ಕ್ರಿಮಿನಲ್ ಹಿನ್ನೆಲೆ ಇರುವವರು ಹೇಗೆ ಬಸವತತ್ವ ಪಾಲಕರಾಗಿರುತ್ತಾರೆ?

KannadaprabhaNewsNetwork |  
Published : May 23, 2024, 01:00 AM IST
ಪ್ರಿಯಾಂಕ್‌ ಖರ್ಗೆ | Kannada Prabha

ಸಾರಾಂಶ

ಹಿಂದೂ ಧರ್ಮ ಹಾಗೂ ಬಸವ ತತ್ವಗಳು ತಲಾತಲಾಂತರದಿಂದ ಸಮಾಜಕ್ಕೆ ದಾರಿದೀಪವಾಗಿವಾಗಿವೆ ಹಾಗೂ ಇನ್ನೂ ಹಾಗೆಯೇ ಮುಂದುವರೆಯುತ್ತವೆ. ಹಾಗಾಗಿ, ಬಸವ ತತ್ವಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಬಿಜೆಪಿ ಹಾಗೂ ಶ್ರೀರಾಮ ಸೇನೆಯಂತ ಕ್ರಿಮಿನಲ್ ಸಂಘಟನೆಯ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕ್ರಿಮಿನಲ್ ಹಿನ್ನೆಲೆ ಇರುವವರು ಹೇಗೆ ಬಸವ ತತ್ವಪಾಲಕರಾಗುತ್ತಾರೆ? ಹಿಂದೂ ಧರ್ಮ ಹಾಗೂ ಬಸವ ತತ್ವಗಳು ತಲಾತಲಾಂತರದಿಂದ ಸಮಾಜಕ್ಕೆ ದಾರಿದೀಪವಾಗಿವಾಗಿವೆ ಹಾಗೂ ಇನ್ನೂ ಹಾಗೆಯೇ ಮುಂದುವರೆಯುತ್ತವೆ. ಹಾಗಾಗಿ, ಬಸವ ತತ್ವಕ್ಕೆ ಹಾಗೂ ಹಿಂದೂ ಧರ್ಮಕ್ಕೆ ಬಿಜೆಪಿ ಹಾಗೂ ಶ್ರೀರಾಮ ಸೇನೆಯಂತ ಕ್ರಿಮಿನಲ್ ಸಂಘಟನೆಯ ಅವಶ್ಯಕತೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ‌ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಬಸವ ತತ್ವದ ಎಳ್ಳಷ್ಟೂ ಲವಲೇಶವೂ ಗೊತ್ತಿರದ ಕ್ರಿಮಿನಲ್ ಹಿನ್ನೆಲೆಯ ವ್ಯಕ್ತಿಯನ್ನು‌ ನೀವು ಮಹಾನ್ ವ್ಯಕ್ತಿಯಂತೆ ಬಿಂಬಿಸ ಹೊರಟಿರುವುದು ನಿಜಕ್ಕೂ ನೀವು ಬಸವಣ್ಣನವರಿಗೆ ಮಾಡುತ್ತಿರುವ ಅವಮಾನವಷ್ಟೇ. ಅಲ್ಲದೇ ಬಸವ ತತ್ವಕ್ಕೆ ಎಸಗುತ್ತಿರುವ ಅಪಚಾರವಾಗಿದೆ. ಇದನ್ನು ಯಾವ ಬಸವಾಭಿಮಾನಿಯು ಒಪ್ಪಲಾರರು ಎಂದರು.

