ಹಿಂದೂ ಮಂದಿರಗಳು ಸೇವಾಕಾರ್ಯದಲ್ಲಿ ಅಗ್ರಗಣ್ಯ

KannadaprabhaNewsNetwork | Published : Jan 8, 2024 1:45 AM

ಸಾರಾಂಶ

ಜಗತ್ತಿನ ಇತರೆ ಧರ್ಮಗಳ ಧಾರ್ಮಿಕ ಮಂದಿರಗಳಿಂದ ಹಿಂದೂ ಸಮಾಜದ ಎಲ್ಲಾ ಮಂದಿರಗಳು ಸೇವಾ ಕಾರ್ಯದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿವೆ. ಹಿಂದೂ ಸಮಾಜದ ಸ್ವಾಸ್ಥ್ಯ ಚಿಂತನೆ ವೇಗವಾಗಿ ವಿಜೃಂಭಿಸಬೇಕಿದೆ. ಎಲ್ಲಾ ಧರ್ಮ, ಜಾತಿ, ಜನಾಂಗಗಳ ಒಟ್ಟಿಗೆ ಕೊಂಡೊಯ್ಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ಭಾರತವನ್ನು ವಿಶ್ವ ಗುರುವಾಗಿಸಲು ಹೊರಟಿದ್ದಾರೆ.

ವಾಸವಿ ದೇವಾಲಯಗಳ ಪ್ರಥಮ ಮಹಾಧಿವೇಶನದಲ್ಲಿ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅಭಿಮತ । ಹಿಂದೂ ಧರ್ಮ ಅಳಿಸಲು ಸಾಧ್ಯವಿಲ್ಲ

ಕನ್ನಡಪ್ರಭ ವಾರ್ತೆ ದಾವಣಗೆರೆ

ರೋಮನ್ನರು, ಗ್ರೀಕರು, ಬ್ರಿಟಿಷರಷ್ಟೇ ಅಲ್ಲ ಪರಕೀಯರು ನಿರಂತರ ದಾಳಿ ಮಾಡಿ, ನಮ್ಮ ಆಧ್ಯಾತ್ಮಿಕ ಚಿಂತನೆಗಳ ಮೇಲೆ ಮೇಲಿಂದ ಮೇಲೆ ಹೊಡೆತಕೊಟ್ಟರೂ ಹಿಂದೂ ಧರ್ಮ ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಮತ್ತೆ ಅಂತಹ ಗತವೈಭವಕ್ಕೆ ಭಾರತವು ಮರಳಲಿದೆ ಎಂದು ವಾಗ್ಮಿ, ಲೇಖಕ, ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಗರದ ಗುಂಡಿ ಮಹದೇವಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಕರ್ನಾಟಕ ಆರ್ಯವೈಶ್ಯ ಮಹಾಸಭಾ, ರಾಜ್ಯ ವಾಸವಿ ದೇವಾಲಯಗಳ ಒಕ್ಕೂಟದಿಂದ ಹಮ್ಮಿಕೊಂಡಿದ್ದ ವಾಸವಿ ದೇವಾಲಯಗಳ ಪ್ರಥಮ ಮಹಾಧಿವೇಶನ ಉದ್ಘಾಟಿಸಿ ಮಾತನಾಡಿ ವಿಶ್ವಾದ್ಯಂತ ಈಗ ಭಾರತದ ಕಾಲವಾಗಿದೆ. ಜಗತ್ತಿನ ಇತರೆ ಧರ್ಮಗಳ ಧಾರ್ಮಿಕ ಮಂದಿರಗಳಿಂದ ಹಿಂದೂ ಸಮಾಜದ ಎಲ್ಲಾ ಮಂದಿರಗಳು ಸೇವಾ ಕಾರ್ಯದಲ್ಲಿ ಅಗ್ರಗಣ್ಯ ಸ್ಥಾನ ಹೊಂದಿವೆ. ಹಿಂದೂ ಸಮಾಜದ ಸ್ವಾಸ್ಥ್ಯ ಚಿಂತನೆ ವೇಗವಾಗಿ ವಿಜೃಂಭಿಸಬೇಕಿದೆ. ಎಲ್ಲಾ ಧರ್ಮ, ಜಾತಿ, ಜನಾಂಗಗಳ ಒಟ್ಟಿಗೆ ಕೊಂಡೊಯ್ಯುವ ಮೂಲಕ ಪ್ರಧಾನಿ ನರೇಂದ್ರ ಮೋದಿ ವಿಶ್ವಕ್ಕೆ ಭಾರತವನ್ನು ವಿಶ್ವ ಗುರುವಾಗಿಸಲು ಹೊರಟಿದ್ದಾರೆ. ಈ ನಿಟ್ಟಿನಲ್ಲಿ ನಾವೆಲ್ಲ ಕೈಜೋಡಿಸಬೇಕು ಎಂದು ಸೂಲಿಬೆಲೆ ಹೇಳಿದರು.

