ಮಾಚಿದೇವರು ಭಕ್ತಿ ಪರಾಕಾಷ್ಠೆಯಲ್ಲಿ ಹಿಮಾಲಯ ಪರ್ವತ: ಜಿಲ್ಲಾಧಿಕಾರಿ ಡಾ.ವೆಂಕಟೇಶ್

KannadaprabhaNewsNetwork | Published : Feb 2, 2024 1:00 AM

ಸಾರಾಂಶ

ಶರಣರಾಗಿದ್ದ ಮಡಿವಾಳ ಮಾಚಿದೇವರು ತನ್ನ ಕುಲದ ಕಾಯಕ ಮಾಡುತ್ತಲೇ, ಸಮಾಜದ ಅನಿಷ್ಟ ಪಿಡುಗುಗಳ ವಿರುದ್ಧ ಹೋರಾಟ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅಂತಹ ಶ್ರೇಷ್ಠ ವ್ಯಕ್ತಿತ್ವದ ಮಾಚಿದೇವರ ಆದರ್ಶದಲ್ಲಿ ಸಾಗುವ ಮೂಲಕ ಬದುಕಿನ ಬಗ್ಗೆ ಅವರು ಹಾಕಿಕೊಟ್ಟ ಮಾರ್ಗದರ್ಶನ, ಬೋಧನೆ ಅನುಸರಿಸಿ, ಮುಂದಿನ ಪೀಳಿಗೆಗೆ ಉತ್ತಮ ವೇದಿಕೆ ನಿರ್ಮಾಣ ಮಾಡಬೇಕಾಗಿದೆ.

ಕನ್ನಡಪ್ರಭ ವಾರ್ತೆ ದಾವಣಗೆರೆ

12 ನೇ ಶತಮಾನದಲ್ಲಿ ಹಲವಾರು ಕ್ರಾಂತಿ ಪುರುಷರ ಜನನವಾಗಿದ್ದು, ಅಂದಿನ ಶೋಷಣೆ, ಅಸ್ಪೃಶ್ಯತೆ, ಅನಕ್ಷರಸ್ಥತೆ, ಜಾತಿಯತೆ ವಿರುದ್ಧ ತಮ್ಮ ವಚನಗಳ ಮೂಲಕ ಹೋರಾಟ ಮಾಡಿದರು. ಅವರಲ್ಲಿ ಕಾಯಕ ನಿಷ್ಠೆ, ಭಕ್ತಿಯ ಪರಾಕಾಷ್ಠೆ ತೋರಿದವರು ಮಡಿವಾಳ ಮಾಚಿದೇವರು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಗುರುವಾರ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಆಶ್ರಯದಲ್ಲಿ ಆಯೋಜಿಸಿದ್ದ ವಚನ ಸಂರಕ್ಷಕ, ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಬಸವಣ್ಣನವರು ಶೋಷಣೆ ವಿರುದ್ಧ ಅದರ ನಿರ್ಮೂಲನೆ ಮಾಡುವ ಸಲುವಾಗಿ ಅನುಭವ ಮಂಟಪ ಕಟ್ಟಿ ಕ್ರಾಂತಿಕಾರಿ ಬದಲಾವಣೆ ಮಾಡಿದರು. ಉತ್ತಮ ಸಮಾಜ ನಿರ್ಮಿಸಿ, ಜಾತಿಯತೆ, ಶೋಷಣೆ ವಿರುದ್ಧ ದನಿ ಎತ್ತಿದರು, ಅದರಲ್ಲಿ ಮಡಿವಾಳ ಮಾಚಿದೇವರು ಒಬ್ಬರು. ಸಿಂದಗಿ ತಾಲೂಕಿನ ದೇವರ ಹಿಪ್ಪರಗಿ ಗ್ರಾಮದಲ್ಲಿ ಜನಿಸಿದ ಮಡಿವಾಳ ಮಾಚಿದೇವರು ಕಾಯಕ ನಿಷ್ಠೆ, ಭಕ್ತಿಯ ಪರಾಕಾಷ್ಠೆಯಲ್ಲಿ ಹಿಮಾಲಯ ಪರ್ವತ ಇದ್ದಂತೆ ಎಂದು ಹೇಳಿದರು.

