ಹುಬ್ಬಳ್ಳಿ: ಹಿಂದೂ ಧರ್ಮ ಎನ್ನುವುದು ಜೀವನದ ಒಂದು ಭಾಗ. ಇಲ್ಲಿ ಹಲವು ದೇವರು, ಸಂಸ್ಕೃತಿ ಹೊಂದಿದ್ದು, ಎಲ್ಲರನ್ನೂ ಒಳಗೊಳ್ಳುವ ಸಮಾಜವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದ ಎಸ್‌ಎಸ್‌ಕೆ ಪಂಚ ಟ್ರಸ್ಟ್ ಕಮಿಟಿ ನೇತೃತ್ವದಲ್ಲಿ ದಾಜಿಬಾನ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಮೇ 9ರ ವರೆಗೆ ಹಮ್ಮಿಕೊಂಡಿರುವ ದುರ್ಗಾದೇವಿ ಸಹಸ್ರ ಚಂಡಿಕಾ ಯಾಗ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಋಷಿ ಮುನಿಗಳ ಕಾಲದಿಂದಲೂ ಆರಂಭವಾಗಿರುವ ಯಜ್ಞ- ಯಾಗಾದಿಗಳು, ಹೋಮ- ಹವನಗಳು ಹಿಂದೂ ಧರ್ಮದ ವೈಶಿಷ್ಟ್ಯಗಳಾಗಿವೆ. ಪ್ರಸ್ತುತ ದಿನಗಳಲ್ಲಿ ಇಂಥ ಧಾರ್ಮಿಕ ಕಾರ್ಯಕ್ರಮ ಹೆಚ್ಚು ಪ್ರಸ್ತುತವಾಗಿವೆ. ಹಿಂದೂ ಧರ್ಮ, ಸಂಸ್ಕೃತಿ ಉಳಿವಿಗಾಗಿ ಹೋರಾಡುವ ಕ್ಷತ್ರಿಯರು ದೇಶದ ರಕ್ಷಣೆಗೂ ನೀಡಿದ ಕೊಡುಗೆ ಅನನ್ಯವಾಗಿದೆ ಎಂದರು.
ಗಡಿಯೊಳಗಷ್ಟೇ ಉಗ್ರ ಚಟುವಟಿಕೆ: 10 ವರ್ಷಗಳಲ್ಲಿ ದೇಶದ ಗಡಿಭಾಗಳಲ್ಲಿ ಬಿಟ್ಟರೆ ದೇಶದೊಳಗಡೆ ಎಲ್ಲೂ ಉಗ್ರ ಚಟುವಟಿಕೆ ನಡೆದಿಲ್ಲ. ಈ ಹಿಂದೆ ಮುಂಬಯಿ, ವಾರಾಣಸಿ, ಹುಬ್ಬಳ್ಳಿ, ಬೆಂಗಳೂರು, ಪುಣೆ ಸೇರಿ ಹಲವು ಪ್ರದೇಶಗಳಲ್ಲಿ ಉಗ್ರರು ದಾಳಿ ಮಾಡಿದ್ದರು. ಮೊನ್ನೆ ನಡೆದ ಘಟನೆಗೆ ಉಗ್ರರು ನೆನಪಿಡುವಂತಹ ಶಿಕ್ಷೆಯನ್ನು ಭಾರತ ಕೊಟ್ಟೇ ಕೊಡುತ್ತದೆ ಎಂದರು.
ಭಾರತ ಇದೀಗ ಜಗತ್ತಿನಲ್ಲಿ 4ನೇ ಮಿಲಿಟರಿ ಶಕ್ತಿ ಹೊಂದಿರುವ ದೇಶವಾಗಿದ್ದು, ಆರ್ಥಿಕವಾಗಿಯೂ ಮುಂಬರುವ ದಿನಗಳಲ್ಲಿ 3ನೇ ಸ್ಥಾನಕ್ಕೇರಲಿದೆ ಎಂದು ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ದೇಶ ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರಕ್ಕೆ ಎಲ್ಲರೂ ಒಗ್ಗಟ್ಟಾಗುವ ಕಾಲ ಬಂದಿದೆ. ಜಾತಿಗಳನ್ನು ಮರೆತು ಹಿಂದೂಗಳೆಂಬುದನ್ನು ಅರಿತು ಒಂದುಗೂಡಬೇಕು ಎಂದು ಹೇಳಿದರು.
ಬೆಳಗ್ಗೆ ಟ್ರಸ್ಟ್ ಕಮಿಟಿ ಪದಾಧಿಕಾರಿಗಳು, ಸದಸ್ಯರು ಹಾಗೂ ಶಾಸಕ ಮಹೇಶ ಟೆಂಗಿನಕಾಯಿ ಸಂಕಲ್ಪ ಪೂಜೆ ಸಲ್ಲಿಸಿ ವಿಶ್ವ ಕಲ್ಯಾಣಾರ್ಥ, ಹಿಂದು ಧರ್ಮ, ದೇಶದ ಸಬಲತೆಗಾಗಿ ಸಂಕಲ್ಪ ಮಾಡಿದರು.ಇದೇ ವೇಳೆ ₹5.50 ಕೋಟಿ ವೆಚ್ಚದಲ್ಲಿ ನಿರ್ಮಿಸಿದ ಶ್ರೀ ದುರ್ಗಾದೇವಿ ಕಲ್ಯಾಣಮಂಟಪವನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಲೋಕಾರ್ಪಣೆಗೊಳಿಸಿದರು.
ಎಸ್‌ಎಸ್‌ಕೆ ಪಂಚ ಟ್ರಸ್ಟ್ ಕಮಿಟಿ ಗೌರವ ಕಾರ್ಯದರ್ಶಿ ಭಾಸ್ಕರ ಜಿತೂರಿ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟ್ ಕಮಿಟಿಯ ಜಾಯಿಂಟ್ ಟ್ರಸ್ಟಿ ನೀಲಕಂಠ ಜಡಿ, ಟ್ರಸ್ಟಿ ತಾರಾಸಾ ಧೋಂಗಡಿ, ಕೋಶಾಧಿಕಾರಿ ಅಶೋಕ ಕಲಬುರ್ಗಿ, ಮಾಜಿ ಶಾಸಕ ಅಶೋಕ ಕಾಟವೆ, ಸತೀಶ ಮೆಹರವಾಡೆ, ನಾಗೇಂದ್ರ ಹಬೀಬ, ಅಶೋಕ ಪವಾರ, ಎಸ್‌ಎಸ್‌ಕೆ ಕೋ ಆಪ್ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಲದ್ವಾ, ಎಸ್‌ಎಸ್‌ಕೆ ಸಮಾಜ ರಾಜ್ಯ ಅಧ್ಯಕ್ಷ ಶಶಿಕುಮಾರ ಮೆಹರವಾಡೆ, ಪ್ರಕಾಶ ಬುರಬುರೆ, ಅಶೋಕ ಹಬೀಬ, ನಾಗೇಶ ಕಲಬುರ್ಗಿ, ಗಣೇಶ ಶೇಟ್, ನಿವೃತ್ತ ಎಸ್‌ಪಿ ವೈ.ಟಿ. ಮಿಸ್ಕಿನ್, ಸಹಸ್ರಯಾಗ ಕಾರ್ಯಕ್ರಮಗಳ ನೇತೃತ್ವ ವಹಿಸಿರುವ ಚಂದ್ರೇಶ ಶರ್ಮಾ ಸೇರಿದಂತೆ ಹಲವು ಮುಖಂಡರು ಇದ್ದರು.