ಸಾರ್ವಜನಿಕ ನೆಮ್ಮದಿಗೆ ಭಂಗ ತರುವ ಭಾಷಣ ಮಾಡುವ ಮೂಲಕ ಜನರಲ್ಲಿ ಕೋಮು ಭಾವನೆ ಕೆರಳಿಸಿರುವುದು ಸೇರಿದಂತೆ ಹಲವಾರು ಪ್ರಕರಣಗಳಲ್ಲಿ 40 ಕೇಸುಗಳನ್ನು ಹಾಕಿಸಿಕೊಂಡಿರುವ ವ್ಯಕ್ತಿಗೆ ಕಲಬುರಗಿ ಜಿಲ್ಲೆಯ ಜನಪ್ರತಿನಿಧಿಯಾಗಿರುವ ನೀವು ಶ್ರೀರಾಮಸೇನೆಯ ಸಂಘಟನೆಯ ವಕ್ತಾರನಂತೆ ವರ್ತಿಸುತ್ತಿರುವುದು ಜಿಲ್ಲೆಯ ಮತದಾರರಿಗೆ ಮಾಡಿದ ಅವಮಾನವಾಗಿದೆ. ನಿಮ್ಮ ಸ್ವಯಂ ಘೋಷಿತ ಸ್ವಾಮೀಜಿಯ ಮೇಲೆ ಈ ಹಿಂದೆ ಅಧಿಕಾರದಲ್ಲಿ ಇದ್ದ ಸರ್ಕಾರಗಳು ಕೇಸು ದಾಖಲಿಸಿವೆ. ಅವರು ಕಾನೂನಿಗೆ ಗೌರವ ಕೊಡುವಂತ ವ್ಯಕ್ತಿಯಾಗಿದ್ದರೆ ನಿಮ್ಮ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಕೇಸ್‌ಗಳನ್ನು ವಾಪಸ್ ತೆಗೆದುಕೊಳ್ಳಲಿಲ್ಲ‌? ಎಂದು ತಿರುಗೇಟು ನೀಡಿದರು.

ಮಕ್ಕಳ ಹಾಲಿನಪುಡಿ ಹಾಗೂ ಪಡಿತರ ಚೀಟಿಯ ಫಲಾನುಭವಿಗಳ ಅಕ್ಕಿ ಕಳ್ಳತನ ಮಾಡಿ‌ ಶಿಕ್ಷೆಗೆ ಒಳಗಾಗಿ ಹಾಗೂ ಕಾನೂನುಬಾಹಿರ ಚಟುಚಟಿಕೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಗಡಿಪಾರು ಆಗಿದ್ದ ವ್ಯಕ್ತಿಗೆ ಚಿತ್ತಾಪುರದಿಂದ ವಿಧಾನಸಭೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್‌ ಕೊಡಿಸಿ ನೀವು ಒಬ್ಬ ಜವಾಬ್ದಾರಿಯುವ ಜನಪ್ರತಿನಿಧಿಯಾಗಲು ಅರ್ಹರಲ್ಲ ಎಂದು ತೋರಿಸಿಕೊಟ್ಟಿದ್ದೀರಿ ಎಂದು ಸಚಿವರು ಟಾಂಗ್ ಕೊಟ್ಟರು.

ಹಲವಾರು ಕಾನೂನುಬಾಹಿರ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿಗಳ ಪೋಷಣೆ ಮಾಡಿ ಅವರಿಗೆ ದತ್ತು ಪಡೆದಿರುವ ನೀವು ಕಲಬುರಗಿ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ ಎಂದು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ನಿಮ್ಮ ಸರ್ಕಾರದ ಅವಧಿಯಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಹಾಗೂ ಜೂಜಾಟಗಳು ಎಗ್ಗಿಲ್ಲದೆ ನಡೆದಿದ್ದವು. ಆಗ, ಮಹಾರಾಷ್ಟ್ರ ರಾಜ್ಯದ ಪೊಲೀಸರು ಬಂದು ಬೆಟ್ಟಿಂಗ್ ದಂಧೆಯಲ್ಲಿ ಹಾಗೂ ಜೂಜಾಟದಲ್ಲಿ ತೊಡಗಿದವರನ್ನು ಬಂಧಿಸಿದ್ದರು. ಜೊತೆಗೆ ಕಲಬುರಗಿ ಜಿಲ್ಲೆಯಲ್ಲಿ ಅಕ್ರಮ ರಿಕ್ರಿಯೆಷನ್ ಕ್ಲಬ್‌ಗಳು ನಿಮ್ಮ ಆಶೀರ್ವಾದದಿಂದ ತಲೆ ಎತ್ತಿದ್ದು ಮರೆತುಬಿಟ್ಟಿದ್ದೀರಾ? ನಿಮ್ಮ ಚಿಂಚೋಳಿ ತಾಲೂಕಿನಿಂದಲೇ ರಾಜ್ಯದ ಅತಿದೊಡ್ಡ ಅಕ್ರಮ ಗಾಂಜಾ ಮಾರಾಟ ಪ್ರಕರಣ ನಡೆದು ಬೇರೆ ರಾಜ್ಯದಿಂದ ಪೊಲೀಸರು ಬಂದು ಅಕ್ರಮ ಮಾರಾಟಗಾರರನ್ನು ಬಂಧಿಸಿದ್ದು ಸುಳ್ಳಾ? ಎಂದು ಖರ್ಗೆ ಪ್ರಶ್ನಿಸಿದರು.

