ಕನ್ನಡಪ್ರಭ ವಾರ್ತೆ ದಾವಣಗೆರೆ
ಐ ಲವ್ ಮಹಮ್ಮದ್ ಫಲಕ, ಬ್ಯಾನರ್ ಅಳವಡಿಕೆ ವಿಚಾರಕ್ಕೆ ಇಲ್ಲಿನ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಬುಧವಾರ ತಡರಾತ್ರಿ ಒಂದು ಕೋಮಿನವರ ಮನೆಗಳ ಮೇಲೆ ಮತ್ತೊಂದು ಕೋಮಿನವರು ಕಲ್ಲು ತೂರಾಟ ಮಾಡಿ, ಯುವತಿ, ಮಹಿಳೆಯರೆನ್ನದೇ ಹಲ್ಲೆ ಮಾಡಿದ ಘಟನೆ ನಡೆದಿದೆ.ನಗರದ ಬೇತೂರು ರಸ್ತೆಯ ಕಾರ್ಲ್ ಮಾರ್ಕ್ಸ್ ನಗರದಲ್ಲಿ ಮೂರು ದಿನಗಳ ಹಿಂದೆಯೇ ಐ ಲವ್ ಮಹಮ್ಮದ್ ಬ್ಯಾನರ್ ಹಾಕಿದ್ದರು. ಉದ್ದೇಶಪೂರ್ವಕವಾಗಿ ಹಿಂದೂಗಳ ಮನೆಗಳ ಮುಂದೆಯೇ ಫಲಕ ಹಾಕಲು ಮುಂದಾಗಿದ್ದನ್ನು ಪ್ರಶ್ನಿಸಿ, ಕೆಲವರು ಆಕ್ಷೇಪಿಸಿದ್ದರು. ಇದರಿಂದಾಗಿ ಎರಡು ಕೋಮಿನವರ ಮಧ್ಯೆ ಸಣ್ಣದಾಗಿ ವಾಗ್ವಾದ ನಡೆದಿದ್ದು, ಅದು ಕಳೆದ ರಾತ್ರಿ ಕಲ್ಲು ತೂರಾಟ, ಹಲ್ಲೆಯ ಹಂತಕ್ಕೆ ತಲುಪಿತೆನ್ನಲಾಗಿದೆ.
ಇಡೀ ಕುಟುಂಬಕ್ಕೆ ಹಲ್ಲೆ:ಬುಧವಾರ ರಾತ್ರಿ ಯಮನೂರಪ್ಪ ಎಂಬವರ ಮನೆ ಎದುರು ನಾಮಫಲಕ ಅಳವಡಿಸುವ ಯತ್ನಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಎರಡೂ ಕಡೆಯವರ ಮಧ್ಯೆ ಮತ್ತೆ ತೀವ್ರ ವಾಗ್ವಾದ ನಡೆದಿದೆ. ಆಗ ಗುಂಪಿನಲ್ಲಿದ್ದ ಕಿಡಿಗೇಡಿಗಳು ಯಮನೂರಪ್ಪ, ಗಂಗಮ್ಮ ದಂಪತಿಗೆ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಘಟನೆಯಲ್ಲಿ ಯಮನೂರಪ್ಪ ಮಗಳು ರೇಖಾ, ಅಳಿಯ ಹನುಮಂತು ಮೇಲೂ ಹಲ್ಲೆ ಮಾಡಿದ್ದಾರೆಂದು ದೂರಲಾಗಿದೆ.
ಬ್ಯಾನರ್ ಹರಿಯದಿದ್ದರೂ ಸುಳ್ಳುಸುದ್ದಿ ಹರಡಿದ್ದಾರೆ:ಪೋಲ್ಸ್‌ಗಳಿಂದ ಹೊಡೆದಿದ್ದಾರೆ. ಕಲ್ಲುಗಳನ್ನೂ ತೂರಾಡಿದ್ದಾರೆ. ನಮ್ಮದೊಂದು ಹಿಂದೂ ಮನೆ ಇದ್ದು, 40 ವರ್ಷದಿಂದ ಇದ್ದೇವೆ. ನಾಲ್ಕೈದು ಜನ ಹೆಣ್ಣುಮಕ್ಕಳಿದ್ದೇವೆ. ಆಸ್ಪತ್ರೆಗೆ ಹೋಗುವುದಕ್ಕೂ ಬಿಡುತ್ತಿಲ್ಲ. 600-700 ಜನ ಹೊರಗೆ ಕಾಯುತ್ತಿದ್ದಾರೆ. ಹಿಂದೂಗಳ ಮನೆಗಳನ್ನೇ ಟಾರ್ಗೆಟ್ ಮಾಡಿದ್ದಾರೆ. ಬ್ಯಾನರ್ ಹೇಗಿದೆಯೋ ಹಾಗೆಯೇ ಇದೆ. ಬ್ಯಾನರ್ ಹರಿದಿದ್ದಾರೆಂದು ಸುಳ್ಳು ಸುದ್ದಿ ಹರಡಿದ್ದಾರೆ ಎಂದು ಸಂತ್ರಸ್ಥರ ಕುಟುಂಬದವರು ಹೇಳುತ್ತಾರೆ.
