದ್ದೇನೆ. ಕಾಲೇಜಿನ ಸಿಬ್ಬಂದಿ ವಿಶೇಷ ಅಭಿಯಾನದ ಮೂಲಕ ಕಾಲೇಜು ವ್ಯಾಪ್ತಿಯಲ್ಲಿರುವ ಪ್ರೌಢಶಾಲೆಗಳಿಗೆ ಭೇಟಿ ನೀಡಿ, ಈ ಕಾಲೇಜಿಗೆ ಪ್ರವೇಶಾತಿ ಪಡೆಯುವಂತೆ ಮನವೊಲಿಸಬೇಕು. ಆ ಮೂಲಕ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಅವರು ಸಲಹೆ ನೀಡಿದರು.

ಗ್ರಾಮೀಣ ಪ್ರದೇಶದ ಹೆಣ್ಣುಮಕ್ಕಳು ನಗರ ಪ್ರದೇಶದ ಕಾಲೇಜಿನಲ್ಲಿ ಸೇರಿಕೊಂಡು ಅಧ್ಯಯನ ಮಾಡಲು ಉಳಿದುಕೊಳ್ಳಲು ಜಾಗವಿಲ್ಲದೇ ಶಿಕ್ಷಣ ಮೊಟಕುಗೊಳಿಸುತ್ತಿದ್ದಾರೆ. ಇದರಿಂದ ಹೆಣ್ಣು ಮಕ್ಕಳು ಅವಕಾಶ ವಂಚಿತರಾಗುತ್ತಾರೆ. ಆದರೆ, ನಗರ ಪ್ರದೇಶದ ಮಕ್ಕಳಿಗೆ ಈ ರೀತಿ ಆಗಬಾರದು. ಆ ನಿಟ್ಟಿನಲ್ಲಿ ಹೆಣ್ಣು ಮಕ್ಕಳು ಎಸ್ಎಸ್ಎಲ್‌ಸಿ ನಂತರ ಶಿಕ್ಷಣ ಮೊಟಕುಗೊಳಿಸುವುದನ್ನು ತಪ್ಪಿಸಿ ಎಂದರು.

ಕುಂಬಾರಕೊಪ್ಪಲು ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಕೊಳವೆಬಾವಿ ಮಂಜೂರಾಗಿದೆ. ಶಾಸಕರ ಅನುದಾನದಲ್ಲಿಯೇ ರಂಗಮಂದಿರ ಕಟ್ಟಿಸಿ ಕೊಡುತ್ತೇವೆ. ಅಲ್ಲದೆ, ಹೆಣ್ಣು ಮಕ್ಕಳಿಗೆ ಶೌಚಾಲಯ ನಿರ್ಮಿಸಿಕೊಡುವುದಾಗಿ ಶಾಸಕರು ಭರವಸೆ ನೀಡಿದರು.

ಪಾಲಿಕೆ ಮಾಜಿ ಸದಸ್ಯ ಶ್ರೀನಿವಾಸ್, ಡಿಡಿಪಿಯು ಎಂ. ಮರಿಸ್ವಾಮಿ, ಕಾಂಗ್ರೆಸ್ ಮುಖಂಡರಾದ ರವಿ, ನಾಗಣ್ಣ, ಮಹೇಶ್, ಅನಿಲ್, ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್ ಮೊದಲಾದವರು ಇದ್ದರು.

Share this article