ಆರ್ಯವೈಶ್ಯ ಮಹಾಸಭಾ ರಾಜ್ಯಾಧ್ಯಕ್ಷ ಆರ್‌.ಪಿ.ರವಿಶಂಕರ ಮಾತನಾಡಿ, ಶಾಂತಿ, ತಾಳ್ಮೆ, ಸಹಾಯ ಸಮಾಜದ ಮುಖ್ಯ ಆದರ್ಶ, ಗುರಿಗಳಾಗಿವೆ. ಶಾಂತಿ, ತಾಳ್ಮೆಯಿಂದ ಎಲ್ಲರನ್ನೂ ಆರ್ಯವೈಶ್ಯ ಸಮಾಜದ ಜೊತೆಗೆ ಇತರೆ ಸಮುದಾಯಗಳ ನಮ್ಮೊಂದಿಗೆ ಕೊಂಡೊಯ್ಯಬೇಕಿದೆ. ಜಗತ್ತಿನ ಯಾವುದೇ ಧಾರ್ಮಿಕ ಕೇಂದ್ರಗಳು ಮಾಡದ ಕೆಲಸಗಳನ್ನು ನಾವು ಮಾಡಿದರೆ ಮಾತ್ರ ದೇಶವು ಅತ್ಯಂತ ಉನ್ನತ ಸ್ಥಾನಕ್ಕೆ ತಲುಪಲಿದೆ ಎಂದರು.

ದೇವಾಲಯಗಳು ಕೇವಲ ದೇವಾಲಯಗಳು ಮಾತ್ರವಾಗಿರದೇ, ಸಾರ್ವತ್ರಿಕ ದೇವಾಲಯಗಳಾಗಬೇಕು. ಈ ನಿಟ್ಟಿನಲ್ಲಿ ಸಮಾಜದಿಂದ ಶ್ರೀ ವಾಸವಿ ದೇವಾಲಯಗಳ ಪ್ರಥಮ ಮಹಾಧಿವೇಶನ ನಾಡಿನ ಕೇಂದ್ರ ಬಿಂದುವಾದ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದು, ಸಮಾರಂಭಕ್ಕೆ ಪ್ರತಿಯೊಬ್ಬರ ಪರಿಶ್ರಮ, ಕೊಡುಗೆಯು ಸ್ಮರಣೀಯ ಎಂದು ತಿಳಿಸಿದರು.

ಪ್ರಥಮ ಮಹಾಧಿವೇಶನದಲ್ಲಿ ದೇವಾಲಯಗಳು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರೋಪಾಯಗಳು ವಿಷಯವಾಗಿ ದೇವಾಲಯ ಸಂವರ್ಧನಾ ಸಮಿತಿ ಪ್ರಚಾರಕ ಮನೋಹರ ಮಠದ್‌, ನಿತ್ಯಪೂಜಾ ವಿಧಿಗಳು, ಹೋಮ, ಯಾಗಗಳು, ಅದರ ಪರಿಣಾಮಗಳ ಬಗ್ಗೆ ವಿದ್ವಾಂಸ, ವೇದಪಂಡಿತ ಹಿರೇಮಗಳೂರು ಕಣ್ಣನ್ ಮಾತನಾಡಿದರು.

ವೇದಿಕೆಯಲ್ಲಿ ಒಕ್ಕೂಟದ ಅಧ್ಯಕ್ಷ ಆರ್.ಎಲ್.ಪ್ರಭಾಕರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವ್ಯಂಗ್ಯ ಚಿತ್ರಕಾರ ಎಚ್‌.ಬಿ.ಮಂಜುನಾಥ, ದೇವಾಲಯ ಸಂವರ್ಧನಾ ಸಮಿತಿ ಪ್ರಚಾರಕ ಮನೋಹರ ಮಠದ್‌, ಆರ್.ಜೆ.ನಾಗೇಂದ್ರ ಪ್ರಸಾದ, ಕಾಸಲ್ ಸತೀಶ, ಜೆ.ರವೀಂದ್ರ ಗುಪ್ತ, ಎ.ಸತ್ಯನಾರಾಯಣ ಸ್ವಾಮಿ ,ಶ್ರೀನಿವಾಸ ಮೂರ್ತಿ, ಸುನೀಲ್, ನಾಗೇಂದ್ರ ಕುಮಾರ್, ಮಾಕಂ ನಾಗರಾಜ್ ಗುಪ್ತ ಸೇರಿ ವಿವಿಧ ದೇವಸ್ಥಾನಗಳ ಪದಾಧಿಕಾರಿಗಳಿದ್ದರು. ದೇವಾಲಯಗಳು ಸೇವಾಲಯವೂ ಆಗಿವೆ