ಆತಂಕದಲ್ಲೇ ಕಾಲ ಕಳೆದ ಜನ:ಕಲ್ಲು ತೂರಾಟದಲ್ಲಿ ಕಸ್ತೂರಮ್ಮ, ಚಿತ್ರವೇಲು, ನಾಗಮ್ಮ ಎಂಬವರ ಮನೆಗಳಿಗೆ ಹಾನಿಯಾಗಿದೆ. ಹಿಂದೂಗಳ ಮನೆಗಳ ಬಾಗಿಲ ಚಿಲಕಗಳೇ ಕಿತ್ತು ಬರುವಂತೆ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಅಪ್ರಾಪ್ತ ಮಕ್ಕಳು, ಹೆಣ್ಣುಮಕ್ಕಳು, ಮಹಿಳೆಯರು, ವೃದ್ಧೆಯರೂ ಎನ್ನದೇ ಹಲ್ಲೆ ಮಾಡಿದ್ದಾರೆ. ಇಡೀ ರಾತ್ರಿ ಸ್ಥಳೀಯ ಹಿಂದೂಗಳು ಪ್ರಾಣ ಕೈಯಲ್ಲೇ ಹಿಡಿದು ರಾತ್ರಿ ಕಳೆಯುವಂತಾಗಿತ್ತು. ಪೊಲೀಸರು ಸ್ಥಳಕ್ಕೆ ದೌಡಾಯಿಸಿ, ಗುಂಪನ್ನು ಚದುರಿಸಿದ ನಂತರ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ಕಳಿಸಲಾಗಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಬಂದು ಪರಿಸ್ಥಿತಿ ತಿಳಿಗೊಳಿಸಿದ ನಂತರವೂ ರಾತ್ರಿ ಕತ್ತಲಲ್ಲಿ ಕಲ್ಲೂ ತೂರಾಟ ನಡೆಸಲಾಗಿದೆ. ವಿವಾದಿದ ನಾಮಫಲಕ ಇದ್ದ ಸ್ಥಳದಲ್ಲಿ ಪೊಲೀಸರು ಇದ್ದ ವೇಳೆ ಪಕ್ಕದ ತಿರುವಿನಲ್ಲಿ ಕಿಡಿಗೇಡಿಗಳ ಗುಂಪು ನುಗ್ಗಿ ಕಲ್ಲು ತೂರಾಟ ಮಾಡಿ, ಬಾಗಿಲು ಹಾಕಿದ್ದ ಮನೆಗಳಿಗೆ ಕಾಲು, ಪೋಲ್ಸ್ ಇತರೆ ವಸ್ತುಗಳಿಂದ ದಾಳಿ ಮಾಡಿದ್ದಾರೆ. ಪೊಲೀಸರು ಇದ್ದರೂ ಕಿಡಿಗೇಡಿಗಳ ಗುಂಪು ಕತ್ತಲಿನಲ್ಲಿ ಕಲ್ಲು ತೂರಾಟ ನಡೆಸಿ, ಪೊಲೀಸರು ಅಲ್ಲಿಗೆ ತೆರಳುತ್ತಿದ್ದಂತೆ ತಲೆಮರೆಸಿಕೊಂಡು ಓಡುತ್ತಿತ್ತು ಎಂದು ಸಂತ್ರಸ್ಥರು ದೂರಿದ್ದಾರೆ.ಹಲ್ಲೆಗೊಳಗಾಗಿದ್ದ ಯಮನೂರಪ್ಪ, ಪುತ್ರಿ ರೇಖಾ ಹಾಗೂ ಅಳಿಯ ಹನುಮಂತಪ್ಪ ಜಿಲ್ಲಾ ಆಸ್ಪತ್ರೆಯಿಂದ ಗುರುವಾರ ಬಿಡುಗಡೆಯಾಗಿದ್ದಾರೆ.ಆಸ್ಪತ್ರೆಗೆ ದೌಡಾಯಿಸಿದ ಹಿಂದೂಗಳು
ಕಾರ್ಲ್ ಮಾರ್ಕ್ಸ್ ನಗರದ ಘಟನೆಯ ಗಾಯಾಳು ಸಂತ್ರಸ್ಥರನ್ನು ಜಿಲ್ಲಾಸ್ಪತ್ರೆಗೆ ಕರೆ ತಂದ ವಿಚಾರ ಗೊತ್ತಾಗಿ ಹಿಂದೂ ಸಂಘಟನೆಗಳು, ಬಿಜೆಪಿ ಮುಖಂಡರು ಆಸ್ಪತ್ರೆ ಬಳಿ ದೌಡಾಯಿಸಿದರು. ಮಾಜಿ ಮೇಯರ್ ಎಸ್.ಟಿ.ವೀರೇಶ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ ಸೇರಿದಂತೆ ಅನೇಕರು ಆತಂಕಕ್ಕೆ ಸಿಲುಕಿದ್ದ ಗಾಯಾಳುಗಳು, ಕುಟುಂಬ ವರ್ಗಕ್ಕೆ ಧೈರ್ಯ ತುಂಬಿದರು.ಎಸ್.ಟಿ.