ಶರಣರಾಗಿದ್ದ ಮಡಿವಾಳ ಮಾಚಿದೇವರು ತನ್ನ ಕುಲದ ಕಾಯಕ ಮಾಡುತ್ತಲೇ, ಸಮಾಜದ ಅನಿಷ್ಟ ಪಿಡುಗುಗಳ ವಿರುದ್ಧ ಹೋರಾಟ ಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರು. ಅಂತಹ ಶ್ರೇಷ್ಠ ವ್ಯಕ್ತಿತ್ವದ ಮಾಚಿದೇವರ ಆದರ್ಶದಲ್ಲಿ ಸಾಗುವ ಮೂಲಕ ಬದುಕಿನ ಬಗ್ಗೆ ಅವರು ಹಾಕಿಕೊಟ್ಟ ಮಾರ್ಗದರ್ಶನ, ಬೋಧನೆ ಅನುಸರಿಸಿ, ಮುಂದಿನ ಪೀಳಿಗೆಗೆ ಉತ್ತಮ ವೇದಿಕೆ ನಿರ್ಮಾಣ ಮಾಡಬೇಕಾಗಿದೆ ಎಂದು ಸಲಹೆ ನೀಡಿದರು.

ದಾವಣಗೆರೆ ಜಿಲ್ಲಾ ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ಎಂ.ನಾಗೇಂದ್ರಪ್ಪ ಮಾತನಾಡಿ, ಶೋಷಿತ ಸಮಾಜದಲ್ಲಿ ಕಟ್ಟಕಡೆಯ ಸಮಾಜ ನಮ್ಮದು. ನಮ್ಮ ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸುವ ಸಲುವಾಗಿ ಅನ್ನಪೂರ್ಣಮ್ಮ ವರದಿ ರಾಜ್ಯ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಸರ್ಕಾರದ ಗಮನಕ್ಕೆ ತರುವಂತೆ ಮನವಿ ಮಾಡಿದರು.

ಈ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಪಂ ಉಪ ಕಾರ್ಯದರ್ಶಿ ಕೃಷ್ಣನಾಯ್ಕ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ ಸುಂಕದ್, ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಓಂಕಾರಪ್ಪ, ಸಹ ಕಾರ್ಯದರ್ಶಿ ಆರ್.ಎನ್.ಧನಂಜಯ, ಉಪಾಧ್ಯಕ್ಷರಾದ ಪಿ.ಮಂಜುನಾಥ್, ವಿಜಯಕುಮಾರ್, ಖಜಾಂಚಿ ಸುರೇಶ ಕೋಗುಂಡೆ, ಪತ್ರಕರ್ತ ಎಂ.ವೈ.ಸತೀಶ್, ಎಂ.ರುದ್ರೇಶ್, ಮಂಜುನಾಥ್ ಕಕ್ಕರಗೊಳ್ಳ, ರವಿ ಚಿಕ್ಕಣ್ಣ, ಡೈಮಂಡ್ ಮಂಜುನಾಥ, ಸುಭಾಷ್, ಬಾತಿ ಶಂಕರ, ನಾಗಮ್ಮ, ದುಗ್ಗಪ್ಪ, ಅಂಜಿನಪ್ಪ ಪೂಜಾರ್, ಗುಡ್ಡಪ್ಪ, ಬೊಮ್ಮಣ್ಣ, ಮಂಜುನಾಥ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ಕಾರ್ಯದರ್ಶಿ ರವಿಚಂದ್ರ ಹಾಗೂ ಇತರರು ಇದ್ದರು.

Share this article