ಕೊರೋನಾ ಮಹಾಮಾರಿ ವಿಶ್ವವನ್ನೇ ಕಾಡಿದಾಗ ಹಿಂದೂ ಸಮಾಜದ ಪ್ರತಿಯೊಂದು ದೇವಾಲಯಗಳು ಜಗತ್ತಿನ ಪ್ರತಿಯೊಬ್ಬ ವ್ಯಕ್ತಿಗೂ ಅನ್ನ ಕೊಡುವ ಶಕ್ತಿ ಹೊಂದಿದ್ದವು. ಅಂತಹ ಶಕ್ತಿ ಕೇಂದ್ರಗಳಾಗಿ ನಮ್ಮ ಧಾರ್ಮಿಕ ಕೇಂದ್ರಗಳು ಹೊರ ಹೊಮ್ಮಿವೆ. ಹಿಂದೂ ದೇವಾಲಯಗಳು, ದೇವಾಲಯಗಳಷ್ಟೇ ಆಗಿರದೇ, ಸೇವಾಲಯಗಳೂ ಆಗಿವೆ.

ಚಕ್ರವರ್ತಿ ಸೂಲಿಬೆಲೆ, ವಾಗ್ಮಿ, ಲೇಖಕ
ದೇವಾಲಯಗಳ ನಿರ್ವಹಣೆಗೆ ಕೇಂದ್ರದಿಂದ ಹೊಸ ಕಾಯ್ದೆ

ವಿಧಾನಪರಿಷತ್‌ ಸದಸ್ಯ ಡಿ.ಎಸ್.ಅರುಣ್‌ ಹೇಳಿಕೆ

ದೇವಾಲಯಗಳ ನಿರ್ವಹಣೆಗಾಗಿ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಹೊಸ ಕಾಯ್ದೆ ಬರಲಿದೆ. ಈಗ ಮುಜರಾಯಿ ಇಲಾಖೆಯಲ್ಲಿರುವ ನಿರ್ವಹಣೆ ಇಲ್ಲದ ದೇವಾಲಯಗಳ ಉನ್ನತ ಸ್ಥಾನದಲ್ಲಿರುವ ಸಂಸ್ಥೆಗಳಿಗೆ ನೀಡಿ, ಅವುಗಳನ್ನು ನಿರ್ವಹಣೆ ಮಾಡುವಂತಹ ಮಹತ್ವದ ಕಾಯ್ದೆ ಜಾರಿಗೊಳ್ಳಲಿದೆ ಎಂದು ವಿಧಾನಪರಿಷತ್‌ ಸದಸ್ಯ ಡಿ.ಎಸ್.ಅರುಣ್‌ ತಿಳಿಸಿದರು.

ಬಿಜೆಪಿ ಹೇಳಿದ್ದಂತೆ 370 ಕಾಯ್ದೆ ಹಾಗೂ ಶ್ರೀರಾಮ ಮಂದಿರ ನಿರ್ಮಾಣ ಮಾಡಿದೆ. ಹತ್ತು ವರ್ಷದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಎಲ್ಲವನ್ನೂ ಮಾಡಿ ತೋರಿಸುತ್ತಿದೆ. ಆದರೂ, ಎಡ ಮತ್ತು ಬಲ ಪಕ್ಷಗಳು ನಾವು ಕೆಲಸ ಮಾಡಿದ್ದನ್ನೂ ದಾಳವಾಗಿ ಮಾಡಿಕೊಳ್ಳುತ್ತಿವೆ. ಬಿಜೆಪಿ ಹೇಳಿದ್ದನ್ನು ಮಾಡಿದರೂ, ಸಹಿಸಿಕೊಳ್ಳುವ ವ್ಯವದಾನ ಇಲ್ಲ ಎಂದು ಹೇಳಿದರು. ಹಿಂದೂ ಧರ್ಮವೆಂದರೆ ಕೇವಲ ಹಿಂದೂ ದೇವರುಗಳಷ್ಟೇ ಮಾತ್ರವಲ್ಲ. ಅಲ್ಲಾ, ಯೇಸುವನ್ನು ಸಹ ಪೂಜಿಸಬಹುದು. ಮುಕ್ಕೋಟಿ ದೇವರ ಜೊತೆಯಲ್ಲಿ ಈ ಇಬ್ಬರು ದೇವರು ನಮಗೆ ಕಡಿಮೆಯಾಗುತ್ತಾರಾ? ವಸುದೈವ ಕುಟುಂಬಕಂ ಎನ್ನುವ ನಮ್ಮ ಮಾತಿನಂತೆ ಎಲ್ಲರೂ ನಮ್ಮ ಜೊತೆಗೆ ಬರಲಿ ಎಂದು ಕರೆ ನೀಡಿದರು.

Share this article