ವೀರೇಶ ಈ ವೇಳೆ ಮಾತನಾಡಿ, ಮತಾಂಧ ಮುಸ್ಲಿಮರು ಉದ್ದೇಶಪೂರ್ವಕವಾಗಿ ಹಿಂದೂಗಳ ಮನೆಗಳು, ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಕಲ್ಲು ತೂರಾಟ, ಹಲ್ಲೆ ಮಾಡಿದ್ದಾರೆ. ಮೂರು ದಿನಗಳ ಹಿಂದೆಯೇ ಫ್ಲೆಕ್ಸ್ ಅಳವಡಿಸಲು ಆಕ್ಷೇಪಿಸಲಾಗಿತ್ತು. ಆದರೆ, ಬುಧವಾರ ರಾತ್ರಿ ಉದ್ದೇಶಪೂರ್ವಕವಾಗಿ ಹಿಂದೂಗಳ ಮನೆಗಳ ಮುಂದೆ ಫ್ಲೆಕ್ಸ್ ಹಾಕಲು ಬಂದಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿ, ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸಚಿವರಿಂದ ಲ್ಯಾಂಡ್ ಜಿಹಾದ್- ಆರೋಪ:ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನರ ಆಡಳಿತ ವೈಫಲ್ಯವೇ ಇದಕ್ಕೆ ನೇರ ಕಾರಣವಾಗಿದೆ. ಇಡೀ ಕಾರ್ಲ್ ಮಾರ್ಕ್ಸ್ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ತಾವಷ್ಟೇ ಇರಬೇಕೆಂಬ ಕಾರಣಕ್ಕೆ ಲ್ಯಾಂಡ್ ಜಿಹಾದ್ ಮಾಡುತ್ತಿದ್ದಾರೆ. ಕಡಿಮೆ ದರಕ್ಕೆ ಹಿಂದೂಗಳ ಮನೆಗಳು, ನಿವೇಶನಗಳನ್ನು ತಮಗೆ ಮಾರಾಟ ಮಾಡಬೇಕೆಂಬುದೇ ಈ ಕೃತ್ಯದ ಹಿಂದಿನ ಸತ್ಯ. ಫ್ಲೆಕ್ಸ್ ಹರಿದಿದ್ದಾರೆಂದು ಕೆಲವರು ಸುಳ್ಳು ಹಬ್ಬಿಸಿದ್ದು, ಬೇಕಂತಲೇ ಗಲಾಟೆ ಮಾಡಲೆಂದೇ ಅಲ್ಲಿಗೆ ಬಂದಿದ್ದಾರೆ ಎಂದು ವೀರೇಶ ದೂರಿದರು.
ಹಿಂದೂಗಳ ಮನೆಗಳಷ್ಟೇ ಅಲ್ಲ, ಮುಸ್ಲಿಮರ ಮನೆಗಳ ಮೇಲೂ ಕಲ್ಲು ತೂರಾಟ ಮಾಡಿದ್ದಾರೆ. ಪೊಲೀಸರ ಎದುರಿನಲ್ಲೇ ಕಲ್ಲು ತೂರಾಟ ಮಾಡಲಾಗಿದೆ. ಬಂಟಿಂಗ್ಸ್ ಕಿತ್ತೆಸೆಯಲಾಗಿದೆ. ತನ್ನ ಎದುರಿನಲ್ಲೇ ತನ್ನ ಅಕ್ಕನ ಜಡೆ ಹಿಡಿದು, ಬಡಿದರೆ ಯಾವ ಸಹೋದರ ಸುಮ್ಮನಿರುತ್ತಾನೆ, ಸಹಿಸಿಕೊಳ್ಳುತ್ತಾನೆ? ಅಧಿಕಾರಸ್ಥರ ಮನೆಗಳಿಗೆ ನುಗ್ಗಿ ಇದೇ ರೀತಿ ಯಾರಾದರೂ ಮಾಡಿದ್ದರೆ ಸುಮ್ಮನಿರುತ್ತಿದ್ದರಾ? ಇನ್ನಾದರೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಜಿಲ್ಲಾ ಆಡಳಿತ, ಜಿಲ್ಲಾ ಪೊಲೀಸ್ ಇಲಾಖೆ ನ್ಯಾಯಯುತವಾಗಿ ನಡೆದುಕೊಳ್ಳಲಿ. ಹಿಂದೂಗಳ ಮೇಲೆ ದೌರ್ಜನ್ಯ ಎಸಗಿ, ಹಿಂದೂ ಮಕ್ಕಳು, ಮಹಿಳೆಯರು, ವಯೋವೃದ್ಧರೆನ್ನದೇ ಹಲ್ಲೆ ಮಾಡಿದ ಮತಾಂಧ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳಿ ಎಂದು ತಾಕೀತು ಮಾಡಿದರು.