ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು
ಬಸವನಹಳ್ಳಿ ಮುಖ್ಯರಸ್ತೆಯ ಓಂಕಾರೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ಮೂರ್ತಿಯನ್ನು ಮಧ್ಯಾಹ್ನ ಅಲಂಕೃತ ಪ್ರಭಾವಳಿಯಲ್ಲಿ ಕೂರಿಸಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ಆರಂಭಿಸಲಾಯಿತು. ಕೀಲುಕುದುರೆ, ನಾಸಿಕ್ ಡೋಲ್, ಮಹಿಳೆಯರು ಹಾಗೂ ಪುರುಷರು ಡಿಜೆಗಳೊಂದಿಗೆ ಮೆರವಣಿಗೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಸಾವಿರಾರು ಸಂಖ್ಯೆಯ ಯುವಕ, ಯುವತಿಯರು ಕೇಸರಿ ಧ್ವಜಗಳನ್ನು ಬೀಸುತ್ತಾ, ತಲೆಗೆ ರುಮಾಲು ಧರಿಸಿಕೊಂಡು ಉತ್ಸಾಹದಿಂದ ಗಣನಾಯಕನಿಗೆ ಬೀಳ್ಕೊಟ್ಟರು.
ಜಗಮಗಿಸುವ ಬೆಳಕಿನ ನಡುವೆ ಕಿವಿಗಡಗಿಚ್ಚುವ ಡಿಜೆ ಸದ್ದಿಗೆ ಒಂದೇ ಸಮನೆ ಸಾವಿರು ಜನರು ಹೆಜ್ಜೆ ಹಾಕಿ ಒಗ್ಗಟ್ಟು ಪ್ರದರ್ಶಿಸಿದರು. ದಾರಿ ಮಧ್ಯೆ ಅಲ್ಲಲ್ಲಿ ಪಟಾಕಿಗಳನ್ನು ಸಿಡಿಸಿ ಮೆವಣಿಗೆಗೆ ಸಾಂಪ್ರದಾಯಿಕ ಮೆರಗು ನೀಡಲಾಯಿತು. ಗಣಪತಿ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಹಲವು ಮಂದಿ ಸಾರ್ವಜನಿಕರು ಸಾಂಪ್ರದಾಯಿಕ ಧಿರಿಸು ಧರಿಸಿ ಭಾಗವಹಿಸುವ ಮೂಲಕ ಭಕ್ತಿ ಭಾವ ಮೂಡಿಸಿದರು.ಗಣನಾಯಕನ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಆಲ್ಲಿನ ನಿವಾಸಿಗಳು ಗಣಪನಿಗೆ ಹಣ್ಣು, ಕಾಯಿ ಪೂಜೆ ಮಾಡಿಸಿದರು. ಇನ್ನೂ ಕೆಲವರು ಈಡುಗಾಯಿ ಒಡೆದು ಭಕ್ತಿ ಸಮರ್ಪಿಸಿದರು. ಮಲ್ಲಂದೂರು ರಸ್ತೆ, ವಿಜಯಪುರ ಮುಖ್ಯ ರಸ್ತೆ, ಒಕ್ಕಲಿಗರ ಕಲ್ಯಾಣ ಮಂಟಪ ರಸ್ತೆ, ಆರ್‌ಜಿ ರಸ್ತೆ, ಬಸವನಹಳ್ಳಿ ಶಾಲೆ ರಸ್ತೆ ಮೂಲಕ ಹನುಮಂತಪ್ಪ ವೃತ್ತಕ್ಕೆ ಆಗಮಿಸಿದ ಮೆರವಣಿಗೆ ಕೋಟೆ ಕೆರೆ ತಲುಪಿತು.
ಬಿಗಿ ಪೊಲೀಸ್ ಬಂದೋಬಸ್ತ್
ಬುಧವಾರ ಬೆಳಗ್ಗಿನಿಂದಲೂ ನಗರದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ವಿಜಯಪುರ, ಹನುಮಂತಪ್ಪ ವೃತ್ತ, ಅಂಡ ಛತ್ರ ಭಾಗದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು. ಗಣಪತಿ ಮೆರವಣಿಗೆ ಹನುಮಂತಪ್ಪ ವೃತ್ತದ ಬಳಿಗೆ ಆಗಮಸುತ್ತಿದ್ದಂತೆ ಭಕ್ತರ ಸಂಖ್ಯೆಯೂ ಹೆಚ್ಚಿತ್ತಲ್ಲದೆ ಡಿಜೆ ಸದ್ದಿಗೆ ಎಲ್ಲರೂ ಹೆಜ್ಜೆ ಹಾಕಲಾರಂಭಿಸಿದ್ದರಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಯಿತು. ಪೊಲೀಸರೂ ಮಫ್ತಿಯಲ್ಲಿ ಮೆರವಣಿಗೆಯಲ್ಲಿ ಭಾಗಿಯಾಗಿ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಣ್ಗಾವಲಿಟ್ಟಿದ್ದಲ್ಲದೆ, ಮೆರವಣಿಗೆ ಸಾಂಗವಾಗಿ ಸಾಗಲು ಅವಕಾಶ ಮಾಡಿಕೊಟ್ಟರು.