ಸಂಸದರಾಗಿ ನೀವು ಜನಪರ ಕೆಲಸ ಮಾಡುವಲ್ಲಿ ಸಂಪೂರ್ಣ ವಿಫಲರಾಗಿದ್ದೀರಿ. ಕೇಂದ್ರದ ಹಲವಾರು ಯೋಜನೆಗಳು ವಾಪಸ್ ಹೋದ ಸಂದರ್ಭದಲ್ಲಿ, ಸಾವಿರಾರು ಯುವಕರ ಭವಿಷ್ಯಕ್ಕೆ ಮುಳ್ಳಾಗುವಂತ ಪಿಎಸ್‌ಐ ಹಗರಣ ನಡೆದಾಗ, ಕೇಂದ್ರದಿಂದ ರಾಜ್ಯಕ್ಕೆ ನಿರಂತರ ಅನ್ಯಾಯವಾದಾಗ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡಿದ್ದೀರಿ ಎಂದು ಟೀಕಿಸಿದರು.

ರೈತರ ಪರ ನಿಮ್ಮ ನಿಲುವು ಗೊತ್ತಿದೆ:

ಜಿಲ್ಲೆಯಲ್ಲಿ ಬರಗಾಲದಿಂದ ಜನರು ತತ್ತರಿಸಿ ಹೋಗಿದ್ದಾಗ ಕೇಂದ್ರದಿಂದ ಪರಿಹಾರ ಕೊಡಿಸಲು‌ ಕಿಂಚತ್ತೂ ಪ್ರಯತ್ನಪಡದ ನೀವು ರೈತರ ಪರ ನಿಮ್ಮ ನಿಲುವು ಏನೆಂದು ತೋರಿಸಿಕೊಟ್ಟಿದ್ದೀರಿ. ಈಗ ಜಿಲ್ಲೆಯಲ್ಲಿ ಯಾವುದೇ ದುರ್ಘಟನೆ ನಡೆದರೂ ಕೂಡಾ ಕ್ರಿಮಿನಲ್‌ಗಳನ್ನು ಮುಂದಿಟ್ಟುಕೊಂಡು ನಿಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುರುದು ಸ್ಪಷ್ಟವಾಗುತ್ತಿದೆ. ಕಲಬುರಗಿ ಜಿಲ್ಲೆಯ ಶಾಂತಿಗೆ ಭಂಗ ತಂದು ಕೋಮುಭಾವನೆ ಕೆರಳಿಸುವಂತ ಯಾವುದೇ ವ್ಯಕ್ತಿಯಾಗಲೀ, ಸ್ವಯಂ ಘೋಷಿತ ಸ್ವಾಮಿಯಾಗಲೀ ಅಥವಾ ಯಾವುದೇ ಸಂಘಟನೆಯಾಗಲಿ ಅಂತವರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಜೊತೆಗೆ, ಜಿಲ್ಲೆಯಲ್ಲಿರುವ ರೌಡಿಗಳ ಶೀಟರ್‌ಗಳ ಹಾಗೂ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜಕ್ಕೆ ಕಂಟಕವಾಗಿರುವವರ ನಿಗ್ರಹಕ್ಕೆ ಕಾನೂನು‌ ಹಾಗೂ ಗೃಹ ಇಲಾಖೆಗಳ ಅಧಿಕಾರಿಗಳ ವಿಶೇಷ ತಂಡ ರಚನೆ ಮಾಡುವುದು ಅಲ್ಲದೇ ಅಂತವರ ವಿರುದ್ಧ ಕ್ರಿಮಿನಲ್ ಪ್ರಕರಣದ ಹಿನ್ನೆಲೆ, ಬಾಕಿ ವಿಚಾರಣೆ ಹಾಗ ತನಿಖೆಯ ಕುರಿತಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಪರಿಶೀಲನೆ ಸಭೆ ನಡೆಸಲಾಗುವುದು ಎಂದು ಪ್ರಿಯಾಂಕ್ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''